ಕೋವಿಡ್ ಲಾಕ್‍ಡೌನ್ ಸಂಕಷ್ಟದಲ್ಲಿ ಜನರ ಋಣ ತೀರಿಸಲು ಸಂಕಲ್ಪ ಪ್ರತಿ ಬಿಪಿಎಲ್ ಕುಟುಂಬದ ಮನೆಬಾಗಿಲಿಗೆ 10ಕೆಜಿ ಅಕ್ಕಿ-ರೂಪಶಶಿಧರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್ ಸಂಕಷ್ಟದಿಂದ ಬಳಲಿರುವ ಜಿಲ್ಲೆಯ ಕೆಜಿಎಫ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಬಿಪಿಎಲ್ ಕುಟುಂಬದ ಮನೆಬಾಗಿಲಿಗೂ ತಲಾ 10 ಕೆಜಿ ಅಕ್ಕಿ ತಲುಪಿಸುವುದಾಗಿ ಶಾಸಕಿ ರೂಪಕಲಾ ಶಶಿಧರ್ ತಿಳಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, 30 ಸಾವಿರ ದಿನಸಿ ಕಿಟ್ ವಿತರಣೆಗೆ ಸಿದ್ದತೆ ನಡೆಸಿದ್ದೆ ಆದರೆ ಕ್ಷೇತ್ರದಲ್ಲಿ 56ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡುದಾರರಿದ್ದಾರೆ ಎಂದ ಅವರು, ಈಗ ಆ ಎಲ್ಲಾ ಕುಟುಂಬಗಳಿಗೂ ನೆರವಾಗಲು ನಿರ್ಧರಿಸಿರುವುದಾಗಿ ತಿಳಿಸಿದರು.
ನಗರ,ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೂ ತಲಾ 10 ಕೆಜಿ ಅಕ್ಕಿ ತಲುಪಿಸುವ ಕಾರ್ಯಕ್ಕೆ ಗ್ರಾಮೀಣ ಭಾಗದಲ್ಲಿ ತಾವೇ ಚಾಲನೆ ನೀಡುವುದಾಗಿ ತಿಳಿಸಿದ ಅವರು, ಜನತೆ ಧೈರ್ಯಗೆಡದಂತೆ ಕಿವಿಮಾತು ಹೇಳಿದರು.
ನನ್ನ ತಂದೆ,ತಾಯಿಯ ಮಾರ್ಗದರ್ಶನದಂತೆ ನನಗೆ ಮತ ನೀಡಿರುವ ಇಲ್ಲಿನ ಜನರ ಋಣ ತೀರಿಸುವ ಕಾಯಕ ಮಾಡುತ್ತಿದ್ದೇನೆ, ಬಡ ತಾಯಂದಿರು,ರೈತರು, ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಇಂದು ಕೋವಿಡ್ ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ, ಅವರ ನೆರವಿಗೆ ನಿಲ್ಲುವ ಮೂಲಕ ಅವರ ಮನೆ ಮಗಳಾಗಿ ಇಲ್ಲಿ ಕೆಲಸ ಮಾಡುತ್ತೇನೆ ಎಂದರು.


ಸಾವು ತಪ್ಪಿಸಲು ಮನೆಯಲ್ಲೇ ಇರಿ


ಕಣ್ಣೆದುರೇ ಅನೇಕ ಸಹೋದರರು, ಸಹೋದರಿಯರು ಸಾವು ನೋವು ಅನುಭವಿಸಿರುವುದನ್ನು ಕಂಡಿದ್ದೇನೆ, ಕೋವಿಡ್ ಮಹಾಮಾರಿ ಈಗಾಗಲೇ ಅನೇಕರನ್ನು ಬಲಿ ಪಡೆದಿದೆ, ಜನತೆ ಎಚ್ಚೆತ್ತುಕೊಳ್ಳಬೇಕು, ಜೀವ ಉಳಿಸಿಕೊಳ್ಳಲು ಮನೆಯಲ್ಲೇ ಇದ್ದು, ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು ಎಂದರು
ಕೆಲವು ಕುಟುಂಬಗಳಲ್ಲಿ ಕೋವಿಡ್ ಸಾವಿನಿಂದ ಅನಾಥ ಪ್ರಜ್ಞೆ ಕಾಡುತ್ತಿದೆ, ಇಂತಹ ಘಟನೆಗಳನ್ನು ನೋಡಿದಾಗ ಕಣ್ಣಿರಲ್ಲ ಕಣ್ಣಿನಲ್ಲಿ ರಕ್ತ ಹರಿಯುವಂತಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಹಳ್ಳಿಗಳ ರಕ್ಷಣೆಗೆ ಪಣ ತೊಡೋಣ


ಕೋವಿಡ್ ಮೊದಲ ಅಲೆಯಲ್ಲಿ ಈ ಮಾರಿ ನಗರಗಳಿಗೆ ಸೀಮಿತವಾಗಿತ್ತು ಇಂದು ಹಳ್ಳಿಗಳನ್ನು ಹೆಚ್ಚಾಗಿ ಕಾಡುತ್ತಿದೆ, ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ, ಹಳ್ಳಿಗಾಡಿನ ಜನ ಎಚ್ಚರಿಕೆ ವಹಿಸಬೇಕು, ಮನೆಯಲ್ಲೇ ಇದ್ದು, ರೋಗದಿಂದ ಮುಕ್ತವಾಗಿರಬೇಕು ಎಂದರು.
ಹಳ್ಳಿಗಳ ಟೀ ಬೋಂಡಾ ಅಂಗಡಿಗಳು, ಪಾನ್‍ಪರಾಗ್,ಗುಟ್ಕಾ ಮಾರಾಟ ತಡೆಯುವ ಅಗತ್ಯವಿದೆ, ಈ ತಾಣಗಳಲ್ಲೇ ನಮ್ಮ ಹಳ್ಳಿಗಳ ಯುವಕರು, ಹಿರಿಯರು ಕುಳಿತು ಕಾಲ ಕಳೆಯುವ ಪ್ರಯತ್ನ ಮಾಡುತ್ತಾರೆ ಆದ್ದರಿಂದ ಇಂತಹ ಜಾಗಗಳು ಕೋವಿಡ್ ಸೋಂಕು ಹರಡುವ ತಾಣಗಳಾಗುತ್ತಿದ್ದು, ಇವನ್ನು ಮೊದಲು ಮುಚ್ಚಿಸಬೇಕು ಎಂದರು.
ಹಳ್ಳಿಗಳಲ್ಲಿ ಮಾಂಸ ಖರೀದಿ, ವಹಿವಾಟಿಗೆ ಜನ ಮುಗಿಬೀಳದಂತೆ ಎಚ್ಚರವಹಿಸಬೇಕು, ಈ ಸಂಬಂಧ ಗ್ರಾಮ ಪಂಚಾಯಿತಿ ಪಿಡಿಒಗಳು ಆಯಾ ಗ್ರಾಮದ ವಾಟರ್‍ಮೆನ್, ಗ್ರಾ.ಪಂ ಸದಸ್ಯರ ಸಹಕಾರ ಪಡೆದು ಗ್ರಾಮದಲ್ಲಿ ಗುಂಪು ಸೇರದಂತೆ ಜಾಗೃತಿ ಮೂಡಿಸಬೇಕು ಹಳ್ಳಿಗಳನ್ನು ಕೋವಿಡ್ ಮುಕ್ತವಾಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ತಾಕೀತು ಮಾಡಿದರು.
ಕೆಜಿಎಫ್ ನಗರದಲ್ಲೂ ನಗರಸಭಾ ಸದಸ್ಯರ ನೆರವಿನಿಂದ ಸೋಂಕು ತಡೆಗೆ ಜಾಗೃತಿ ಮೂಡಿಸಲಾಗುತ್ತಿದೆ, ಜನ ಪಕ್ಷಾತೀತವಾಗಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದ ಅವರು ಸರ್ಕಾರ ಮಾತ್ರ ನಮ್ಮ ಜನರನ್ನು ಉಳಿಸಲು ಸಾಧ್ಯವಿಲ್ಲ, ನಮ್ಮ ಜೀವ ನಮ್ಮ ಕೈಯಲ್ಲೇ ಇದೆ, ಎಚ್ಚರಿಕೆ ವಹಿಸಿ ಮನೆಯಲ್ಲೇ ಇದ್ದರೆ ಮಾತ್ರ ಸಾವಿನಿಂದ ದೂರ ಇರಬಹುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜಕಾರಣ ಬೇಕಾಗಿಲ್ಲ, ಮತ ನೀಡಿದ ಜನರ ರಕ್ಷಣೆಯ ಹೊಣೆಯರಿತು ಕೆಲಸ ಮಾಡುತ್ತಿದ್ದೇನೆ ಪಕ್ಷಾತೀತವಾಗಿ ಸಹಕಾರ ನೀಡಿ ಎಂದು ಕೆಜಿಎಫ್ ಕ್ಷೇತ್ರದ ಜನತೆಗೆ ಮನವಿ ಮಾಡಿದರು.