ಹೈನುಗಾರಿಕೆಗೆ ರಾಮಕೃಷ್ಣ ಕೊಠಾರಿ ಹಾಗೂ ಮುಕಾಂಬು ಕೊಠಾರಿ ದಂಪತಿಗೆ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದಿಂದ ಸಮ್ಮಾನ

“ವೃತ್ತಿಪರ ಸೇವೆಯ ಮಾಸ”ದ ಅಂಗವಾಗಿ ರೋಟರಿ ಕ್ಲಬ್ ಕುಂದಾಪುರ ದಕ್ಷಿಣವು ಹೈನುಗಾರಿಕೆಯಲ್ಲಿ ಜೀವನ ಸಾಗಿಸುತ್ತಿರುವ ಶ್ರಮ ಜೀವಿಗಳಾದ ಹಂಗಳೂರಿನ ರಾಮಕೃಷ್ಣ ಕೊಠಾರಿ ಹಾಗೂ ಮುಕಾಂಬು ಕೊಠಾರಿ ದಂಪತಿಯನ್ನು ಗೌರವಿಸಿ ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಕಾರ್ಯದರ್ಶಿ ಸಚಿನ್ ನಕ್ಕತ್ತಾಯ, ರೊ. ಸುರೇಖ ಪುರಾಣಿಕ, ಮಾಜಿ ಅಧ್ಯಕ್ಷರುಗಳಾದ ರೊ.ಯು. ಎಸ್. ಶೆಣೈ , ರೊ. ಪಾಂಡುರಂಗ ಭಟ್, ತಲ್ಲೂರು ಸಮುದಾಯ ದಳದ ಅಧ್ಯಕ್ಷ ಜಗದೀಶ ಆಚಾರ್ಯ, ಕಾರ್ಯದರ್ಶಿ ಸದಾನಂದ ಆಚಾರ್ಯ ಹಾಗೂ ರೋಟರಿ ಮತ್ತು ಸಮುದಾಯ ದಳದ ಸದಸ್ಯರು ಉಪಸ್ಥಿತರಿದ್ದರು.

ಫೆ.5ರಂದು ಕುಲಶೇಖರ ಚರ್ಚ್ ಸಭಾಭವನದಲ್ಲಿ 15ನೇ ಸ್ಟ್ಯಾನ್ ನೈಟ್

ನೀರುಮಾರ್ಗ ಕೆಲರಾಯ್ ಸಂತ ಅನ್ನ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ವಿದ್ಯಾಭ್ಯಾಸದ ಸಹಾಯಾರ್ಥವಾಗಿ ಆಲ್ಫ್ರೆಡ್ ಬೆನ್ನಿಸ್ ಕ್ರಿಯೇಶನ್ಸ್ ಮಂಗಳೂರು ಪ್ರಸ್ತುತಪಡಿಸುವ  15ನೇ  ಸ್ಟ್ಯಾನ್  ನೈಟ್ ಕಾರ್ಯಕ್ರಮವನ್ನು ಫೆಬ್ರವರಿ 5ರಂದು ಆದಿತ್ಯವಾರ ಕುಲಶೇಖರ ಚರ್ಚ್ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಸಂಜೆ ಗಂಟೆ. 6.೦೦ರಿಂದ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಮಂಗಳೂರಿನ ಹೆಸರಾಂತ ಗಾಯಕ-ಗಾಯಕಿರಿಂದ ಸಂಗೀತ ರಸಮಂಜರಿ, ಜೊಪ್ಪಿನ್ ಪಪ್ವಾನರಿಂದ ಸಂಗೀತ , ಮೆಮರಿ ಮಂಗಳೂರು ಕಲಾವಿದರಿಂದ ಹಾಸ್ಯ ಕಾರ್ಯಕ್ರಮ, ದೀಪಕ್ ಬೆಂದೂರ್‌ವೆಲ್ ಅವರಿಂದ ನೃತ್ಯ . ಒಂದೇ ವೇದಿಕೆಯಲ್ಲಿ ಪ್ರೇಕ್ಷಕರಿಗೆ ವಿವಿಧ ಮನೋರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಕೊಂಕಣಿ ಭಾಷಿಕರ ಹೆಸರಾಂತ ಕಾರ್ಯನಿರ್ವಾಹಕ ಶ್ರೀಯುತ ಲೆಸ್ಲಿ ರೇಗೊ ಕಾರ್ಯಕ್ರಮ ನಿರೂಪಿಸಲಿದ್ದಾರೆ.  ಸರ್ವರಿಗೂ ಉಚಿತ ಪ್ರವೇಶಾವಕಾಶ ಇರುತ್ತದೆ.

ಕೋಲಾರ ಎಸ್.ಎನ್.ಆರ್.ಜಿಲ್ಲಾಸ್ಪತ್ರೆ ಆರವಣದಲ್ಲಿದ್ದ ಹಳೆಯ ಎತ್ತರದ ನೀರಿನ ಟ್ಯಾಂಕನ್ನು ಸುರಕ್ಷಿತವಾಗಿ ಧರೆಗುರುಳಿಸಿ ಧ್ವಂಸಗೊಳಿಸಲಾಯಿತು


ಸುಮಾರು ೩೦ ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ೫೦ ಸಾವಿರ ಲೀಟರ್ ನೀರಿನ ಸಾಮರ್ಥ್ಯದ ಈ ಟ್ಯಾಂಕ್‌ನ ೫ ಆಧಾರಸ್ಥಂಬಗಳು ಬಹುತೇಕ ಶಿಥಿಲಾವಸ್ಥೆ ತಲುಪಿದ್ದವು. ಜೊತೆಗೆ ಪಕ್ಕದ ಪಾರ್ಕಿಂಗ್ ಜಾಗದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣದ ಕಾಮಗಾರಿಯು ನಡೆಯಲಿದ್ದು, ಈಗಾಗಲೇ ಇದ್ದ ಮರಗಳು ಹಾಗೂ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾಗಿದೆ.
ಗುರುವಾರ ಬೆಳಗ್ಗೆ ಟ್ಯಾಂಕ್‌ನ ಸಮೀಪದ ಪಾರ್ಕಿಂಗ್‌ನಲ್ಲಿದ್ದ ವಾಹನಗಳನ್ನು ಹಾಗೂ ಸಾರ್ವಜನಿಕರನ್ನು ಮತ್ತು ಅಕ್ಕಪಕ್ಕದ ಕಟ್ಟಡಗಳಲ್ಲಿದ್ದ ಜನರನ್ನು ತೆರವುಗೊಳಿಸಿ, ಹಿಟಾಚಿ ಮೂಲಕ ಟ್ಯಾಂಕ್‌ನ ಎರಡು ಆಧಾರ ಕಂಬಗಳನ್ನು ಜಖಂಗೊಳಿಸಿ ನಂತರ ಲೋಹದ ಹಗ್ಗ ಕಟ್ಟಿ ಎಳೆಯುವ ಮೂಲಕ ಟ್ಯಾಂಕನ್ನು ಧರೆಗುರುಳಿಸಲಾಯಿತು. ಈ ಸಂದರ್ಭದಲ್ಲಿ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ.

ಶ್ರೀನಿವಾಸಪುರದಲ್ಲಿ ಏರ್ಪಡಿಸಿದ್ದ ಸಿನಿಮಾ ವೀಕ್ಷಕರ ಸಂವಾದ ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ಸಿ.ಎಚ್.ನಾಯಕ್ : ಕಿರು ಚಿತ್ರಗಳು ಹೆಚ್ಚು ಜನಪ್ರಿಯ

ಶ್ರೀನಿವಾಸಪುರ: ಸಾಮಾಜಿಕ ಜಾಲತಾಣದಲ್ಲಿ ಸುಲಭವಾಗಿ ಸಿಗುವ ಕಿರು ಚಿತ್ರಗಳು ಹಾಗೂ ಲಿರಿಕಲ್ ವೀಡಿಯೋಗಳು ಹೆಚ್ಚು ಜನಪ್ರಿಯವಾಗುತ್ತಿವೆ ಎಂದು ಚಲನಚಿತ್ರ ನಿರ್ದೇಶಕ ಸಿ.ಎಚ್.ನಾಯಕ್ ಹೇಳಿದರು.
ಪಟ್ಟಣದ ಎಸ್‍ವಿ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜು ಸಭಾಂಗಣದಲ್ಲಿ ಬೆಂಗಳೂರಿನ ಸಿ.ಎಚ್.ನಾಯಕ್ ಕ್ರಿಯೇಷನ್ಸ್ ವತಿಯಿಂದ ಏರ್ಪಡಿಸಿದ್ದ ಸಿನಿಮಾ ವೀಕ್ಷಕರೊಂದಿಗೆ ಸಂವಾದ ಕಾರ್ಯಕ್ರದಲ್ಲಿ ಮಾತನಾಡಿದರು.
ಈಗ ಕನ್ನಡ ಚಲನ ಚಿತ್ರಗಳು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಭಾರತೀಯ ಚಿತ್ರರಂಗ ಚಂದನ ವನದ ಕಡೆ ತಿರುಗಿ ನೋಡುತ್ತಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಇದರಲ್ಲಿ ಪ್ರೇಕ್ಷಕರ ಪಾಲು ದೊಡ್ಡದು. ಅವರ ಬೆಂಬಲವೇ ಚಿತ್ರ ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರಿಗೆ ಶಕ್ತಿ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಉತ್ತರ ಭಾಗದ ಗುಡ್ಡಗಾಡು ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಅಲ್ಲಿನ ಕಾಡು, ಕಣಿವೆ, ಬೆಟ್ಟ, ಗುಡ್ಡ, ಕೆರೆ, ಕಾಲುವೆಗಳು ಚಿತ್ರೀಕರಣಕ್ಕೆ ಯೋಗ್ಯವಾಗಿವೆ. ಚಿತ್ರೀಕರಣಕ್ಕೆ ಹೊಸ ಸ್ಥಳ ಹುಡುಕುವ ನಿರ್ಮಾಪಕರು ಬಳಸಿಕೊಳ್ಳಬಹುದಾಗಿವೆ. ನಿತ್ಯ ನಿಸರ್ಗ ಸೌಂದರ್ಯದ ನಡುವೆ ಜೀವಿಸುವ ಸ್ಥಳೀಯರು ನಿಜಕ್ಕೂ ಧನ್ಯರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರೀತಿ ಮತ್ತು ಭ್ರಮೆ ನಡುವೆ ಸಾಗುವ ‘ಮತ್ತೆ ಸಿಗುವಳೇನೋ’ ಎಂಬ ಹೆಸರಿನ ಕಿರು ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರದಲ್ಲಿ ಈಗಾಗಲೇ ತಮ್ಮ ಗೀತೆಗಳ ಮೂಲಕ ಜನಪ್ರಿಯವಾಗಿರುವ ಕವಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರ ಭಾವಗೀತೆಯೊಂದನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಿದರು.
ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ತೆಲುಗು ಭಾಷೆ ಪ್ರಭಾವ ಹೆಚ್ಚಾಗಿರುವ ಗಡಿ ಪ್ರದೇಶದಲ್ಲಿ, ಜನರು ಕನ್ನಡ ಚಿತ್ರಗಳ ವೀಕ್ಷಣೆಗೆ ಆದ್ಯತೆ ನೀಡಬೇಕು. ಕನ್ನಡ ಭಾಷೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕಿರುಚಿತ್ರಗಳ ವೀಕ್ಷಣೆಯಿಂದ, ಇದ್ದಲ್ಲಿಯೇ ಕಡಿಮೆ ಅವಧಿಯಲ್ಲಿ ಪೂರ್ಣ ಚಿತ್ರವೊಂದನ್ನು ವೀಕ್ಷಿಸಿದ ತೃಪ್ತಿ ದೊರೆಯುತ್ತಿದೆ. ಚಿತ್ರದ ಸಂದೇಶ ಗ್ರಹಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಚಿತ್ರ ಪ್ರೇಮಿಗಳೊಂದಿಗೆ ಸಂವಾದ ನಡೆಸಲಾಯಿತು.
ಕವಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ, ಸಹಾಯಕ ನಿರ್ದೇಶಕ ರಾಜಶೇಖರ್, ಸಂಕಲನಕಾರ ನಿಶಾಂತ್ ಕುಮಾರ್, ಚಂದನ್ ಇದ್ದರು.

ಜನರು ಕುಷ್ಠರೊಗವನ್ನು ಬೇರು ಸಹಿತ ಕಿತ್ತೊಗೆದು ಇತಿಹಾಸ ನಿರ್ಮಿಸಬೇಕು : ಆಂಜಿಲಮ್ಮ

ಶ್ರೀನಿವಾಸಪುರ: ಜನರು ಕುಷ್ಠರೊಗವನ್ನು ಬೇರು ಸಹಿತ ಕಿತ್ತೊಗೆದು ಇತಿಹಾಸ ನಿರ್ಮಿಸಬೇಕು ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಂಜಿಲಮ್ಮ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ರೋಗ ಪಾಪದ ಫಲ ಎಂಬುದರಲ್ಲಿ ಹುರುಳಿಲ್ಲ. ಎಲ್ಲ ಕಾಯಿಲೆಗಳಂತೆ ಇದೂ ಸಹ ಒಂದು ಕಾಯಿಲೆ ಎಂದು ತಿಳಿಯಬೇಕು ಎಂದು ಹೇಳಿದರು.
ಕುಷ್ಠರೋಗಿ ಸಮಾಜದ ಒಳಗೆ ಬದುಕಲು ಬಿಡಬೇಕು. ರೋಗ ವಾಸಿಯಾಗಲು ಅಗತ್ಯ ಚಿಕಿತ್ಸೆ ಕೊಡಿಸಬೇಕು. ಯಾವುದೇ ಕಾರಣಕ್ಕೂ ಅವರನ್ನು ಕೀಳಾಗಿ ಕಾಣಬಾರದು. ಮಾನವೀಯತೆಯಿಂದ ನೋಡಿಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ, ನಾಗರಿಕರ ಆರೋಗ್ಯ ರಕ್ಷಣೆಯಲ್ಲಿ ಪೌರ ಕಾರ್ಮಿಕರ ಪಾತ್ರ ಹಿರಿದು. ಪೌರ ಕಾರ್ಮಿಕರು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆರೋಗ್ಯದ ಕಡೆ ಗಮನ ಹರಿಸಬೇಕು. ಯಾರಿಗೇ ಆದರೂ ಕುಷ್ಠ ರೋಗದ ಲಕ್ಷಣ ಕಂಡುಬಂದಲ್ಲಿ ನಿರ್ಲಕ್ಷಿಸದೆ ವೈದ್ಯರಲ್ಲಿ ತೋರಿಸಿಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಶ್ವನಾಥರೆಡ್ಡಿ, ಪುರಸಭೆ ಕಂದಾಯ ಅಧಿಕಾರಿ ನಾಗರಾಜ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಿರಿಯ ಎಂಜಿನಿಯರ್ ಶ್ರೀನಿವಾಸ್, ಪ್ರಥಮ ದರ್ಜೆ ಸಹಾಯಕ ಎನ್.ಶಂಕರ್ ಇದ್ದರು.

ಮೂವರು ಕಾರ್ಮೆಲ್ ಧಾರ್ಮಿಕ ಸಭೆಯ ಉಪಯಾಜಕರಿಗೆ ಬಿಕರ್ನಕಟ್ಟೆ ಬಾಲ ಯೇಸು ಪುಣ್ಯಕ್ಷೇತ್ರದಲ್ಲಿ ಗುರು ದೀಕ್ಷೆ ನೀಡಲಾಯಿತು

ಮಂಗಳೂರು: ಕರ್ನಾಟಕ-ಗೋವಾ ಪ್ರಾಂತ್ಯದ ಮುವರು ದೀಯೊಕೊನರಿಗೆ ಫಾ. ಮೆಲ್ವಿನ್ ಲಸ್ರಾದೊ (ನಿರ್ಕಾಣ್ ಧರ್ಮಕೇಂದ್ರ) ಫಾ. ನಿಕೇಶ್ ಡಿ’ಸೋಜಾ (ಪಾಣಿರ್ ಧರ್ಮಕೇಂದ್ರ) ಮತ್ತು ಫಾ.ಕಿರಣ್ ಲೋಬೊ (ಬೆಳ್ತಂಗಡಿ ಧರ್ಮಕೇಂದ್ರ) ಇವರನ್ನು ಡಾ. ಪೀಟರ್ ಪಾವ್ಲ್ ಸಲ್ದಾನಾ, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್  ಬಿಕರ್ನಕಟ್ಟೆ ಬಾಲ ಯೇಸು ಪುಣ್ಯ ಕ್ಷೇತ್ರದಲ್ಲಿ ಫೆಬ್ರವರಿ ಒಂದರಂದು ಯಾಜಕಿ ದೀಕ್ಷಾ ಸಂಸ್ಕಾರವನ್ನು ನೀಡಿದರು

      13 ವರ್ಷಗಳ ವರೆಗೆ ದೇವ ಶಾಸ್ತ್ರದಲ್ಲಿ ಶಿಕ್ಷಣ ಪಡೆದು ಯಾಜಕಿ ದೀಕ್ಷೆ ಪಡೆಯಲು ಯೋಗ್ಯರಾದ ಹಿನ್ನೆಲೆಯಲ್ಲಿ ಧರ್ಮಗುರುಗಳಾಗಲು ಯೋಗ್ಯರೆಂದು ಇವರನ್ನು ಪರಿಗಣಿಸಿ ಯಾಜಕಿ ದೀಕ್ಷೆ ಕೇಳಿಕೊಂಡ ಹಿನ್ನೆಲೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ|ವಂ| ಡಾ. ಪೀಟರ್ ಪಾವ್ಲ್ ಸಲ್ದಾನಾ  ಪ್ರಾಂತ್ಯದ 86 ಮಂದಿ ಧರ್ಮಗುರುಗಳು, ಮತ್ತು ಇತರ ಧರ್ಮಗುರುಗಳ ಉಪಸ್ಥಿತಿಯಲ್ಲಿ ಬಿಷಪ್ ಇವರನ್ನು ಪವಿತ್ರ ಎಣ್ಣೆಯೊಂದಿಗೆ ಅಭಿಷೇಕಿಸಿ ಯಾಜಕಿ ಸಂಸ್ಕಾರವನ್ನು ನೀಡಿದರು. ಈ ಸಂದರ್ಭದಲ್ಲಿ ಬಾಲ ಯೇಸು ದೇವಾಲಯವು ಯಾಜಕಿ ದೀಕ್ಷೆ ಪಡೆದವರ ಕುಟುಂಬಸ್ಥರಿಂದ ಸ್ನೇಹಿತರಿಂದ ಮತ್ತು ಹಿತೈಷಿಗಳಿಂದ ತುಂಬಿಹೋಗಿತ್ತು.

   ಈ ಸಂದರ್ಭದಲ್ಲಿ ಬಿಷಪ್ “ಯಾಜಕರ ನಿರ್ದಿಷ್ಟ ಪಾತ್ರವನ್ನು ಒತ್ತಿಹೇಳಿದರು. ನಮ್ಮ ಪ್ರಧಾನ ಯಾಜಕರಾದ ಯೇಸು ಕ್ರಿಸ್ತರನ್ನು ಮಾದರಿಯನ್ನಾಗಿ ನೀವು ಯಾಜಕತ್ವದ ಜೀವನ ನಡೇಸಬೇಕು ಎಂದು ಅವರನ್ನು ಆಶಿರ್ವದಿಸಿ ’ನೀವು ಯಾಜಕಾರಾಗಿ ಸಂಸ್ಕಾರ ಪಡೆದುದಕ್ಕೆ ಸ್ವರ್ಗದಲ್ಲಿ ಮಹಾ ಸಂತೋಷ ಉಂಟಾಗಿದೆ’ ಎಂದು ಹೇಳಿದರು. ಕಾರ್ಮೆಲ್ ಮೇಳದ ಗೋವಾ- ಕರ್ನಾಟಕದ ಪ್ರಾಂತ್ಯದ ಮುಖ್ಯಸ್ಥರಾದ ಅ|ವಂ| ಪಿಯುಸ್ ಜೇಮ್ಸ್ ಡಿ’ಸೋಜಾ ಮತ್ತು ಸೇಂಟ್ ಜೋಸೆಫ್ ಆಶ್ರಮದ ಶ್ರೇಷ್ಠರಾದ ಚಾರ್ಲ್ಸ್ ಸೆರಾವೊ ಅವರೊಂದಿಗೆ ಪ್ರಾಂತೀಯ ಶ್ರೇಷ್ಠರಾದ ಅ|ವಂ| ಜಾರ್ಜ್ ಸಾಂತುಮಾಯರ್ ಅವರು ಶಾಂತಿ ಸಂದೇಶದೊಂದಿಗೆ ಅರ್ಚಕರನ್ನು ಸ್ವಾಗತಿಸಿದರು. ಫಾ. ರುಡಾಲ್ಫ್ ಪಿಂಟೊ ದೇವ ಸ್ಥುತಿ ಮತ್ತು ಬಲಿದಾನದ ಸ್ತುತಿಗೀತೆಗಳನ್ನು  ಹಾಡುವ ಗಾಯನ ಪಂಗಡಕ್ಕೆ ನಿರ್ದೇಶನ ನೀಡಿದರು

ಜೆಡಿಎಸ್‍ಗೆ ಮತ ನೀಡಿದರೆ ಬಿಜೆಪಿಗೆ ಮತ ನೀಡಿದಂತಾಗುತ್ತದೆ ಶಾಸಕ ಜಮೀರ್ ಅಹ್ಮದ್ ಹೇಳಿದರು.

ಶ್ರೀನಿವಾಸಪುರ: ಜೆಡಿಎಸ್‍ಗೆ ಮತ ನೀಡಿದರೆ ಬಿಜೆಪಿಗೆ ಮತ ನೀಡಿದಂತಾಗುತ್ತದೆ ಎಂದು ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಹೇಳಿದರು.
ತಾಲ್ಲೂಕಿನ ಗೌನಿಪಲ್ಲಿಯಲ್ಲಿ ಬುಧವಾರ ಏರ್ಪಡಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಂಯುಕ್ತ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಹೋಟೆಲ್ ವಾಸ್ತವ್ಯ ಮಾಡಿ ಜನರಿಂದ ದೂರವಾದರು. ಕೊನೆಗೆ ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟರು ಎಂದು ಹೇಳಿದರು.
ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಅಂದು ಗಾಂಧೀಜಿ ಅವರ ಹತ್ಯೆ ಮಾಡಿದ ಸಂಘಟನೆಗೆ ಸೇರಿದವರು ಇಂದು ದೇಶ ಆಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಂದಾಗಿ ದೇಶಕ್ಕೆ ದರಿದ್ರ ಆವರಿಸಿದೆ. ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಿಂಚತ್ತೂ ಕರುಣೆಯಿಲ್ಲ. ಮೋದಿ ಸೂಟು ಧರಿಸಿ ಸುಳ್ಳು ಹೇಳುತ್ತಾರೆ ಎಂದು ಹೇಳಿದರು.
ಅಲ್ಪ ಸಂಖ್ಯಾತ ಹೆಣ್ಣು ಮಕ್ಕಳು ಹಿಜಾಬ್ ಧರಿಸಿದರೆ ಆಗುವ ನಷ್ಟವಾದರೂ ಏನು. ಒಂದು ಸಮುದಾಯದ ಸಾಂಸ್ಕøತಿಕ ಪರಂಪರೆಗೆ ಗೌರವ ನೀಡದೆ, ಅವರ ಭಾವನೆಗಳನ್ನು ಘಾಸಿಗೊಳಿಸಲಾಗಿದೆ. ರಾಹುಲ್ ಗಾಂಧಿ ತಮ್ಮ ಪ್ರಾಣದ ಮೇಲೆ ಹಂಗು ತೊರೆದು, ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಭಾರತ್ ಜೋಡೊ ಯಾತ್ರೆ ನಡೆಸಿದರು. ಸಮಾನತೆ, ಸೌಹಾರ್ದತೆ ಹಾಗೂ ಸೋದರತ್ವಕ್ಕಾಗಿ ಪಾದಯಾತ್ರೆ ಮಾಡಿದರು ಎಂದು ಹೇಳಿದರು.
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ. ಅವರು ಮತ್ತೆ ಮುಖ್ಯ ಮಂತ್ರಿ ಆಗಬೇಕು ಎಂಬುದು ಜನರ ಇಚ್ಛೆಯಾಗಿದೆ. ಬಿಜೆಪಿ ತುಂಬಿರುವ ಕತ್ತಲೆ ಕಳೆಯುವ ಶಕ್ತಿ ಕಾಂಗ್ರೆಸ್‍ಗೆ ಮಾತ್ರ ಇದೆ ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಮೀಷನ್ ದಂಧೆಯಲ್ಲಿ ಮುಳುಗಿ ಜನರ ಸಮಸ್ಯೆಗಳಿಗೆ ಗಮನ ನೀಡುತ್ತಿಲ್ಲ. ಇದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕೆಸಿ ವ್ಯಾಲಿ ಯೋಜನೆ ಜಾರಗೆ ಕಾಂಗ್ರೆಸ್ ಕಾರಣ, ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗ 1300 ಕೋಟಿ ಮಂಜೂರು ಮಾಡಲಾಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಎತ್ತಿಹ ಹೊಳೆ ಯೋಜನೆ ಸ್ಥಗಿತಗೊಂಡಿದೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಮುಖಂಡರಾದ ದಿಂಬಾಲ ಅಶೋಕ್, ಎಂ.ಶ್ರೀನಿವಾಸನ್, ಮ್ಯಾಕಲ ನಾರಾಯಣಸ್ವಾಮಿ, ಸಿ.ಎಂ.ಮುನಿಯಪ್ಪ, ಎನ್.ಮುನಿಸ್ವಾಮಿ, ಎನ್.ಜಿ.ಬ್ಯಾಟಪ್ಪ, ಅಕ್ಬರ್ ಷರೀಫ್, ಬಿ.ಜಿ.ಸೈಯದ್ ಖಾದರ್, ಸಂಜಯ್‍ರೆಡ್ಡಿ, ಗೊಲ್ಲಹಳ್ಳಿ ಶಿವಪ್ರಸಾದ್, ಅಂಬರೀಶ್, ಶಶಿಕುಮಾರ್, ವಿ.ಮುನಿಯಪ್ಪ ಇದ್ದರು.

ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದರ ಮೂಲಕ, ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು : ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದರ ಮೂಲಕ, ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಕೊಪ್ಪವಾರಪಲ್ಲಿ ರೂ.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಪ್ರಾಥಮಿಕ ಶಾಲೆ ಕಾಂಪೌಂಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಸರ್ಕಾರಿ ಶಾಲೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಶಿಕ್ಷಣ ನೀಡುತ್ತಿವೆ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಪ್ರತಿ ಶಾಲೆಗೂ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, ತರಗತಿ ಕೊಠಡಿ, ಕಾಂಪೌಂಡ್, ಗ್ರಂಥಾಲಯ ಒದಗಿಸಲಾಗಿದೆ. ಹಾಗಾಗಿ ಪೋಷಕರು ನಿಶ್ಚಿಂತೆಯಿಂದ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬಹುದು ಎಂದು ಹೇಳಿದರು.
ಶಿಕ್ಷಕ ಸಮುದಾಯ ಸರ್ಕಾರಿ ಶಾಲೆ ಉಳಿವಿಗೆ ವಿಶೇಷ ಗಮನ ನೀಡಬೇಕು. ಪೋಷಕರ ಮನವೊಲಿಸಿ ಮಕ್ಕಳು ಶಾಲೆಗೆ ದಾಖಲಾಗುವಂತೆ ಮಾಡಬೇಕು. ಇಲ್ಲವಾದರೆ ಸರ್ಕಾರದ ಸೌಲಭ್ಯ ವ್ಯರ್ಥವಾಗುತ್ತದೆ. ಬದ್ಧತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ನಿರೀಕ್ಷಿತ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಜ್ಯ ದಲಿತ ಸಂಘಟನೆಗಳ ಚಾಲನಾ ಸಮಿತಿ ಮುಖಂಡ ಎನ್.ಮುನಿಸ್ವಾಮಿ ಕಾಂಪೌಂಡ್ ಉದ್ಘಾಟಿಸಿದರು
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌತಮಿ ಮುನಿರಾಜು, ಪಿಡಿಒ ಗೌಸ್ ಸಾಬ್, ಎಂಜಿನಿಯರ್ ಗೌತಮಿ, ಮುಖಂಡರಾದ ಕೆ.ಕೆ.ಮಂಜು, ವಿ.ಮುನಿಯಪ್ಪ, ಬಾಬುರೆಡ್ಡಿ, ರಾಮಚಂದ್ರಾರೆಡ್ಡಿ, ರವಣಪ್ಪ, ಬೈಯಣ್ಣ ಇದ್ದರು.

ಶಿಕ್ಷಕರು ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು :ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಶಿಕ್ಷಕರು ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ರಂಗಾರಸ್ತೆ ಪ್ರೌಢ ಶಾಲೆ ಆವರಣದಲ್ಲಿ ತಾಲ್ಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಕಲಿಕಾ ಹಬ್ಬ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರಿಗೆ ಒಳ್ಳೆ ಸಂಬಳ ದೊರೆಯುತ್ತಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಈ ಕುರಿತು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಾಥಮಿಕ ಶಿಕ್ಷಣ ಹಾಗೂ ಪ್ರಾಥಮಿಕ ಆರೋಗ್ಯ ಅತ್ಯಮೂಲ್ಯ. ಅವು ಸರ್ಕಾರದ ನಿಯಂತ್ರಣದಲ್ಲಿರಬೇಕು. ಅವುಗಳನ್ನು ಖಾಸಗಿಯವರ ಕೈಗೆ ನೀಡುವ ಯಾವುದೇ ದೇಶಕ್ಕೆ ದರಿದ್ರ ತಪ್ಪಿದ್ದಲ್ಲ. ನಾನು ಮೊದಲ ಬಾರಿಗೆ ಶಾಸಕನಾದಾಗ ಪಟ್ಟಣಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತರುವ ಭರವಸೆ ನೀಡಿದ್ದೆ. ಭರವಸೆ ಈಡೇರಿಸಲಾಗಿದೆ. ಪಟ್ಟಣದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾದ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಮಾತನಾಡಿ, ಕೋವಿಡ್ ಸಂಕಷ್ಟದ ಬಳಿಕ ಶಾಲೆಗಳು ಪ್ರಾರಂಭವಾದಾಗ ಸ್ವಕಲಿಕಾ ಮಾದರಿ ವಿಧಾನ ಜಾರಿಗೆ ತರಲಾಯಿತು. ಕಲಿಕಾ ಚೇತರಿಕೆ ಎಂಬ ಹೆಸರಲ್ಲಿ ಪ್ರಾರಂಭಿಸಲಾಯಿತು, ಕಲಿಕೆ ಅನುಭವ ಕೇಂದ್ರೀಕೃತಗೊಳಿಸುವ ಉದ್ದೇಶದಿಂದ ಕಲಿಕಾ ಹಬ್ಬ ಆಚರಿಸಲಾಗುತ್ತಿದೆ. ತಾಲ್ಲೂಕಿನ 24 ಕ್ಲಸ್ಟರ್‍ಗಳಲ್ಲಿ ಈ ಹಬ್ಬ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್, ಬಿಆರ್‍ಸಿ ಸಮನ್ವಯಾಧಿಕಾರಿ ಕೆ.ಸಿ.ವಸಂತ, ಡಿಇಆರ್‍ಟಿಇ ಜಿ.ವಿ.ಚಂದ್ರಪ್ಪ, ಸಿಆರ್‍ಪಿಗಳಾದ ರಾಧಾಕೃಷ್ಣ, ಅಕ್ಮಲ್, ಆರಿಫ್ ಪಾಷ, ಇಸಿಒ ಸಾದಿಕ್ ಪಾಷ, ಶಾಲಾ ಮುಖ್ಯಸ್ಥರಾದ ಟಿ.ವಿ.ಬೈರೆಡ್ಡಿ, ಆದಿಲಕ್ಷ್ಮಮ್ಮ, ಚೆನ್ನಪ್ಪ, ನಾಗೇಂದ್ರ ಪ್ರಸಾದ್, ಎಸ್‍ಡಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಸೀತಾರಾಮರೆಡ್ಡಿ, ಮಂಜುನಾಥರೆಡ್ಡಿ, ಅನ್ನೀಸ್ ಅಹ್ಮದ್ ಇದ್ದರು.