ಕುರಿ ಸಾಕಾಣಿಕೆದಾರರ ಸಹಕಾರ ಸಂಘಗಳ ಸದಸ್ಯರಿಗೆ ಡಿಸಿಸಿ ಬ್ಯಾಂಕ್ ಸಾಲ ಸೌಲಭ್ಯ- ಪಾರದರ್ಶಕ ವಹಿವಾಟಿನಿಂದ ಆರ್ಥಿಕ ಸದೃಢತೆ ಸಾಧಿಸಿ:ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳು ತಮ್ಮ ವಹಿವಾಟಿನಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢಗೊಳ್ಳಬೇಕು, ಸದರಿ ಸಂಘಗಳ ಸದಸ್ಯರಿಗೆ ಅಗತ್ಯವಾದ ಸಾಲ ಸೌಲಭ್ಯ ಕಲ್ಪಿಸಲು ಸಿದ್ದವಿರುವುದಾಗಿ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಭರವಸೆ ನೀಡಿದರು.
ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಸಹಕಾರ ಮಹಾಹಂಡಳ, ಜಿಲ್ಲಾ ಸಹಕಾರಿ ಯೂನಿಯನ್, ಕೋಲಾರ ಕುರಿ ಮತ್ತು ಉಣ್ಣೆ ಅಭಿವೃದ್ದಿ ಯೋಜನೆ, ಸಹಕಾರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು,ನಿರ್ದೇಶಕರು ಹಾಗೂ ಸಿಇಒಗಳಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸಹಕಾರ ಕ್ಷೇತ್ರ ಇಂದು ವಿಸ್ತಾರವಾಗಿದೆ, ಬಡವರು, ಮಹಿಳೆಯರು,ರೈತರ ಬದುಕಿಗೆ ಬೆನ್ನೆಲುಬಾಗಿ ಬೆಳೆದಿದೆ ಎಂದ ಅವರು, ಸಮಾಜದ ಪ್ರತಿಕುಟುಂಬವೂ ಸಹಕಾರ ರಂಗದ ಸದಸ್ಯತ್ವ ಪಡೆಯುವಂತಾಗಬೇಕು ಎಂದು ಕಿವಿಮಾತುಹೇಳಿದರು.
ಕುರಿ ಅಭಿವೃದ್ದಿ ಮಂಡಳಿಯಿಂದ ಕುರಿ ಸಾಕಾಣಿಕೆದಾರರಿಗೆ 40 ಸಾವಿರ ರೂ ಸಹಾಯಧನ ನೀಡುತ್ತಿದ್ದು, ಫಲಾನುಭವಿಗಳ ಪಾಲಿನ ಹಣವನ್ನು ಸಾಲವಾಗಿ ಒದಗಿಸಲು ಬ್ಯಾಂಕ್ ಸಿದ್ದವಿದ್ದು, ಬಡವರು,ಮಹಿಳೆಯರು ಆರ್ಥಿಕವಾಗಿ ಬಲಗೊಂಡು ಉತ್ತಮ ಬದುಕು ಕಟ್ಟಿಕೊಳ್ಳುವ ಕಾರ್ಯಕ್ಕೆ ಡಿಸಿಸಿ ಬ್ಯಾಂಕ್ ಸದಾ ನೆರವಿಗೆ ನಿಲ್ಲುತ್ತದೆ ಎಂದು ತಿಳಿಸಿದರು.


ತರಬೇತಿ ಮೂಲಕ ಸಂಘ ಬಲಗೊಳಿಸಿ


ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಮೂರಾಂಡಹಳ್ಳಿ ಗೋಪಾಲಪ್ಪ ಅಧ್ಯಕ್ಷತೆ ವಹಿಸಿ ಮಾತಮಾಡಿಕ, ಸಹಕಾರ ಸಂಘವನ್ನು ಮುನ್ನಡೆಸುವಾಗ ಆರ್ಥಿಕ ಸಾಕ್ಷರತೆ ಅಗತ್ಯವಿದೆ, ವಹಿವಾಟಿನಲ್ಲಿನೀವು ಪಾರದರ್ಶಕತೆ ಕಾಪಾಡಿಕೊಳ್ಳಬೇಕು, ಅದಕ್ಕೆ ಸಂಬಂಧಿಸಿದಂತೆ ಆಡಿಟ್, ದಾಖಲೆಗಳ ನಿರ್ವಹಣೆ ಕುರಿತು ತರಬೇತಿಯಲ್ಲಿ ಅರಿವು ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸಹಕಾರಿ ರಂಗವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಹಕಾರಿ ಯೂನಿಯನ್ನು ವರ್ಷ ಪೂರ್ತಿ ಸಹಕಾರ ಸಂಘಗಳ ನಿರ್ವಹಣೆ ಕುರಿತಂತೆ ತರಬೇತಿ ನೀಡುತ್ತಾ ಬಂದಿದೆ, ವಿಸ್ತಾರವಾಗಿರುವ ಸಹಕಾರ ರಂಗದ ಕುರಿತು ಎಲ್ಲರಿಗೂ ಅರಿವು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಸಹಕಾರ ತತ್ವ ಇಂದು ಸಮಾಜದ ಕಟ್ಟಕಡೆಯ ಬಡವನಿಗೂ ನೆರವು ಒದಗಿಸುವ ಶಕ್ತಿ ಹೊಂದಿದೆ, ವಾಣಿಜ್ಯ ಬ್ಯಾಂಕುಗಳಂತೆ ದಾಖಲೆಗಳಿಗಾಗಿ ಅಲೆದಾಡಿಸುವುದು, ಮಾನಸಿಕ ಹಿಂಸೆಗೆ ಗುರಿ ಮಾಡದ ಕ್ಷೇತ್ರವಾಗಿದ್ದು, ಸಹಕಾರಿ ರಂಗದ ಕುರಿತು ಮತ್ತಷ್ಟು ನಂಬಿಕೆ ಬಲಗೊಳಿಸಲು ಎಲ್ಲಾ ಸಂಘಗಳ ಗಣಕೀಕರಣ,ಗಣಕೀಕೃತ ವಹಿವಾಟು ಅಗತ್ಯವಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಬಂಗಾರಪೇಟೆ ಟಿಎಪಿಸಿಎಂಎಸ್ ಹಿರಿಯ ನಿರೀಕ್ಷಕ ಎಂ.ಜಗದೀಶ್, ಸಹಕಾರ ಸಂಘಗಳ ಚುನಾವಣೆಗೆ ಸಂಬಂಧಿಸಿದಂತೆ ಪೂರ್ವಸಿದ್ದತಾ ಕ್ರಮಗಳು, ಇತ್ತೀಚಿನ ಕಾನೂನು ತಿದ್ದುಪಡಿಗಳೂ, ಸಿಇಒಗಳ ಕರ್ತವ್ಯಗಳ ಕುರಿತು ಮಾಹಿತಿ ಒದಗಿಸಿದರು.
ಕುರಿಮತ್ತುಉಣ್ಣೆ ಯೋಜನೆ ಅಧೀಕ್ಷಕ ಡಾ.ಸುದರ್ಶನ್,ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಮಂಡಳಿಯಿಂದ 20ಹೆಣ್ಣು ಕುರಿ ಒಂದು ಗಂಡು ಕುರಿ ಯೋಜನೆಯಡಿ ಕುರಿ ಸಾಕಾಣಿಕೆದಾರರ ಸಂಘದ ಸದಸ್ಯ ಫಲಾನುಭವಿಗಳಿಗೆ 40 ಸಾವಿರ ರೂ ಸಹಾಯಧನ ನೀಡುತ್ತಿದ್ದು, ಕುರಿ ಸಾಕಾಣಿಕೆದಾರರ ಸಂಘದ ಫಲಾನುಭವಿಯ ಪಾಲಿನ ಹಣವನ್ನು ಡಿಸಿಸಿ ಬ್ಯಾಂಕ್ ಮಹಿಳಾ ಸಂಘಗಳಿಗೆ ನೀಡುವ ರೀತಿಯಲ್ಲಿ ಸಾಲದ ರೂಪದಲ್ಲಿ ಒದಗಿಸಬೇಕು ಎಂದು ಮನವಿ ಮಾಡಿದರು.
ಮಂಡಳಿಯಿಂದ ಕುರಿಗಾಹಿಗಳಿಗೆ ವಿಮೆ ಸೌಲಭ್ಯ ಒದಗಿಸಲಾಗುತ್ತಿದೆ, ಕುರಿ ಸಾಕಾಣಿಕೆದಾರರಿಗೆ ಅಗತ್ಯವಾದ ಟೆಂಟ್, ಟಾರ್ಚ್ ವಿತರಿಸಲಾಗುತ್ತಿದೆ ಎಂದ ಅವರು ಕುರಿ ಸತ್ತರೆ ಒಂದು ಕುರಿಗೆ 5 ಸಾವಿರ ರೂ ನೆರವು ನೀಡಲಾಗುತ್ತಿದೆ ಎಂದು ವಿವರಿಸಿದರು.
ಸಹಕಾರಿ ಯೂನಿಯನ್ ಉಪಾಧ್ಯಕ್ಷ ಟಿ.ಕೆ.ಬೈರೇಗೌಡ,ನಿರ್ದೇಶಕ ಉರಿಗಿಲಿ ರುದ್ರಸ್ವಾಮಿ ಮಾತನಾಡಿ, ಕುರಿ ಸಾಕಾಣಿಕೆ ಇಂದು ಒಂದು ಸ್ವಾವಲಂಬಿ ಕಸುಬಾಗಿದ್ದು, ಬದುಕು ಕಟ್ಟಿಕೊಳ್ಳಲು ಅತ್ಯಂತ ಉತ್ತಮ ಉದ್ಯೋಗವಾಗಿದೆ ಎಂದು ತಿಳಿಸಿ, ಇದಕ್ಕೆ ಡಿಸಿಸಿ ಬ್ಯಾಂಕ್ ಸಾಲ ಸೌಲಭ್ಯ ನೀಡಬೇಕು ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಸಿಇಇಒ ಕೆ.ಎಂ.ಭಾರತಿ ನಿರೂಪಿಸಿ,ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಯೂನಿಯನ್ ನಿರ್ದೇಶಕರಾದ ಡಿ.ಆರ್.ರಾಮಚಂದ್ರೇಗೌಡ, ಅಣ್ಣಿಹಳ್ಳಿ ನಾಗರಾಜ್, ಅರುಣಮ್ಮ, ಕುರಿ ಸಾಕಾಣಿಕೆದಾರರ ಸಂಘದ ಬಾಲಕೃಷ್ಣ, ಯೂನಿಯನ್ ಲಕ್ಷ್ಮಿ,ರವಿ ಮತ್ತಿತರರು ಉಪಸ್ಥಿತರಿದ್ದು, ಜಿಲ್ಲೆಯ ವಿವಿಧ ತಾಲ್ಲೂಕುಗಳ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು,ನಿರ್ದೇಶಕರು ಹಾಗೂ ಸಿಇಒಗಳು ಹಾಜರಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವಾದ ಮಾಡಬೇಕು:ಜಿ.ಕೆ. ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು  ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಮನವಿ ಮಾಡಿದರು.

ತಾಲ್ಲೂಕಿನ ಉಪ್ಪರಪಲ್ಲಿ ಗ್ರಾಮದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ‘ಇದು ನನ್ನ ಕೊನೆ ಚುನಾವಣೆ. ಮತದಾರರು ನನಗೆ ಮತ ನೀಡುವುದರ ಮೂಲಕ ಆಶೀರ್ವಾದ ಮಾಡಬೇಕು’ ಎಂದು ಕೋರಿದರು.

  ತಾಲ್ಲೂಕಿನಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಏನಾದರೂ ಅಭಿವೃದ್ಧಿ ಆಗಿದ್ದರೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಾತ್ರ. ಇದು ಜನರಿಗೆ ತಿಳಿಯದ ವಿಷಯವಲ್ಲ. ಆದರೆ ಕೆಲವರು ನನ್ನ ವಿಷಯದಲ್ಲಿ ಅನಗತ್ಯ ಟೀಕೆ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಸರ್ಕಾರದ ಸೌಲಭ್ಯ ಸಮರ್ಪಕವಾಗಿ ವಿತರಣೆ ಮಾಡಲಾಗಿಲ್ಲ. ಮನೆ ಮಂಜೂರು ಮಾಡುವುದರಲ್ಲೂ ಪಕ್ಷಪಾತ ಮಾಡಲಾಗಿದೆ. ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ಕೃಷಿ ಕೊಳವೆ ಬಾವಿ ಮಂಜೂರು ಮಾಡಲಾಗಿಲ್ಲ ಎಂದು ಹೇಳಿದರು.

  ಹತ್ತು ವರ್ಷ ಕಳೆದರೂ ತಾಲ್ಲೂಕಿನ ಹೆಚ್ಚು ಸಂಖ್ಯೆಯ ಮತದಾರರು ನನ್ನ ಕಡೆ ಇದ್ದಾರೆ. ಬದಲಾವಣೆ ಬಯಸುತ್ತಿದ್ದಾರೆ. ಈ ವಿಷಯ ವಿರೋಧಿಗಳು ಅರ್ಥ ಮಾಡಿಕೊಳ್ಳಬೇಕು. ಹೆಸರು ಹೇಳದೆ ಬಾಯಿಗೆ ಬಂದAತೆ ಮಾತನಾಡುವುದಲ್ಲ ಎಂದು ಹೇಳಿದರು.

  ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ. ಶಿವಾರೆಡ್ಡಿ ಮಾತನಾಡಿ, ಡಿಸಿಸಿ ಬ್ಯಾಂಕ್ ಸಾಲ ಪಡೆದವರ ಮತಗಳನ್ನು ನೆಚ್ಚಿಕೊಂಡು ಗೆಲುವು ನಿರೀಕ್ಷಿಸುವ ಕಾಲ ಇದಲ್ಲ. ಈಗ ಮತದಾರರು ಬದಲಾಗಿದ್ದಾರೆ. ಡಿಸಿಸಿ ಬ್ಯಾಂಕ್ ನೀಡುವ ಸಾಲದ ಹಣ ಯಾರು ನೀಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಯಾರೂ ತಮ್ಮ ಜೇಬಿನಿಂದ ತೆಗೆದು ಕೊಟ್ಟಂತೆ ಮಾತನಾಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.

  ತಾಲ್ಲೂಕಿನಲ್ಲಿ ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದೆ. ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಆರಿಸಿಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರು ಗೆಲುವು ನಿಶ್ಚತಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ನೇತೃತ್ವದಲ್ಲಿ ಉಪರಪ್ಪಲ್ಲಿ ಗ್ರಾಮದ ನಾರಾಯಣಸ್ವಾಮಿ, ಚಿನ್ನಪ್ಪಲ್ಲ, ಮಹೇಶ್, ಮ್ಯಾಕಲನ್ನಗಾರಿ ಕಿಟ್ಟನ್ನ, ಕದಿರಂಪಲ್ಲಿ ಗ್ರಾಮದ ಬೋಡಲ್ಲ ಮುನಿಸ್ವಾಮಿ, ಭದ್ರಪ್ಪಗಾರಿ ಶಂಕರಪ್ಪ, ಮುಂತಗೋಕಲ ವೆಂಕಟ್ರಾಯಪ್ಪ, ಗುಡಿಸಿವಾರಿಪಲ್ಲಿ ಗ್ರಾಮದ ಶೀತನ್ನಗಾರಿ ರೆಡ್ಡಪ್ಪ, ದೇವಲಪಲ್ಲಿ ನರಸಿಂಹಡು, ರಾಮಾಂಜಿ, ಬಲ್ತಮರಿ ಗ್ರಾಮದ ಪಲ್ಲಿಗಡ್ಡ ನರಸಿಂಹಪ್ಪ, ಮಂಜು, ಆಂಜನೇಯರೆಡ್ಡಿ, ರೆಡ್ಡಪ್ಪ,  ಗುರುವಲ್ಲೋಳ್ಳಗಡ್ಡ ಮಂಜುನಾಥ್, ದಿಗವ ಚಿಂತಪಲ್ಲಿ ಯಲ್ಲಪ್ಪ, ವೆಂಕಟರೆಡ್ಡಿ ವೆಂಕಟರವಣ, ಸೇರ್ಪಡೆಗೊಂಡರು. 

  ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಂ.ವಿ.ಶ್ರೀನಿವಾಸ್, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಿ ಮುತ್ತಪ್ಪ, ಮುಖಂಡರಾದ ದಿಗವ ಚಿಂತಪಲ್ಲಿ ವಿ.ನಾಗಬೋಷನ್, ಕೃಷ್ಣಾರೆಡ್ಡಿ, ಬಾಲಾವತಿ ಜಯರಾಂ, ಕೆ.ವಿ.ಶಿವಾರೆಡ್ಡಿ, ವೈ.ಆರ್.ಶ್ರೀನಿವಾಸರೆಡ್ಡಿ, ಸಿ.ಅಶೋಕ್, ವಿ.ನಾಗಭೂಷಣ್, ಅಜಮ್ ಖಾನ್, ಪೂಲ ಶಿವಾರೆಡ್ಡಿ, ಎಸ್.ಶೇಷಾದ್ರಿ, ಶ್ರೀನಿವಾಸರೆಡ್ಡಿ ಇದ್ದರು.

ಫೆಬ್ರವರಿ 14 ರಂದು ಬೈಂದೂರು ಚರ್ಚಿನ ತೆರಾಲಿ ಹಬ್ಬ- ಕಲ್ವಾರಿ ಬೆಟ್ಟದ ಪ್ರತಿರೂಪದ ಯೋಜನೆಯ ಉದ್ಘಾಟನೆ

ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚಿನ ವಾರ್ಷಿಕ  ತೆರಾಲಿ ಹಬ್ಬವು ಫೆಬ್ರವರಿ 14ನೇ ಮಂಗಳವಾರ ಬೆಳಿಗ್ಗೆ 10.15ಕ್ಕೆ ಚರ್ಚಿನ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊರವರ ನೇತ್ರತ್ವದಲ್ಲಿ ಜರುಗಲಿರುವುದು ಇದಕ್ಕೆ ಪೂರ್ವಭಾವಿಯಾಗಿ ಫೆಬ್ರವರಿ 12 ಭಾನುವಾರ ಸಂಜೆ 4ಕ್ಕೆ ಕೋಂಪ್ರಿ ಫೆಸ್ತ್ ಅಂಗವಾಗಿ ಇರ್ಗಜಿ ವಠಾರದಿಂದ ಯಡ್ತರೆ ತನಕ ಪುರಮೆರವಣಿಗೆ,13ರಂದು ಸಂಜೆ 7ಕ್ಕೆ ಹಬ್ಬದ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳು ಜರುಗಲಿರುವುದು. ಫೆಬ್ರವರಿ 19ರಂದು ಸಂಜೆ4.45ಕ್ಕೆ ಇತಿಹಾಸ ಪ್ರಸಿದ್ಧ ಇಗರ್ಜಿಗುಡ್ಡದ ಮೇಲೆ ನೂತನವಾಗಿ ನಿರ್ಮಿಸಿದ ಕಲ್ವಾರಿ ಬೆಟ್ಟದ ಪ್ರತಿರೂಪದ ಯೋಜನೆಯ ಉದ್ಘಾಟನೆ ಮತ್ತು ಆಶಿರ್ವಚನದ ಜೊತೆಗೆ ಗುಡ್ಡೆ ಫೆಸ್ತ್ ಜರುಗಲಿರುವುದು.

ಮುರುಕಲು ಮನೆಯಲ್ಲಿ ವಾಸಿಸುತ್ತೀರುವ ಕುಟುಂಬಕ್ಕೆ ರೋಜರಿ ಚರ್ಚ್ ಮತ್ತು ಸಮಾಜ ಬಾಂಧವರಿಂದ ಮನೆ ನಿರ್ಮಿಸಿಕೊಟ್ಟು ಹಸ್ತಾಂತರ

ಕುಂದಾಪುರ, ಫೆ.1: ಕುಂದಾಪುರ ರೋಜರಿ ಚರ್ಚ್ ವ್ಯಾಪ್ತಿಗೆ ಒಳಪಟ್ಟ ಹೇರಿಕುದ್ರು ಸೇತುವೆ ಹತ್ತಿರದಲ್ಲಿ ಒಂದು ಬಡ ಕ್ರೈಸ್ತ ಕುಟುಂಬ ಹರಕಲು ಮುರುಕಲು ಮನೆಯಲ್ಲಿ ವಾಸಿಸುತಿತ್ತು. ಮನೆಯ ಅರ್ಧ ಗೋಡೆಗಳ, ಛಾವಣಿ ಇಲ್ಲದೆ ಪ್ಲಾಸ್ಟಿಕ್ ಹೊದಿಕೆ ಮಾತ್ರ ಇದ್ದು, ಮಣ್ಣಿನ ಜಗುಲಿಯಿದ್ದು, ಮಳೆ ಬಿಸಿಲಿನಲ್ಲಿ ಮನೆಯವರು ವಾಸಿಸುತಿದ್ದರು. ಇದು ರೋಜರಿ ಚರ್ಚಿನ ಆಡಳಿತ ಮಂಡಳಿಯ ಗಮನಕ್ಕೆ ಬಂದ ಮೇಲೆ ಇವರ ಮನೆಗೆ ಹೊಸ ರೂಪ ಕೊಡಲು ಶ್ರಮಿಸತೊಡಗಿತು. ಮೊದಲು ರೋಜರಿ ಚರ್ಚಿನ ಐ.ಸಿ.ವೈ.ಎಮ್ (ಯುವ ಸಂಘಟನೆ) ಶ್ರಮದಾನದ ಮೂಲಕ ಮನೆಯನ್ನು ನವೀಕರಿಸುವ ಕೆಲಸಕ್ಕೆ ತೊಡಗಿತು.
ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಅವರ ನಿರ್ದೇಶನದಂತೆ ಈ ಹಿಂದಿನ ಪಾಲನ ಮಂಡಳಿ ಉಪಾಧ್ಯಕ್ಷ ಎಲ್.ಜೆ.ಫೆರ್ನಾಂಡಿಸ್ ಮತ್ತು ಚರ್ಚಿನ ಹಣಕಾಸು ಸಮಿತಿ ಹಣಕಾಸನ್ನು ವ್ಯವಸ್ಥೆ ಮಾಡಿ ನವೀಕರಣಕ್ಕೆ ತೊಡಗಿ ಕೆಲಸಕ್ಕೆ ವೇಗ ಕೊಟ್ಟಿತು. ಬಡ ಬಗ್ಗರಿಗಾಗಿ ಶ್ರಮಿಸುತಿರುವ ಸಂತ ವಿಶೆಂತ್ ಪಾವ್ಲ ಸಮಿತಿ ತಮ್ಮ ನೆರವನ್ನು ನೀಡಲು ಆರಂಭಿಸಿತು. ನಂತರ ಚರ್ಚ್ ಮೂಲಕ ಸಮಾಜ ಬಾಂಧವರಲ್ಲಿ ಹಣಕಾಸಿನ ನೆರವು ಕೇಳಿತು. ಈ ವಿನಂತಿಯನ್ನು ರೋಜರಿ ಚರ್ಚಿನ ಬಾಂಧವರು ಉತ್ತಮವಾಗಿ ಸ್ಪಂದಿಸಿ ಹಣಕಾಸಿನ ನೆರವು ನೀಡಿದರು. ಈ ಉತ್ತಮ ಕಾರ್ಯಕ್ಕೆ ಕ್ರೈಸ್ತರಲ್ಲದೆ ಹಿಂದು ಬಾಂಧವರು ಸ್ಪಂದಿಸಿ ಹಣಕಾಸು ಇನ್ನಿತರ ನೆರವು ನೀಡಿ ಸಹಕರಿಸಿತು. ಅದರಂತೆ ಸುಮಾರು 4 ಲಕ್ಷದ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿ ಜನವರಿ 31 ರಂದು ಮನೆಯನ್ನು ವಂ|ಸ್ಟ್ಯಾನಿ ತಾವ್ರೊ ಆಶಿರ್ವದಿಸಿ ಮನೆಯವರಿಗೆ ಹಸ್ತಾಂತರಿಸಿದರು.
“ಈ ಮೊದಲು ಈ ಮನೆಯವರು ವಾಸಿಸಲು ಅಯೋಗ್ಯವಾದ ಮನೆಯಲ್ಲಿ ವಾಸಿಸುತ್ತಿದ್ದರು. ಈ ಮನೆಯಲ್ಲಿ ಪ್ರಾಯಸ್ಥೆಯಾದ ಜುಲಿಯಾನ ಡಿಆಲ್ಮೇಡಾ, ಮಗ ಅಸ್ಟಿನ್ ಇವರ ಪತ್ನಿ ಲವೀನಾ ಮತ್ತು ಚಿಕ್ಕ ಮಗಳು ವಾಸಿಸುತ್ತಿದ್ದು, ಅಸ್ಟಿನ್ ಚಿಕ್ಕ ಮನೆ ಕಟ್ಟಬೇಕೆಂದು ಅಡಿಪಾಯ ಹಾಕಿ ಅರ್ಧ ಗೋಡೆಗಳು ಮೇಲಕ್ಕೆ ಬಂದಿದ್ದವಷ್ಟೆ, ದುಡಿದು ಜೀವನ ಸಾಗಿಸುತಿದ್ದ ಅಸ್ಟಿನ್ ಬರಸಿಡಿಲನಂತೆ, ಕೆನ್ಸರ್ ಎಂಬ ಮಹಾ ಮಾರಿಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿದರು. ಚಿಕಿತ್ಸೆಗೆ ಹಣ, ಮತ್ತು ಮನೆ ನಿರ್ಮಾಣ ಮಾಡಲು ಹಣಕ್ಕೆ ಬಹಳ ಅಡಚಣೆಯಾಗಿ, ಮನೆ ಅರ್ಧದಲ್ಲೆ ನಿಂತಿತು. ಇದೀಗ ನಮ್ಮ ಬಾಂಧವರು ಮತ್ತು ಹಿಂದು ಬಾಂಧವರು ಮಾನವೀಯತೆ ಮೆರೆದು ಈ ಮನೆಯ ಯೋಜನೆ ಸಾಕಾರವಾಗಿದೆ. ದುಡಿಯವರು ಯಾರು ಇಲ್ಲದ ತರುಣ ಅಸ್ಟಿನ್‍ಗೆ ಈ ಮೊದಲೇ ಎರಡು ಮೂರು ಶಸ್ತ್ರ ಚಿಕಿತ್ಸೆ ಆಗಿದ್ದು, ಮತ್ತೊಂದು ಬಾಕಿ ಇದೆ. ಈ ಮನೆಯವರಿಗೆ ಮನೆ ಕಟ್ಟಲು ಅನೇಕರು ಸಹಾಯ ಧನ, ಮನೆಗೆ ಉಪಯೋಗಕ್ಕೆ ಬೀಳುವ ಉಪಕರಣಗಳು, ಉಚಿತ ಪೈಟಿಂಗ್ ಹೀಗೆ ಹಲಾವಾರು ಜನರ್‍ಉ ಧರ್ಮ ಭೇದವಿಲ್ಲದೆ ಸಹಕರಿಸಿದ್ದಾರೆ, ನಿಮ್ಮೆಲ್ಲರ ಸಹಕಾರದಿಂದ ಅತೀ ಶೀಘ್ರದಲ್ಲಿ ಈ ಮನೆಯ ಯೋಜನೆನ್ನು ಸಾಕಾರ ಗೊಳಿಸಿ ಹಸ್ತಾಂತರ ಮಾಡಲು ಸಹಕರಿಸಿದ, ಎಲ್ಲರಿಗೂ ಅವರು ಕ್ರತ್ಞತೆ ಸಲ್ಲಿಸಿದರು.
ಈ ಮನೆಯ ನಿರ್ಮಾಣದಲ್ಲಿ ಮೊದಲಿನಿಂದಲೂ ತೊಡಗಿಸಿಕೊಂಡ ಈ ಹಿಂದಿನ ಚರ್ಚಿನ ಉಪಾಧ್ಯಕ್ಷರಾದ ಎಲ್.ಜೆ.ಫೆರ್ನಾಂಡಿಸ್ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಈ ಸಾಲಿನ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಶುಭ ಕೋರಿದರು. ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ವಾಳೆಯ ಗುರಿಕಾರ್ ಜೂಲಿಯಾನ ಮಿನೆಜೆಸ್, ದಿನಕರ ಆರ್. ಶೆಟ್ಟಿ, ಗಂಗಾದರ ಶೆಟ್ಟಿ, ಅಭಿಜಿತ್ ಪೂಜಾರಿ, ವಿಶೆಂತ್ ಪಾವ್ಲ್ ಸಮಿತಿಯ ಅಧ್ಯಕ್ಷೆ ಸೆರಾಫಿನ್ ಡಿಸಿಲ್ವಾ ಮತ್ತು ಸದಸ್ಯರು, ಐ.ಸಿ.ವೈ.ಎಮ್ ಸದಸ್ಯರು, ಇಂಜಿನಿಯರ್ ವಾಲ್ಟರ್ ಡಿಸೋಜಾ, ಎಮ್.ಸಿ.ಸಿ. ಬ್ಯಾಂಕಿನ ನಿರ್ದೇಶಕ ಕಿರಣ್ ಕ್ರಾಸ್ತಾ,
ಹಿಂದಿನ ಮತ್ತು ಈ ಸಾಲಿನ ಫೈನಾನ್ಸ್ ಕಮಿಟಿಯ ಸದಸ್ಯರು, ದಾನಿಗಳು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ಲಯನ್ಸ್ ರೇಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ವಾಳೆಯ ಪ್ರತಿನಿಧಿ ಒಲಿವೀಯಾ ಫೆರ್ನಾಂಡಿಸ್ ವಂದಿಸಿದರು.