ಕೋಲಾರ:- ಯುವಜನತೆಗೆ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳು ಹಾಗೂ ಕಾನೂನಿನ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಸುವ ಮೂಲಕ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ.ಮಂಜುನಾಥ್ ಕರೆ ನೀಡಿದರು.
ನಗರ ಹೊರವಲಯದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ,ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದ ಆಶ್ರಯದಲ್ಲಿ ಮಾದಕ ವಸ್ತುಗಳ ಸೇವನೆ ಮತ್ತುಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹದ ಅಂಗವಾಗಿ ಗ್ರಾ.ಪಂ ಪಿಡಿಒಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಎರಡು ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಮಾದಕ ವ್ಯಸನಿಗಳು ಸಮಾಜಕ್ಕೆ ಹೊರೆ ಎಂದ ಅವರು, ಇಂತಹವರು ಅಪರಧಗಳಲ್ಲಿ ಹೆಚ್ಚು ಭಾಗವಹಿಸುವುದರಿಂದ ಶಾಂತಿ,ನೆಮ್ಮದಿ ಸಹಾ ಹಾಳಾಗುತ್ತದೆ, ಈ ಹಿನ್ನಲೆಯಲ್ಲಿ ಯುವಕರಿಗೆ ಅರಿವು ನೀಡಿ, ಗ್ರಾಮೀಣ ಭಾಗದಲ್ಲಿ ನಗರ ಪ್ರದೇಶದಲ್ಲಿ ಎಲ್ಲೇ ಆಗಲಿ ಮಾದಕ ವಸ್ತುಗಳ ಬಳಕೆ, ಮಾರಾಟ ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.
ಯುವಕರನ್ನು ಮಾದಕ ವಸ್ತಗಳಿಂದ ದೂರವಿಡುವ ಕಾರ್ಯದಲ್ಲಿ ಪೋಷಕರದ್ದು ಹೆಚ್ಚಿನ ಹೊಣೆಗಾರಿಕೆ ಇದೆ ಎಂದ ಅವರು, ತಮ್ಮ ಮಕ್ಕಳ ಚಲನವಲನ ಗಮನಿಸಬೇಕು, ನಿಮಗೆ ಮಕ್ಕಳ ಮೇಲೆ ಎಷ್ಟೇ ಪ್ರೀತಿ ಇದ್ದರೂ ಅವರು ಹಾದಿ ತಪ್ಪದಂತೆ ಎಚ್ಚರವಹಿಸುವುದು ಅಗತ್ಯವಿದೆ, ಅವರಿಗೆ ಅಗತ್ಯಕ್ಕಿಂತ ಹೆಚ್ಚಿನ ಹಣ ನೀಡುವುದು ಸಹಾ ತಪ್ಪು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ದೇವರಾಜ ಅರಸು ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಪ್ರಭಾಕರ್ ಮಾತನಾಡಿ,ವಿದ್ಯಾರ್ಥಿಗಳು ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟ ಕಾನೂನು ಬಾಹಿರ ಎಂದು ತಿಳಿದಿದರೂ ಬಹಳಷ್ಟು ಯುವಕರು ಇಂತಹ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ ಎಂದು ವಿಷಾದಿಸಿದರು.
ಯುವಕರು ಹೆಚ್ಚಾಗಿ ಮಾದಕ ವಸ್ತುಗಳ ದಾಸರಾಗುತ್ತಿದ್ದು, ಇದರಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಇದರ ಸೇವನೆಯಿಂದ ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯವೂ ಹದಗೆಡುತ್ತಿದ್ದು, ಅಪರಾಧ ಪ್ರಕರಣಗಳಲ್ಲಿ ಭಾಗವಹಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ತಿಳಿಸಿ, ಇದನ್ನು ತಡೆಯಲು ನಿರಂತರ ಜಾಗೃತಿ ಅಗತ್ಯ ಎಂದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾತನಾಡಿ, ಶಾಲಾ ಕಾಲೇಜುಗಳ ಸಮೀಪ, ಯುವಜನತೆ ಹೆಚ್ಚು ಪಾಲ್ಗೊಳ್ಳುವ ಕಡೆಗಳಲ್ಲಿ ಮಾದಕ ವಸ್ತುಗಳ ಬಳಕೆಯ ಅನುಮಾನ ಇರುತ್ತದೆ, ಅಂತಹ ಸ್ಥಳಗಳಲ್ಲಿ ಪೊಲೀಸರು ನಿಗಾ ವಹಿಸಬೇಕು, ಮಾದಕ ವಸ್ತು ಸಾಗಾಟ,ಮಾರಾಟ ಮಾಡುವವರನ್ನು ಸದೆಬಡಿದು ಅಪರಾಧ ಮುಕ್ತ ಹಾಗೂ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಿಸುವ ಕಾರ್ಯದಲ್ಲಿ ಶ್ರಮಿಸಬೇಕು ಎಂದರು.
ಪ್ರೌಢಶಾಲಾ ಹಂತದಿಂದಲೇ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಕುರಿತು ಅರಿವು ನೀಡುವ ಕೆಲಸವಾಗಬೇಕು, ಗ್ರಾಮೀಣ ಪ್ರದೇಶದಲ್ಲಿ ಗ್ರಾ.ಪಂ ಪಿಡಿಒಗಳದ್ದ ಹೆಚ್ಚಿನ ಜವಾಬ್ದಾರಿ ಇದೆ ಎಂದ ಅವರು,ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಪಡೆದು ಮಾದಕ ವಸ್ತುಗಳ ಕಳ್ಳಸಾಗಾಣೆ ಜಾಲವನ್ನು ಬೇಧಿಸಲು ಪೊಲೀಸರಿಗೆ ನೆರವಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬಿ.ಎಸ್.ವಿಜಯಸಾಯಿ, ಮತ್ತು ವಿದ್ಯಾ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ಕುರಿತು ಉಪನ್ಯಾಸ ನೀಡಿ, ಮಾದಕ ವಸ್ತುಗಳ ಸೇವನೆಯಿಂದ ಅನೇಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ, ಮಾನಸಿಕವಾಗಿಯೂ ಕುಗ್ಗಿ ಹೋಗಲಿದ್ದು, ಮಾದಕ ವಸ್ತುಗಳು ಸಾವಿನ ನಿಮ್ಮನ್ನು ಹತ್ತಿರವಾಗಿಸುತ್ತವೆ ಎಂದು ಎಚ್ಚರಿಸಿದರು.
ಮಾದಕ ವ್ಯಸನಿಗಳಾಗಿದ್ದರೆ ಅವರಿಗೆ ಚಿಕಿತ್ಸೆ ಕೊಡಿಸಿ, ಅವರನ್ನು ಕೌನ್ಸಿಲಿಂಗ್ ಮಾಡುವ ಮೂಲಕ ಅವರ ಮಾನಸಿಕ ಪರಿಸ್ಥಿತಿಯನ್ನು ಸರಿಪಡಿಸುವ ಕೆಲಸವಾಗಬೇಕು, ಅವರಿಗೆ ಮಾದಕ ವಸ್ತುಗಳು ಎಲ್ಲಿಂದ ಸಿಗುತ್ತಿವೆ ಎಂದು ಅರಿತು ಅದರ ಮೂಲವನ್ನು ನಾಶಪಡಿಸಬೇಕು ಎಂದರು.
ಕಾರ್ಯಾಗಾರದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ, ಕೆಜಿಎಫ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು, ಜಿಪಂ ಸಿಇಒ ಪದ್ಮಬಸವಂತಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಡಾ.ಎನ್.ಸಿ.ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಕೋಲಾರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಾದಕ ವಸ್ತುಗಳ ಸೇವನೆ ಮತ್ತುಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹದ ಅಂಗವಾಗಿ ಗ್ರಾ.ಪಂ ಪಿಡಿಒಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಎರಡು ಕಾರ್ಯಾಗಾರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ.ಮಂಜುನಾಥ್ ಪಾಲ್ಗೊಂಡು ಮಾತನಾಡಿದರು.