2.5 ಲಕ್ಷ ಖಾಸಗಿಶಾಲಾ ಶಿಕ್ಷಕರಿಗೆ ತಲಾ 10ಸಾವಿರ ಪ್ಯಾಕೇಜ್ ಸಾಧ್ಯತೆ ! ಎಂಎಲ್‍ಸಿಗಳ ನಿಯೋಗಕ್ಕೆ ಸಿಎಂ ಭರವಸೆ-ಡಾ.ವೈ.ಎ.ನಾರಾಯಣಸ್ವಾಮಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್‍ನಿಂದಾಗಿ ಸಂಕಷ್ಟಕ್ಕೀಡಾಗಿರುವ ಖಾಸಗಿ ಅನುದಾನ ರಹಿತ ಶಾಲೆ,ಕಾಲೇಜುಗಳ ಬೋಧಕ,ಬೋಧಕೇತರ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ಘೋಷಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸುರೇಶ್‍ಕುಮಾರ್ ನೇತೃತ್ವದ ಎಂಎಲ್‍ಸಿಗಳ ನಿಯೋಗಕ್ಕೆ ಭರವಸೆ ನೀಡಿದ್ದು, ತಲಾ 10 ಸಾವಿರ ಪ್ಯಾಕೇಜ್ ನೀಡುವ ಸಾಧ್ಯತೆ ಇದೆ ಎಂದು ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್‍ಕುಮಾರ್ ನೇತೃತ್ವದಲ್ಲಿ ಶಿಕ್ಷಕ,ಪದವೀಧರ ಕ್ಷೇತ್ರಗಳ ಎಂಎಲ್‍ಸಿಗಳು ಸಂಕಷ್ಟದಲ್ಲಿರುವ ಶಿಕ್ಷಕರ,ಸಿಬ್ಬಂದಿ ನೆರವಿಗೆ ಬರಲು ಮಾಡಿದ ಮನವಿಗೆ ಸಿಎಂ ಸ್ಪಂದಿಸಿದ್ದು ಪ್ಯಾಕೇಜ್ ಘೋಷಿಸಲು ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಖಾಸಗಿ ಶಿಕ್ಷಣ ಕ್ಷೇತ್ರ ಶಿಕ್ಷಣ ವ್ಯವಸ್ಥೆಗೆ ಅಪಾರ ಕೊಡುಗೆ ನೀಡಿದೆ, ಕೋವಿಡ್‍ನಿಂದಾಗಿ ಬಹುತೇಕ ಶಾಲಾ ಕಾಲೇಜುಗಳು ಸಂಕಷ್ಟಕ್ಕೆ ಒಳಗಾಗಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಬೋಧಕ,ಬೋಧಕೇತರ ಸಿಬ್ಬಂದಿ ಜೀವನ ನಡೆಸುವುದು ದುಸ್ತರವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಿಎಂ ಗಮನಕ್ಕೆ ತಂದಿದ್ದಾಗಿ ತಿಳಿಸಿದ್ದಾರೆ.
ಏಪ್ರಿಲ್ 9 ರಿಂದ ತೆಲಂಗಾಣ ರಾಜ್ಯದಲ್ಲಿ ಅಲ್ಲಿನ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಪ್ರತಿ ತಿಂಗಳು 2 ಸಾವಿರ ರೂ ಹಾಗೂ 25 ಕೆಜಿ ಅಕ್ಕಿ ನೀಡುತ್ತಿದೆ. ಅಲ್ಲಿ ಈಗಾಗಲೇ 1.45 ಲಕ್ಷ ಶಿಕ್ಷಕರು ಈ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಸಚಿವ ಸುರೇಶ್‍ಕುಮಾರ್ ಸಿಎಂ ಗಮನಕ್ಕೆ ತಂದರು ಎಂದು ತಿಳಿಸಿದ್ದಾರೆ.
ಆದ್ದರಿಂದ ರಾಜ್ಯದಲ್ಲೂ ಖಾಸಗಿ ಅನುದಾನ ರಹಿತ ಶಾಲೆ,ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೂ ಕೊರೋನಾ ಸಂಕಷ್ಟಕ್ಕೀಡಾಗಿದ್ದು, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪೋಷಕರು ಶುಲ್ಕ ಭರಿಸದ ಕಾರಣ ಶಾಲೆಗಳ ಆಡಳಿತ ಮಂಡಳಿಗಳು ಈ ಶಿಕ್ಷಕರಿಗೆ ವೇತನ ನೀಡುತ್ತಿಲ್ಲ ಎಂದು ತಿಳಿಸಿದರು.
ಶಿಕ್ಷಕ ಸಂಘಗಳ
ಸಹಕಾರದ ಭರವಸೆ
ಸಿಎಂ ಭೇಟಿ ನಂತರ ಸುರೇಶ್‍ಕುಮಾರ್ ಅಧ್ಯಕ್ಷತೆಯಲ್ಲಿ ಎಲ್ಲಾ ಎಂಎಲ್‍ಸಿಗಳು ಸರ್ಕಾರಿ ಪ್ರಾಥಮಿಕ ಶಿಕ್ಷಕರ, ಪ್ರೌಢಶಾಲಾ ಶಿಕ್ಷಕರ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘಗಳ ರಾಜ್ಯ ಪದಾಧಿಕಾರಿಗಳ ಜತೆ ವೀಡಿಯೋ ಸಂವಾದ ನಡೆಸಿ ಈ ಸಂಬಂಧ ಸರ್ಕಾರದ ಜತೆ ಸಹಕರಿಸಲು ಮನವಿ ಮಾಡಲಾಯಿತು.
ಸಂಘಗಳ ಪದಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಸಹಕರಿಸುವ ಭರವಸೆ ನೀಡಿದ್ದಾರೆ. ಒಟ್ಟಾರೆ 15 ತಿಂಗಳಿಂದ ಜಾತಕ ಪಕ್ಷಿಗಳಂತೆ ಕಾದಿದ್ದ ಸುಮಾರು 2.5 ಲಕ್ಷ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕ,ಸಿಬ್ಬಂದಿಗೆ ಕನಿಷ್ಟ 10 ಸಾವಿರ ರೂ ಪ್ಯಾಕೇಜ್ ಘೋಷಿಸುವ ಕಾಲ ಸನ್ನಿಹಿತವಾಗಿದೆ ಎಂಬ ಶುಭ ಸೂಚನೆಯನ್ನು ಸಿಎಂ ನೀಡಿದ್ದಾರೆ ಎಂದ ವೈ.ಎ.ಎನ್ ತಿಳಿಸಿದ್ದಾರೆ.
ಸಿಎಂ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸಚಿವ ಸುರೇಶ್‍ಕುಮಾರ್ ಅವರೊಂದಿಗೆ ಎಂಎಲ್‍ಸಿಗಳಾದ ಪುಟ್ಟಣ್ಣ, ಸುಶೀಲ್‍ನಮೋಶಿ, ಚಿದಾನಂದ ಎಂ.ಗೌಡ, ಅರುಣಷಹಪುರ ಮತ್ತಿತರರು ಉಪಸ್ಥಿತರಿದ್ದರು
.