ಕಠ್ಮಂಡು: ಟೇಕಾಫ್ ಆಗುವ ವೇಳೆ ಶೌರ್ಯ ಏರ್ಲೈನ್ಸ್ನ 9ಎನ್-ಎಎಂಇ (ಸಿಆರ್ಜೆ 200) ವಿಮಾನ ಪತನಗೊಂಡು 18 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ನೇಪಾಳ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ಜುಲೈ 24) ಬೆಳಗ್ಗೆ ನಡೆದಿದೆ.
ಈ ಘಟನೆಯಲ್ಲಿ ಪೈಲಟ್ ಬಚಾವ್ ಆಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.ಇದೀಗ ವಿಮಾನ ಪತನಗೊಂಡ ವಿಡಿಯೋ ಆನ್ಲೈನ್ನಲ್ಲಿ ಹರಿದಾಡುತ್ತಿದೆ. ಶೌರ್ಯ ಏರ್ಲೈನ್ಸ್ ವಿಮಾನ ಅಪಘಾತಕ್ಕೀಡಾದ ನಿಖರವಾದ ದೃಶ್ಯವು ವಿಡಿಯೋದಲ್ಲಿದೆ. ರನ್ವೇಯಿಂದ ಬಾನಿಗೆ ಏರಿದ ಸ್ವಲ್ಪ ಸಮಯದ ನಂತರ ವಿಮಾನವು ನೆಲಕ್ಕೆ ಅಪ್ಪಳಿಸಿದೆ.
ವಿಮಾನದಲ್ಲಿ ಪೈಲಟ್ ಸೇರಿ 19 ಮಂದಿ ಇದ್ದರು. 18 ಮಂದಿಯ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ. ವಿಮಾನದ ಅವಶೇಷಗಳಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ 37 ವರ್ಷದ ಪೈಲಟ್ ಮನಿಶ್ ಶಕ್ಯ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೌರ್ಯ ಏರ್ಲೈನ್ಸ್ ವಿಮಾನವು ವಿಮಾನಯಾನ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ವಿಮಾನವು ಕಠ್ಮಂಡುವಿನಿಂದ ಪೋಖರಾಗೆ ತೆರಳುತ್ತಿತ್ತು. ಟೇಕಾಫ್ ಆಗುವಾಗ ರನ್ವೇನಿಂದ ಜಾರಿದ್ದು, ಬೆಳಗ್ಗೆ 11 ಗಂಟೆ ಸುಮಾರಿಗೆ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿತು. ಈ ಅಪಘಾತದ ನಂತರ ವಿಮಾನದಿಂದ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ರಕ್ಷಣಾ ಕಾರ್ಯಾಚರಣೆಗಾಗಿ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ.