ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಮಾರುವುದು ಅಪರಾಧ – ಡಾ|| ಚಾರಿಣಿ
ಕೋಲಾರ: 18 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳು ತಂಬಾಕು ಮಾರಾಟ ಮಾಡುವುದು ಮತ್ತು ಮಕ್ಕಳಿಗೆ ತಂಬಾಕು ಮಾರುವುದು ಅಪರಾಧವಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ|| ಚಾರಿಣಿ ಅವರು ತಿಳಿಸಿದರು.
ಇಂದು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ತಂಬಾಕು ನಿಯಂತ್ರಣ ಮತ್ತು ಕೋಟ್ಪಾ ಕಾಯ್ದೆಯ ಅನುಷ್ಠಾನದ ಕುರಿತು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಮತ್ತು ಕೋಟ್ಪಾ ಕಾಯ್ದೆಯ ಸೆಕ್ಷನ್ 7ರ ಅನ್ವಯ ಬಿಡಿ-ಬಿಡಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದ್ದು, ಸದರಿ ಮಾರುಕಟ್ಟೆಗಳಲ್ಲಿ ಬಿಡಿ ಬಿಡಿಯಾಗಿ ಕಡ್ಡಿಪುಡಿ ಮಾರಾಟ ಮತ್ತು ದಾಸ್ತಾನು ಮಾಡಿರುವುದು ಮತ್ತು ಆರೋಗ್ಯಕರ ಎಚ್ಚರಿಕೆ ಚಿಹ್ನೆ ಇಲ್ಲದೆ ತಂಬಾಕು ಉತ್ಪನ್ನಗಳ ಮಾರಾಟ ವಿರುದ್ಧ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದರು.
ಧೂಮಪಾನ ನಿಷೇದಿತ ಪ್ರದೇಶದಲ್ಲಿ ಧೂಮಪಾನ ಮಾಡಿದವರಿಗೆ ದಂಡ ವಿಧಿಸಲಾಗಿದೆ. ಕೋಲಾರದಲ್ಲಿ 115 ಪ್ರಕರಣಗಳಿಗೆ ರೂ 10560, ಮಾಲೂರಿನಲ್ಲಿ 149 ಪ್ರಕರಣಗಳಿಗೆ ರೂ 12130, ಬಂಗಾರಪೇಟೆಯಲ್ಲಿ 110 ಪ್ರಕರಣಗಳಿಗೆ ರೂ 9230, ಮುಳಬಾಗಿಲಿನಲ್ಲಿ 130 ಪ್ರಕರಣಗಳಿಗೆ ರೂ 10280, ಶ್ರೀನಿವಾಸಪುರದಲ್ಲಿ 31 ಪ್ರಕರಣಗಳಿಗೆ ರೂ 1700 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 535 ಪ್ರಕರಣಗಳನ್ನು ದಾಖಲಿಸಿ 43900 ರೂಗಳನ್ನು ದಂಡ ವಸೂಲಿ ಮಾಡಲಾಗಿದೆ. ಧೂಮಪಾನಿಗಳಿಗೆ ವಿದ್ಯಾರ್ಥಿಗಳಿಂದ ಗುಲಾಬಿ ಮತ್ತು ಕರಪತ್ರ ನೀಡುವುದರೊಂದಿಗೆ ಧೂಮಪಾನ ಮಾಡದಂತೆ ಜಾಗೃತಿ ಮೂಡಿಸುವ ಗುಲಾಬಿ ಅಂದೋಲನ ಕಾರ್ಯಕ್ರಮ ಪ್ರಗತಿಯಲ್ಲಿದೆ ಎಂದರು.
ತಂಬಾಕು ವ್ಯಸನದಿಂದ ಹೊರಬರಲು ವ್ಯಸನಿಗಳನ್ನು ಪ್ರೇರೇಪಿಸಿ ಜಿಲ್ಲೆಯ ಎಸ್.ಎನ್.ಆರ್ ಆಸ್ಪತ್ರೆಯ ರೂಂ ನಂ. 53 ರಲ್ಲಿ ಆರಂಭಿಸಿರುವ ವ್ಯಸನ ಮುಕ್ತ ಕೇಂದ್ರ (ಟಿ.ಸಿ.ಸಿ) ಗೆ ಕಳುಹಿಸಿ ಸೂಕ್ತ ಮಾರ್ಗದರ್ಶನವನ್ನು ನೀಡುವುದರ ಮೂಲಕ ತಂಬಾಕು ಸೇವನೆಯಿಂದ ಹೊರಬರಲು ಪ್ರೇರೇಪಿಸಲಾಗುತ್ತಿದೆ. ಕಾಲೇಜುಗಳಿಂದ 100 ಮೀ. ಅಂತರದಲ್ಲಿ ಯಾವುದೇ ತಂಬಾಕು ಉತ್ಪನ್ನ ಮಾರಾಟ ಕೇಂದ್ರ ಇರಬಾರದು. ಮಕ್ಕಳಿಗೆ ಸರಿಯಾದ ಮಾಹಿತಿ ನೀಡುವುದರ ಮೂಲಕ ಕಾಲೇಜುಗಳನ್ನು ತಂಬಾಕು ಮುಕ್ತ ಕಾಲೇಜು ಎಂದು ಕಾಲೇಜಿನ ಪ್ರಾಂಶುಪಾಲರೇ ಘೋಷಣೆ ಮಾಡಬೇಕು ಎಂದು ತಿಳಿಸಿದರು.
ಇ-ಸಿಗರೇಟ್ ಇದು ನಿಕೋಟಿನ್ ಅಂಶದಿಂದ ತಯಾರಿಸಿದ್ದು, ಎಲೆಕ್ಟ್ರಾನಿಕ್ ಸಾಧನವಾಗಿದೆ. ಇದನ್ನು ಆನ್‍ಲೈನ್‍ನಲ್ಲಿ ಹೆಚ್ಚು ಮಾರಾಟ ಮಾಡುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಈ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಇ-ಸಿಗರೇಟ್ ಮಾರಾಟ ಮಾಡುವುದು ಅಪರಾಧ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮಾಲೂರು ಆರೋಗ್ಯ ಅಧಿಕಾರಿಗಳಾದ ಡಾ. ಪ್ರಸನ್ನ, ತಾಲ್ಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು, ಪುರಸಭೆಯ ಮುಖ್ಯಾಧಿಕಾರಿಗಳು, ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.