16 ಲಕ್ಷ ಕಟ್ಟಡ ಕಾರ್ಮಿಕರಿಗೆ 800 ಕೋಟಿ ರೂ ಪರಿಹಾರಧನ ಪಾವತಿ – ಶಿವರಾಮ್ ಹೆಬ್ಬಾರ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

16 ಲಕ್ಷ ಕಟ್ಟಡ ಕಾರ್ಮಿಕರಿಗೆ 800 ಕೋಟಿ ರೂ ಪರಿಹಾರಧನ ಪಾವತಿ – ಶಿವರಾಮ್ ಹೆಬ್ಬಾರ 

 

 

 

 

ಕೋಲಾರ : ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ವತಿಯಿಂದ 16 ಲಕ್ಷ ಕಾರ್ಮಿಕರಿಗೆ 800 ಕೋಟಿ ರೂಪಾಯಿ ಹಣವನ್ನು ಪರಿಹಾರಧನವಾಗಿ ಪಾವತಿ ಮಾಡಲಾಗಿದೆ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವರಾದ ಶಿವರಾಮ್ ಹೆಬ್ಬಾರ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ಷೌರಿಕ ಮತ್ತು ಅಗಸರಿಗೆ ವಿತರಿಸುತ್ತಿರುವ ಸಹಾಯಧನ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಡವರಿಗೆ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳಿಗೆ ಇಚ್ಛಾಸಕ್ತಿಯಿರಬೇಕು. 2.60 ಲಕ್ಷ ಕ್ಷೌರಿಕ ಸಮುದಾಯದವರಿಗೆ ಹಾಗೂ 70 ಸಾವಿರ ಅಗಸ ಸಮುದಾಯದವರು ಸೇರಿದಂತೆ 3 ಲಕ್ಷ ಅರ್ಹ ಫಲಾನುಭವಿಗಳಿಗೆ ತಲಾ ರೂ 5000 ದಂತೆ ಒಟ್ಟು 145 ಕೋಟಿ ರೂಪಾಯಿಗಳನ್ನು ಪರಿಹಾರಧನವಾಗಿ ನೀಡಲು ಗುರಿಯನ್ನು ಹೊಂದಲಾಗಿದೆ. ರಾಜ್ಯದಲ್ಲಿ ಇದುವರೆಗೂ 56 ಸಾವಿರ ಅರ್ಜಿಗಳು ಮಾತ್ರ ಬಂದಿವೆ ಆದ್ದರಿಂದ ಅರ್ಜಿ ಸಲ್ಲಿಸುವ ಅವದಿಯನ್ನು ಜುಲೈ 10 ರ ವರೆಗೂ ವಿಸ್ತರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಇದುವರೆಗೂ ಜಿಲ್ಲೆಯಲ್ಲಿ 3,858 ಅರ್ಜಿಗಳು ಬಂದಿದ್ದು ಇದರಲ್ಲಿ 2019 ಜನ ಕ್ಷೌರಿಕ ಸಮುದಾಯದವರು ಹೆಸರುಗಳನ್ನು ನೊಂದಾಯಿಸಿಕೊಂಡಿರುತ್ತಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಪೌರಾಯುಕ್ತರು ಅರ್ಜಿಗಳನ್ನು ಶಿಪಾರಸ್ಸು ಮಾಡಬೇಕಾಗಿರುತ್ತದೆ. ಜಿಲ್ಲೆಯಲ್ಲಿ ಒಂದು ವಾರದೊಳಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಲೇವಾರಿ ಮಾಡಿ ಪಲಾನುಭವಿಗಳಿಗೆ ಪರಿಹಾರಧನ ಪಾವತಿಯಾಗುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.

ಕಟ್ಟಡ ಕಾರ್ಮಿಕರಿಗೆ 5000 ರೂಗಳ ಪರಿಹಾರಧನ ಯೋಜನೆಯಡಿ ರಾಜ್ಯದಲ್ಲಿ 22 ಲಕ್ಷ ಕಟ್ಟಡ ಕಾರ್ಮಿಕರಲ್ಲಿ 16 ಲಕ್ಷ ಕಾರ್ಮಿಕರಿಗೆ ಪರಿಹಾರ ಹಣವನ್ನು ಈಗಾಗಲೇ ಪಾವತಿ ಮಾಡಲಾಗಿದೆ. ಇದರಿಂದ ಕಾರ್ಮಿಕರ ಬದುಕಿಗೆ ಶಕ್ತಿ ದೊರೆತಿದೆ. ಕಟ್ಟಡ ಕಾರ್ಮಿಕರ ಗುರುತಿನ ಚೀಟಿಯ ನವೀಕರಣ ಆಗದೇ ಇರುವಂತಹ ಕಟ್ಟಡ ಕಾರ್ಮಿಕರಿಗೂ ಸಹ ವಿಶೇಷ ಅನುಮತಿ ಪಡೆದು ಹಣ ಪಾವತಿ ಮಾಡಲಾಗಿದೆ. ತಮಿಳುನಾಡು, ಕೇರಳ ರಾಜ್ಯದಲ್ಲಿ ಕಾರ್ಮಿಕರಿಗಾಗಿ ಕಾರ್ಮಿಕ ಬೋರ್ಡ್ ಸ್ಥಾಪಿಸಿದ್ದು, ಕರ್ನಾಟಕದಲ್ಲಿಯೂ ಕಾರ್ಮಿಕ ಬೋರ್ಡ್ ಸ್ಥಾಪಿಸಲು ಮಸೂದೆ ತರಲಾಗುವುದು ಎಂದ ಅವರು ಕಾರ್ಮಿಕ ಬೋರ್ಡ್‍ಗಳನ್ನು ಸ್ಥಾಪಿಸಿ ಶೇ 5 ರಷ್ಟು ಹಣವನ್ನು ಶೇಖರಿಸಿಟ್ಟರೆ ಇದು ಕಷ್ಟಕಾಲದಲ್ಲಿ ಕಾರ್ಮಿಕರಿಗೆ ಬಳಕೆಯಾಗುತ್ತದೆ ಎಂದರು.

ಕೆ.ಜಿ.ಎಫ್‍ನ ಇ.ಎಸ್.ಐ ಆಸ್ಪತ್ರೆಗೆ ಭೇಟಿ ನೀಡದ ಸಂದರ್ಭದಲ್ಲಿ ಒಬ್ಬರೇ ವೈದ್ಯರಿದ್ದು, ಇನ್ನೂ ಇಬ್ಬರು ವೈದ್ಯರ ಅವಶ್ಯಕತೆ ಇದ್ದು, ಒಂದು ವಾರದೊಳಗೆ ವೈದ್ಯರನ್ನು ನೇಮಕ ಮಾಡಲಾಗುವುದು. ರಾಜ್ಯಾದ್ಯಂತ ಇರುವ ಇ.ಎಸ್.ಐ ಆಸ್ಪತ್ರೆಗಳಿಗೆ ವೈದ್ಯರ ಅವಶ್ಯಕತೆ ಇದ್ದು, 149 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳಿವೆ ಹಾಗೂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಕೋಲಾರದಲ್ಲಿಯೂ ಸಹ ಇ.ಎಸ್.ಐ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದರು.

ಅಬಕಾರಿ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರು ಮಾತನಾಡಿ, ಕ್ಷೌರಿಕ ಮತ್ತು ಅಗಸ ಸಮುದಾಯದವರ ಸ್ವಯಂ ವೃತ್ತಿಂiÀiನ್ನು ಗುರುತಿಸಿ ಹಾಗೂ ಆಟೋ ಚಾಲಕರನ್ನು ಗುರುತಿಸಿ ಕೋವಿಡ್-19 ಹಿನ್ನಲ್ಲೆಯಲ್ಲಿ ಇವರು ಕೆಲಸ ನಿರ್ವಹಿಸಲಾಗದ ಪರಿಸ್ಥಿತಿಯನ್ನು ಅರಿತು ರಾಜ್ಯ ಸರ್ಕಾರ ಪರಿಹಾರ ಧನವನ್ನು ನೀಡುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಿನ ರೀತಿಯಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಿ ಅಭಿವೃದ್ಧಿ ಪಡಿಸಲಾಗುವುದು. ಕೆ.ಜಿ.ಎಫ್‍ನಲ್ಲಿ 4000 ಎಕರೆಯಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸಲಾಗುವುದು ಎಂದರು.

ಕೋಲಾರ ಲೋಕಸಭಾ ಸದಸ್ಯರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಕಲಾವಿದರಿದ್ದಾರೆ. ಟಮಟೆ, ಜಾನಪದ, ರಂಗಭೂಮಿ ಸಾಹಿತಿಗಳಿಗೆ ಕೋವಿಡ್-19 ಹಿನ್ನಲೆಯನ್ನು 3-4 ತಿಂಗಳಿನಿಂದ ಯಾವುದೇ ರೀತಿಯ ಆದಾಯ ಇರುವುದಿಲ್ಲ, ಜಿಲ್ಲೆಯಲ್ಲಿ 2000 ಕ್ಕೂ ಅಧಿಕ ಕಲಾವಿದರಿದ್ದು, ಇವರಿಗೂ ಸಹಾಯ ಧನವನ್ನು ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಬೆಂಗಳೂರು ನಂತರ ಕೋಲಾರ ನಗರವು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವುದರಿಂದ, ಜಿಲ್ಲೆಯಲ್ಲಿ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿದರೆ ಅಭಿವೃದ್ಧಿ ಹೊಂದಲಿದೆ ಹಾಗಾಗಿ ಹೆಚ್ಚಿನ ರೀತಿಯಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಬೇಕು ಎಂದರು.

ಕೋಲಾರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ.ಶ್ರೀನಿವಾಸಗೌಡ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ತಂದು ಮಹಿಳೆಯರಿಗೆ ಕೆಲಸ ಕೊಡುವಂತಹ ಕಾರ್ಯ ಆಗಬೇಕು. ಕೋಲಾರದಲ್ಲಿ ಬಟ್ಟೆ ತಯಾರಿಕಾ ಕಾರ್ಖಾನೆಗಳನ್ನು ಸ್ಥಾಪಿಸಿ ಅವಕಾಶ ಮಾಡಿಕೊಟ್ಟರೆ ಸುಮಾರು 4 ಸಾವಿರ ಮಹಿಳೆಯರಿಗೆ ಉದ್ಯೋಗ ದೊರೆತು ಅನುಕೂಲವಾಗಲಿದೆ ಎಂದರು.

ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಮಾತನಾಡಿ, ಅಗಸ ಹಾಗೂ ಕ್ಷೌರಿಕ ಸಮುದಾಯದವರಿಗೆ ಪರಿಹಾರಧನಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಇದುವರೆಗೂ 3,858 ಅರ್ಜಿಗಳು ಬಂದಿದ್ದು, 858 ಅರ್ಜಿಗಳನ್ನು ಅನುಮೋದಿಸಲಾಗಿದೆ. ಉಳಿದ ಅರ್ಜಿಗಳನ್ನು ವಾರದೊಳಗೆ ವಿಲೇವಾರಿ ಮಾಡಲಾಗುವುದು. ಈ ಯೋಜನೆಗೆ ಜಿಲ್ಲಾ ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರನ್ನು ನೇಮಕ ಮಾಡಲಾಗಿರುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ನಸೀರ್ ಅಹಮದ್, ಗೋವಿಂದ ರಾಜು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ, ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಮೊಹಮದ್ ಸುಜೀತ, ಉಪವಿಭಾಗಾಧಿಕಾರಿಗಳಾದ ಸೋಮಶೇಖರ್, ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿಗಳಾದ ಸಂಜೀವಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಶ್ರೀಕಾಂತ್ ಪಾಟೀಲ್, ನಗರಸಭೆಯ ಪೌರಾಯುಕ್ತರಾದ ಶ್ರೀಕಾಂತ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಾಲಾಜಿ ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.