15 ದಿನಗಳ ಮೊದಲೇ ಅಂತರ್ರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಿದ್ದರೆ ಕೊರೊನಾ ತಡೆಯಬಹುದಿತ್ತು; ಕುಂದಾಪುರ ಮೂಲದ ಡಾ. ಅವಿನ್ ಆಳ್ವಾ.

ವರದಿ: ಚಂದ್ರಶೇಖರ ಶೆಟ್ಟಿ, ಕುಂದಾಪುರ
15 ದಿನಗಳ ಮೊದಲೇ ಅಂತರ್ರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಿದ್ದರೆ ಕೊರೊನಾ ತಡೆಯಬಹುದಿತ್ತು; ಕುಂದಾಪುರ ಮೂಲದ ಡಾ. ಅವಿನ್ ಆಳ್ವಾ. 
ಕಳೆದ ಮೂರು ತಿಂಗಳ ಅವಧಿಯಲ್ಲಿ ವಿಶ್ವದಾದ್ಯಂತ ಸಾವಿರಾರು ಜನರನ್ನು ಬಲಿಪಡೆದ ಕೊರೊನಾ ವೈರಸ್ ಅನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕಳೆದ 15ದಿನಗಳ ಹಿಂದೆಯೇ ಕಾರ್ಗೋ ಹಾಗೂ ಏರ್ ಅಂಬ್ಯುಲೆನ್ಸ್ ಹೊರತುಪಡಿಸಿ ಅಂತರ್ರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಬೇಕಾಗಿತ್ತು. ಹಾಗೆ ಮಾಡಿದ್ದರೆ ಖಂಡಿತವಾಗಿಯೂ ಕೊರೊನಾದ ಅಪಾಯವನ್ನು ಈಗಿನದಕ್ಕಿಂತ ಸಾವಿರ  ಪಟ್ಟು ಕಡಿಮೆ ಗೊಳಿಸಬಹುದಾಗಿತ್ತು. ಆಗ ಹಾಗೆ ಮಾಡಿದ್ದರೆ ಇದೀಗ ಬಸ್ಸು ಮತ್ತು ಮಾರುಕಟ್ಟೆಯನ್ನು ವಾರಗಟ್ಟಲೇ ಬಂದ್ ಮಾಡುವ ಅಗತ್ಯವೇ ಇರುತ್ತಿರಲಿಲ್ಲ. ಆ ಮೂಲಕ ಇಲ್ಲಿನ ಜನರಿಗೆ ಆಗುವ ಅನಾನುಕೂಲಗಳನ್ನು ತಪ್ಪಿಸಬಹುದಾಗಿತ್ತು ಎಂದಿದ್ದಾರೆ ಡಾ. ಅವಿನ್ ಆಳ್ವಾರವರು. 
ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕಾರಿ ಡಾಕ್ಟರ್‌ಗಳು  ಸಾಕಷ್ಟು ಸಂಖ್ಯೆಯಲ್ಲಿ ಇದ್ದಾಗ್ಯೂ ಜನಸಂದಣಿ ಕಡಿಮೆಗೊಳಿಸುವ ನಿಟ್ಟಿನಲ್ಲಿ ಎರ್‌ಪೋರ್ಟ್‌ನ ಡೈರೆಕ್ಟರುಗಳು ಮಾಡಿದ ವಿನಂತಿಯ ಮೇರೆಗೆ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ನಿರಂತರವಾಗಿ ವಾರಗಳ ಕಾಲ ಯಾವುದೇ ಸಂಭಾವನೆ ಪಡೆಯದೆ ಅಪಾಯಕಾರಿಯಾದ ಕೊರೊನಾ ವೈರಸ್ ಸ್ಕ್ರೀನಿಂಗ್‌ನಲ್ಲಿ ಪಾಲ್ಗೊಂಡು ಸಾರ್ವಜನಿಕರ ಹಾಗೂ ಏರ್‌ಪೋರ್ಟ್ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿರುವ ಕುಂದಾಪುರ ಮೂಲದ ಮಂಗಳೂರಿನ ವೈದ್ಯ ಡಾ.ಅವಿನ್ ಆಳ್ವಾರವರು  ಕುಂದಾಪುರದ ಕೊಳ್ಕೆಬೈಲು ದಿ. ಅಂತಯ್ಯ ಶೆಟ್ಟರ ಮಗಳು ದಿ. ಪ್ರಮೋದಾ ಆಳ್ವಾ ಹಾಗೂ ಮಂಗಳೂರು ಬಂಬ್ರಾಣ ಮನೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ  ದಿ. ದೇವಪ್ಪ ಆಳ್ವಾರ ಮಗ ಶಿವಪ್ರಸಾದ್ ಆಳ್ವಾರವರ ಪುತ್ರರಾಗಿದ್ದಾರೆ. ಇವರು ಬಾಲ್ಯದಿಂದಲೂ ಅಜ್ಜ ದೇವಪ್ಪ ಆಳ್ವಾರ ಸ್ಪೂರ್ತಿಯಿಂದ ಸಮಾಜಸೇವೆಯಲ್ಲಿ ಆಸಕ್ತಿ ಹೊಂದಿದ್ದವರು ಪ್ರಸ್ತುತ ಇವರು ಮಂಗಳೂರಿನಲ್ಲಿ ಖಾಸಗಿ ವೈಧ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.