125 ನಿರುದ್ಯೋಗಿಗಳಿಗೆ ಜಾಮೀನು ರಹಿತ ಸಾಲ: ಶಾಸಕಿ ರೂಪಾಶಶಿಧರ್,  ವಾಹನ ಬೆಲೆಯಲ್ಲೂ ಸ್ಪರ್ಧಾತ್ಮಕ ದರ- ಬ್ಯಾಲಹಳ್ಳಿ ಗೋವಿಂದಗೌಡ  : ಡಿಸಿಸಿ ಬ್ಯಾಂಕ್ ಚಿತ್ತ ಪ್ರವಾಸಿ ಟ್ಯಾಕ್ಸಿಯತ್ತ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

125 ನಿರುದ್ಯೋಗಿಗಳಿಗೆ ಜಾಮೀನು ರಹಿತ ಸಾಲ: ಶಾಸಕಿ ರೂಪಾಶಶಿಧರ್,  ವಾಹನ ಬೆಲೆಯಲ್ಲೂ ಸ್ಪರ್ಧಾತ್ಮಕ ದರ- ಬ್ಯಾಲಹಳ್ಳಿ ಗೋವಿಂದಗೌಡ  : ಡಿಸಿಸಿ ಬ್ಯಾಂಕ್ ಚಿತ್ತ ಪ್ರವಾಸಿ ಟ್ಯಾಕ್ಸಿಯತ್ತ

 

 

ಕೋಲಾರ: ಸ್ತ್ರೀ ಶಕ್ತಿ ಸಂಘಗಳಿಗೆ ನವಚೈತನ್ಯ ಮೂಡಿಸುವಲ್ಲಿ ಯಶಸ್ವಿ ಆಗಿರುವ ಡಿಸಿಸಿ ಬ್ಯಾಂಕ್ ಇದೀಗ 125 ಪ್ರವಾಸಿ ಟ್ಯಾಕ್ಸಿಗಳಿಗೆ ಏಕಕಾಲಕ್ಕೆ ಸಾಲ ನೀಡುವ ಮೂಲಕ ಉದ್ಯೋಗಿಕರಣಕ್ಕೆ ಒತ್ತು ನೀಡುವ ಕ್ರಾಂತಿಕಾರಿ ಹೆಜ್ಜೆ ಇರಿಸಿದ್ದು ಇದರ ಸದುಪಯೋಗಕ್ಕೆ ಫಲಾನುಭವಿಗಳು ಮುಂದಾಗಬೇಕೆಂದು ಕೆಜಿಎಫ್ ಶಾಸಕರೂ ಆದ ಜಿಲ್ಲಾ ಕೇಂದ್ರ ಬ್ಯಾಂಕ್ ನಿರ್ದೇಶಕಿ ರೂಪಾಶಶಿಧರ್ ಹೇಳಿದರು.
ಇಲ್ಲಿನ ಸಹಕಾರಿ ಯೂನಿಯನ್‍ನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಟ್ಯಾಕ್ಸಿ ಫಲಾನುಭವಿಗಳಿಗೆ ಸಹಕಾರ ಕ್ಷೇತ್ರದಿಂದ ಹಾಗೂ ಡಿಸಿಸಿ ಬ್ಯಾಂಕ್‍ನಿಂದ ದೊರೆಯುವ ಸಾಲ ಸೌಲಭ್ಯಗಳ ಕುರಿತು ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಸಾಲ ತಿರಸ್ಕøತರಾಗಿ ಬಂದಿರುವ ನಿರುದ್ಯೋಗಿಗಳಿಗೆ ಬದುಕುವ ಸ್ಫೂರ್ತಿ ಮತ್ತು ಅಗತ್ಯ ಬೆಂಬಲವನ್ನು ಡಿಸಿಸಿ ಬ್ಯಾಂಕ್ ನೀಡಲಿದ್ದು 4 ಲಕ್ಷ ಸ್ತ್ರೀ ಶಕ್ತಿ ಸಂಘಗಳನ್ನು ಸಮಾಜದ ಮುಂಚೂಣಿಗೆ ತಂದ ಅನುಭವದ ಆಧಾರದ ಮೇಲೆ ಇದೀಗ ನಿರುದ್ಯೋಗಿಗಳ ಬದುಕಲ್ಲೂ ಆಶಾಕಿರಣ ಮೂಡಿಸುವ ಸಹಕಾರ ಬ್ಯಾಂಕಿನ ಜತೆಗೆ ಫಲಾನುಭವಿಗಳು ಹೆಜ್ಜೆ ಇಡುವ ಮೂಲಕ ಗುರಿ ಸಾಧನೆಗೆ ಮುಂದಾಗಬೇಕೆಂದರು.
ಶೇ.99 ಮಹಿಳಾ ಸಂಘಗಳು ಸಾಲ ಮರುಪಾವತಿ ಮಾಡಿದ್ದರೂ ಶೇ.1ರಷ್ಟು ಮಂದಿ ರಾಜಕೀಯ ಕುತಂತ್ರದಿಂದಾಗಿ ಕಂತು ಕಟ್ಟಲು ವಿಳಂಬ ಮಾಡುತ್ತಿದ್ದು ಅಂತಹವರಿಗೂ ಸಹಾ ಮನದಟ್ಟು ಮಾಡಿಸಿ ಮರುಪಾವತಿ ಮಾಡಿಸಲಾಗುತ್ತಿದೆ. ಸ್ವಾಭಿಮಾನಿಗಳು ಬ್ಯಾಂಕಿಗೆ ಮೋಸ ಮಾಡುವುದಿಲ್ಲ ಎಂಬುದನ್ನು ಯುವಶಕ್ತಿ ನೆನಪಿನಲ್ಲಿ ಇರಿಸಿಕೊಂಡು ರಾಜ್ಯದಲ್ಲೇ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ಪ್ರಾಯೋಗಿಕವಾಗಿ ಕೈಗೊಂಡಿರುವ ಪ್ರವಾಸಿ ಟ್ಯಾಕ್ಸಿ ಸಾಲ ಯೋಜನೆಯನ್ನು ಯಶಸ್ವಿಗೊಳಿಸಲು ಮುಂದಾಗಬೇಕೆಂದು ಮನವಿ ಮಾಡಿದರು.
ರಿಯಾಯಿತಿ ದರದಲ್ಲಿ ಟ್ಯಾಕ್ಸಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮಾತನಾಡಿ, ಬಡತನ ಮೊದಲು ವ್ಯಂಗವಾಗಿ ನಂತರ ಶಾಪವಾಗಿ ಪರಿಣಮಿಸಬಾರದು. ಹೀಗಾಗಿ ಡಿಸಿಸಿ ಬ್ಯಾಂಕ್ ಸಾವಿರ ನಿರುದ್ಯೋಗಿಗಳಿಗಾದರೂ ಸಾಲ ನೀಡಲು ಸಿದ್ದವಿದ್ದು ಟಯೋಟ ಮತ್ತು ಮಾರುತಿ ಸುಜಕಿ ಕಂಪನಿ ಜತೆಗೆ ಚರ್ಚೆ ನಡೆಸಿ ರಿಯಾಯಿತಿ ದರದಲ್ಲಿ ಟ್ಯಾಕ್ಸಿಗಳನ್ನು ಒದಗಿಸಲಾಗುತ್ತದೆ. ಸಾಲ ನೀಡುವಲ್ಲಿನ ಧಾರಾಳತನದ ಜತೆಗೆ ಕಂತುಗಳ ಮರುಪಾವತಿ ಶಿಸ್ತನ್ನೂ ಬ್ಯಾಂಕ್ ಕಟ್ಟುನಿಟ್ಟಾಗಿ ಪಾಲಿಸುವುದರಿಂದಾಗಿ ಫಲಾನುಭವಿಗಳು ಸಹಕಾರಿ ಬ್ಯಾಂಕನ್ನು ದೇವಸ್ಥಾನದಂತೆ ಪರಿಗಣಿಸಿ ಪ್ರಾಮಾಣಿಕವಾಗಿ ಸಾಲ ಕಟ್ಟುವ ಮನೋಸ್ಥಿತಿಯನ್ನು ರೂಢಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಟ್ಯಾಕ್ಸಿಯನ್ನು ಸಬ್‍ಲೀಸ್‍ಗೆ ಕೊಡುವ ಅಪಾಯಕಾರಿ ಕೆಲಸ ಮಾಡಬಾರದು ಎಂದು ಕಟ್ಟಪ್ಪಣೆ ಮಾಡಿದರು.
ಬಾಕಿ ಅರ್ಜಿಗಳಿಗೆ ಮೋಕ್ಷ: ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಸೌಮ್ಯಗೌಡ ಮಾತನಾಡಿ, ತಾಂತ್ರಿಕ ಕಾರಣಗಳಿಂದಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳು ಶೇ.30 ಫಲಾನುಭವಿಗಳಿಗೆ ಮಾತ್ರವೇ ಸಾಲ ಒದಗಿಸಿದ್ದು ಉಳಿದವರಿಗೆ ಕಳೆದ 8 ವರ್ಷಗಳಿಂದಲೂ ನ್ಯಾಯ ಮಾಡಲು ಸಾಧ್ಯವಾಗಿರಲಿಲ್ಲ. ಬ್ಯಾಂಕಿಗೆ ಜಾಮೀನು ನೀಡಲು ಅಶಕ್ತರಾದವರು ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದು ಹೀಗಾಗಿ ಪ್ರವಾಸಿ ಟ್ಯಾಕ್ಸಿ ಯೋಜನೆಯನ್ನು ಶೇ.100 ಯಶಸ್ವಿಗೊಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಡಿಸಿಸಿ ಬ್ಯಾಂಕ್ ಜಾಮೀನಿಲ್ಲದೆ ನಿರುದ್ಯೋಗಿಗಳಿಗೆ ಸಾಲ ವಿತರಿಸಲು ಸಮ್ಮತಿ ನೀಡಿರುವುದರಿಂದಾಗಿ ಬಾಕಿ ಉಳಿದಿದ್ದ ಎಲ್ಲ ಅರ್ಜಿಗಳಿಗೂ ಮೋಕ್ಷ ಸಿಕ್ಕಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಕೃತಜ್ಞತೆ ಸಲ್ಲಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ನಿರುದ್ಯೋಗಿಗಳು ಸಹಕಾರಿ ಕ್ಷೇತ್ರದ ಲಾಭ ಪಡೆದುಕೊಂಡು ಆರ್ಥಿಕ ಮುನ್ನಡೆ ಸಾಧಿಸಲು ಮುಂದಾಗಬೇಕು ಎಂದು ಸೂಚಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಫಲಾನುಭವಿಗಳು ಟ್ಯಾಕ್ಸಿ ಸಾಲವನ್ನು ಸಕಾಲದಲ್ಲಿ ತೀರಿಸುವ ಮೂಲಕ ತಕ್ಷಣವೇ ಮತ್ತೊಂದು ವಾಹನಕ್ಕೆ ಮರು ಸಾಲ ಪಡೆದುಕೊಂಡು ಟ್ರಾವಲ್ಸ್ ಆರಂಭಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಯೂನಿಯನ್ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ಕಂತು ಪಾವತಿ ಆಗದೆ ಸುಸ್ತಿ ಆದಲ್ಲಿ ಬ್ಯಾಂಕ್ ಕಾರನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂಬ ಅಂಶವನ್ನು ಎಲ್ಲ ಫಲನುಭವಿಗಳು ಅರಿತುಕೊಂಡು ಸಾಲವನ್ನು ಸಮರ್ಪಕವಾಗಿ ಕಟ್ಟಬೇಕೆಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಸಿಇಒ ಎಂ.ರವಿ, ಸಹಕಾರಿ ಯೂನಿಯನ್ ನಿರ್ದೇಶಕರಾದ ಎಸ್.ಸುರೇಶ್,ಎಸ್.ಆರ್.ರುದ್ರಸ್ವಾಮಿ,ಜಿ.ಅಶ್ವಥನಾರಾಯಣ, ಸಿಇಒ ಕೆ.ಎಂ.ಭಾರತಿ ಇದ್ದರು.
ಫೋಟೋ ಕ್ಯಾಪ್ಷನ್: ಕೋಲಾರದ ಸಹಕಾರಿ ಯೂನಿಯನ್‍ನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಟ್ಯಾಕ್ಸಿ ಫಲಾನುಭವಿಗಳಿಗೆ ಸಹಕಾರ ಕ್ಷೇತ್ರದಿಂದ ಹಾಗೂ ಡಿಸಿಸಿ ಬ್ಯಾಂಕ್‍ನಿಂದ ದೊರೆಯುವ ಸಾಲ ಸೌಲಭ್ಯಗಳ ಕುರಿತು ನಡೆದ ವಿಚಾರ ಸಂಕಿರಣವನ್ನು ಕೆಜಿಎಫ್ ಶಾಸಕರಾದ ರೂಪಾಶಶಿಧರ್ ಉದ್ಘಾಟಿಸಿದರು.(31ಕೆಪಿಎಚ್1)

ಕೋಟ್
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡರ ನಗುಮುಖದ ಸೌಮ್ಯ ನಿಲುವನ್ನು ಇದೀಗ ಪ್ರವಾಸಿ ಟ್ಯಾಕ್ಸಿ ಫಲಾನುಭವಿಗಳು ಕಾಣುತ್ತಿದ್ದು ಮುಂದೆ ಸಾಲದ ಕಂತು ಸಕಾಲಕ್ಕೆ ಕಟ್ಟದೇ ಹೋದಲ್ಲಿ ರುದ್ರಾವತಾರವನ್ನೂ ಕಾಣಬೇಕಾಗುತ್ತದೆ. ಕಷ್ಟದಲ್ಲಿ ಬೆಳೆದು ಬಂದವರಿಗೆ ಬಡವರ ನೋವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇರುತ್ತದೆ. ಹೀಗಾಗಿಯೇ ನಿರುದ್ಯೋಗಿಗಳಿಗೆ ಯಾವುದೇ ಜಾಮೀನಿಲ್ಲದೆ ಸಾಲ ನೀಡಲು ಅಧ್ಯಕ್ಷರು ಮುಂದೆ ಬಂದಿದ್ದು ಇದನ್ನು ಫಲಾನುಭವಿಗಳು ಅರ್ಥ ಮಾಡಿಕೊಂಡು ಪ್ರಾಯೋಗಿಕ ಯೋಜನೆಯನ್ನು ಯಶಸ್ವಿಗೊಳಿಸುವ ಮೂಲಕ ಇಡೀ ರಾಜ್ಯಕ್ಕೆ ಮಾದರಿ ಆಗುವಂತೆ ಮಾಡಬೇಕು.
– ರೂಪಾಶಶಿಧರ್, ಶಾಸಕರು, ಕೆಜಿಎಫ್

 

ಪ್ರವಾಸಿ ಟ್ಯಾಕ್ಸಿಗೆ ಉದ್ಯೋಗ ಖಾತ್ರಿ

ಪ್ರವಾಸೋದ್ಯಮ ಇಲಾಖೆ ಟ್ಯಾಕ್ಸಿ ನೀಡುವ ಜತೆಗೆ ಉದ್ಯೋಗ ಖಾತ್ರಿಯನ್ನೂ ಒದಗಿಸಲಿದೆ ಎಂದು ಉಪ ನಿರ್ದೇಶಕಿ ಎಂ.ಸೌಮ್ಯಗೌಡ ಹೇಳಿದರು.
ಚುನಾವಣೆ, ಪರೀಕ್ಷೆ ಕಾರ್ಯಗಳಿಗೆ ಟ್ಯಾಕ್ಸಿಗಳನ್ನು ಬಳಸಿಕೊಳ್ಳುವ ಜತೆಗೆ ಕೋಲಾರ ಟೆಂಪಲ್ ಟೂರಿಸಂ ಪ್ಯಾಕೇಜ್‍ನಲ್ಲೂ ಸಹಭಾಗಿತ್ವ ನೀಡಲಿದೆ. ಕೋಲಾರ ಜಿಲ್ಲೆಯ ದೇವಸ್ಥಾನಗಳನ್ನು ವಿಶ್ವದರ್ಜೆಗೆ ಸೇರಿಸಲು ಡಿಪಿಆರ್ ತಯಾರಿಸಲಾಗಿದ್ದು ಹೀಗಾಗಿ ಆನ್‍ಲೈನ್ ಟೂರಿಸಂನಲ್ಲಿ ಟ್ಯಾಕ್ಸಿ ಚಾಲಕರ ವಿವರಗಳನ್ನು ಅಪ್‍ಲೋಡ್ ಮಾಡಲಾಗುತ್ತಿದೆ. ಆದ್ದರಿಂದ ಪ್ರವಾಸಿಗರು ಹಾಗೂ ಮಹಿಳಾ ಸ್ನೇಹಿಯಾಗಿ ಚಾಲಕರು ವರ್ತಿಸುವ ಮೂಲಕ ಇಲಾಖೆಗೆ ಗೌರವ ತರಬೇಕು ಎಂದು ಸೂಚಿಸಿದರು.