ಜಿಲ್ಲಾದ್ಯಂತ 7 ಕೇಂದ್ರಗಳಲ್ಲಿ ಜೂ.12 ರಿಂದ ಎಸ್ಸೆಸ್ಸೆಲ್ಸಿಪೂರಕ ಪರೀಕ್ಷೆ ಆರಂಭ1537 ಮಂದಿ ನೊಂದಣಿ-ಸುಗಮ ಪರೀಕ್ಷೆಗೆ ಅಗತ್ಯ ಕ್ರಮ-ಡಿಸಿ ವೆಂಕಟ್‍ರಾಜಾ

ಕೋಲಾರ:- ಜಿಲ್ಲಾದ್ಯಂತ ಜೂ.12 ರಿಂದ 7 ಕೇಂದ್ರಗಳಲ್ಲಿ ಆರಂಭವಾಗುತ್ತಿರುವ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಕಳೆದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ 1215 ಹಾಗೂ ಖಾಸಗಿಯಾಗಿ 322 ಮಂದಿ ವಿದ್ಯಾರ್ಥಿಗಳು ಸೇರಿದಂತೆ 1537 ಮಂದಿ ಕುಳಿತಿದ್ದು, ಯಾವುದೇ ಗೊಂದಲಕ್ಕೆಡೆ ಇಲ್ಲದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್‍ರಾಜಾ ಸೂಚನೆ ನೀಡಿದರು.
ತಮ್ಮ ಕಚೇರಿಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷಾ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಮಾರ್ಚ್ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಾಗೂ ಹಾಜರಾತಿ ಕೊರತೆಯಿಂದ ಪರೀಕ್ಷೆ ಅವಕಾಶ ಕಳೆದುಕೊಂಡಿದ್ದ ಅಭ್ಯರ್ಥಿಗಳು ಸೇರಿದಂತೆ ಒಟ್ಟು 1537 ಮಂದಿ ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕುವಾರುಕೇಂದ್ರಗಳ ವಿವರ
ಪರೀಕ್ಷೆ ನಡೆಯುತ್ತಿರುವ ಕೇಂದ್ರಗಳೆಂದರೆ ಕೋಲಾರದಲ್ಲಿ ಬಾಲಕಿಯರ ಪಿಯು ಕಾಲೇಜು, ಅಂಜುಮಾನ್ ಅಲಮಿನ್ ಶಾಲೆ, ಬಂಗಾರಪೇಟೆ ಆದರ್ಶ ವಿದ್ಯಾಲಯ, ಕೆಜಿಎಫ್‍ನಲ್ಲಿ ಸಮುತಿ ಜೈನ್ ಶಾಲೆ, ಮಾಲೂರಿನಲ್ಲಿ ಜೆಎಸ್‍ಎಸ್ ಗಾಯತ್ರಿ ಪ್ರೌಢಶಾಲೆ, ಮುಳಬಾಗಿಲಿನಲ್ಲಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮತ್ತು ಶ್ರೀನಿವಾಸಪುರದಲ್ಲಿ ಬಾಲಕರ ಪಿಯು ಕಾಲೇಜು ಎಂದು ತಿಳಿಸಿದರು.
ಕೋಲಾರ ತಾಲ್ಲೂಕಿನಲ್ಲಿ ಒಟ್ಟು 2 ಕೇಂದ್ರಗಳಿದ್ದು, ಅಲ್ಲಿ ಒಂದು ಕೇಂದ್ರದಲ್ಲಿ 255 ಹಾಗೂ ಬಾಲಕಿಯರ ಪಿಯು ಕಾಲೇಜು ಖಾಸಗಿ ಕೇಂದ್ರದಲ್ಲಿ 322 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದ ಅವರು, ಉಳಿದಂತೆ ಬಂಗಾರಪೇಟೆ 194ಮಂದಿ,ಕೆಜಿಎಫ್-135, ಮಾಲೂರು-169, ಮುಳಬಾಗಿಲು-370 ಹಾಗೂ ಶ್ರೀನಿವಾಸಪುರದಲ್ಲಿ 92 ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.
ಪರೀಕ್ಷಾ ಕಾರ್ಯಕ್ಕೆ
200 ಮಂದಿ ನೇಮಕ
ಜಿಲ್ಲೆಯ ಆರು ಕ್ಷೇತ್ರ ವಲಯಗಳಿಗೆ ಸಂಬಂಧಿಸಿದಂತೆ ಸುಗಮ ಪರೀಕ್ಷೆಗೆ 7 ಮಂದಿ ಮುಖ್ಯ ಅಧೀಕ್ಷಕರು, 7 ಮಂದಿ ಅಭಿರಕ್ಷಕರು ಸೇರಿದಂತೆ ಸ್ಥಾನಿಕ ಜಾಗೃತದಳ, ಕೊಠಡಿ ಮೇಲ್ವಿಚಾಕರು ಸೇರಿದಂತೆ ಒಟ್ಟು 200 ಕ್ಕೂ ಹೆಚ್ಚು ಮಂದಿ ಪರೀಕ್ಷಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಮುಖ್ಯ ಅಧೀಕ್ಷಕರು ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ಬಂಡಲ್‍ಗಳನ್ನು ಡಿಡಿಪಿಐ ಕಚೇರಿಯ ಭದ್ರತಾ ಕೊಠಡಿಗೆ ಸಂಜೆ 4 ಗಂಟೆಯೊಳಗೆ ತಲುಪಿಸಬೇಕು ಎಂದು ಸೂಚಿಸಲಾಗಿದೆ ಎಂದರು.
144ನೇ ಸೆಕ್ಷನ್
ನಿಷೇದಾಜ್ಞೆ ಜಾರಿ
ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ.ವ್ಯಾಪ್ತಿಯಲ್ಲಿ 144 ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆ ಜಾರಿ ಮಾಡಿದ್ದು, ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಈ 200 ಮೀ ವ್ಯಾಪ್ತಿಯಲ್ಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಬೆಳಗ್ಗೆ 8 ರಿಂದ ಸಂಜೆ 3ರವರೆಗೂ ಮುಚ್ಚಲು ಸೂಚಿಸಲಾಗಿದೆ ಎಂದು ವಿವರ ನೀಡಿದರು.
ಸ್ಥಾನಿಕ ಜಾಗೃತದಳಕ್ಕೆ
ನೇಮಕ-ಡಿಡಿಪಿಐ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಸಭೆಗೆ ಮಾಹಿತಿ ನೀಡಿ, ಪರೀಕ್ಷಾ ಪಾವಿತ್ರ್ಯತೆ ಕಾಪಾಡಲುಪ್ರತಿ ಕೇಂದ್ರಕ್ಕೆ ತಲಾ ಒಬ್ಬರು ಸ್ಥಾನಿಕ ಜಾಗೃದಳ ಸಿಬ್ಬಂದಿಯನ್ನು ನೇಮಿಸಲಾಗಿದೆ,
ಇದಲ್ಲದೇ ಡಿಡಿಪಿಐ, ಡಿವೈಪಿಸಿ, ನೇತೃತ್ವದಲ್ಲಿ ಎರಡು ಸಂಚಾರಿ ಜಾಗೃತದಳ ಕಾರ್ಯನಿರ್ವಹಿಸಲಿದೆ, ಪ್ರತಿ ತಾಲೂಕಿನಲ್ಲೂ ಬಿಇಒ, ನೇತೃತ್ವದಲ್ಲಿ ತಲಾ 1 ಜಾಗೃತದಳ ರಚಿಸಲಾಗಿದೆ ಎಂದ ಅವರು, ಇದಲ್ಲದೇ ಅಂತರ್ಜಿಲ್ಲಾ ಜಾಗೃತದಳ ಮತ್ತು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಜಾಗೃತದಳ ಬರಲಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವಾಟರ್‍ಬಾಯ್‍ಯಿಂದ ಮುಖ್ಯ ಅಧೀಕ್ಷಕರವರೆಗೂ ಎಲ್ಲರಿಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೇ ಗುರುತಿನ ಚೀಟಿ ಮುದ್ರಿಸಿ ಕಳುಹಿಸಿದೆ, ಗುರುತಿನ ಚೀಟಿ ಎಲ್ಲದೇ ಯಾರಿಗೂ ಒಳಗೆ ಪ್ರವೇಶ ನೀಡಬಾರದು ಎಂದು ತಿಳಿಸಲಾಗಿದೆ ಎಂದರು.


ಮೌಲಸೌಲಭ್ಯಗಳ ಪರಿಶೀಲನೆ ನಡೆದಿದೆ


ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಜಿಲ್ಲೆಯ ಎಲ್ಲಾ 7 ಕೇಂದ್ರಗಳಲ್ಲೂ ಕೊಠಡಿ, ಪೀಠೋಪಕರಣ, ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳ ಕುರಿತು ನಿಗಾ ವಹಿಸಿದ್ದು, ಯಾವುದೇ ಸಮಸ್ಯೆಗಳಿಗೆ ಅವಕಾಶವಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.


ಮೊಬೈಲ್ ಬಳಕೆ ಸಂಪೂರ್ಣ ನಿಷಿದ್ದ


ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಉಳಿದೆಲ್ಲಾ ಸಿಬ್ಬಂದಿ ಮೊಬೈಲ್ ಬಳಸದಿರುವಂತೆ ಕಟ್ಟಪ್ಪಣೆ ವಿಧಿಸಲಾಗಿದೆ.
ಮುಖ್ಯ ಅಧೀಕ್ಷಕರು ಕೊಠಡಿ ಮೇಲ್ವಿಚಾರಕರು ಮೊಬೈಲ್ ತಂದಿದ್ದರೆ ಸ್ವಿಚ್ ಆಫ್ ಮಾಡಿಸಿ ವಶಕ್ಕೆ ಪಡೆಯಲು ಸೂಚಿಸಲಾಗಿದ್ದು ವಿದ್ಯಾರ್ಥಿಗಳೂ ಸಹಾ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೇಂದ್ರದೊಳಕ್ಕೆ ತರಬಾರದು, ಕೇಂದ್ರದ ಮುಖ್ಯ ದ್ವಾರದಲ್ಲೇ ಈ ಸಂಬಂಧ ಪರಿಶೀಲಿಸಿ ಒಳ ಬಿಡುವಂತೆ ಪರೀಕ್ಷಾ ಮಂಡಳಿ ಸೂಚಿಸಿದೆ ಎಂದು ತಿಳಿಸಿದ್ದಾರೆ.


ಜೂ.12 ರಂದು ಪ್ರಥಮ ಭಾಷೆ


ಜೂ.12 ರಂದು ಪ್ರಥಮ ಭಾಷೆ ಪರೀಕ್ಷೆ ನಡೆಯಲಿದ್ದು, ಜೂ.13 ವಿಜ್ಞಾನ, ಜೂ.14 ದ್ವಿತೀಯ ಭಾಷೆ, ಜೂ.15 ಸಮಾಜ ವಿಜ್ಞಾನ, ಜೂ.16 ತೃತೀಯ ಭಾಷೆ, ಜೂ.17 ಗಣಿತ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ದ್ವಿತೀಯ ಭಾಷೆ ಹಾಗೂ ತೃತೀಯ ಭಾಷಾ ವಿಷಯಗಳ ಪರೀಕ್ಷೆ ಬೆಳಗ್ಗೆ 10-30 ರಿಂದ ಮಧ್ಯಾಹ್ನ 1-30 ಗಂಟೆಯವರೆಗೂ ನಡೆಯಲಿದ್ದು, ಉಳಿದ ಪ್ರಥಮ ಭಾಷೆ,ಗಣಿತ,ವಿಜ್ಞಾನ, ಸಮಾಜವಿಜ್ಞಾನ ವಿಷಯಗಳ ಪರೀಕ್ಷೆ 10-30 ರಿಂದ 1-45 ರವರೆಗೂ ನಡೆಯಲಿದೆ.

ಪರೀಕ್ಷಾರ್ಥಿಗಳಿಗೆ ಉಚಿತ ಪ್ರಯಾಣ


ಸರ್ಕಾರದ ಆದೇಶದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಕೇಂದ್ರಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ತಿಳಿಸಿದರು.
ವಿದ್ಯಾರ್ಥಿ ಸಮುದಾಯ ವದಂತಿಗಳಿಗೆ ಕಿವಿಗೊಡದೇ, ಖಿನ್ನರಾಗದೇ ವಿಚಲಿತರಾಗದೇ ಪರೀಕ್ಷೆ ಬರೆದು ಗುಣಾತ್ಮಕ ಫಲಿತಾಂಶದ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ತರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪರವಾಗಿ ಡಿಡಿಪಿಐ ಕೃಷ್ಣಮೂರ್ತಿ, ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ, ಡಿವೈಪಿಸಿಗಳಾದ ಮೋಹನ್‍ಬಾಬು,ಬಿಇಒಗಳಾದ ಕನ್ನಯ್ಯ, ಗಂಗರಾಮಯ್ಯ, ಕೃಷ್ಣಮೂರ್ತಿ, ಉಮಾದೇವಿ, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಶಶಿವಧನ, ಗಾಯಿತ್ರಿ,ಶಂಕರೇಗೌಡ, ವೆಂಕಟೇಶಪ್ಪ ಮತ್ತಿತರರು ಶುಭ ಹಾರೈಸಿದ್ದಾರೆ.
ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಕೋಲಾರ ತಾಲ್ಲೂಕು ಪರೀಕ್ಷಾನೋಡಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ, ಬಂಗಾರಪೇಟೆ ತಾಲ್ಲೂಕು ನೋಡಲ್ ಅಧಿಕಾರಿ ಸಿ.ಎಂ.ವೆಂಕಟರಮಣಪ್ಪ, ಶಿಕ್ಷಣ ಇಲಾಖೆ ಅಧಿಕಾರಿಗಳು, ಖಜಾನೆಯ ಅಧಿಕಾರಿಗಳು ಹಾಜರಿದ್ದರು.