ಪತ್ರಕರ್ತರಿಗೆ ಆಪತ್ಕಾಲದಲ್ಲಿ ನೆರವಿಗೆ 1 ಕೋ.ರೂ ಕ್ಷೇಮಾಭಿವೃದ್ದಿ ನಿಧಿ :25 ಸಾವಿರ ಮೂಲಧನದೊಂದಿಗೆ ಆರಂಭ-ಬಿ.ವಿ.ಗೋಪಿನಾಥ್ ಘೋಷಣೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಆಪತ್ಕಾಲದಲ್ಲಿ ನೆರವಾಗಲು ಪತ್ರಕರ್ತರಿಗಾಗಿ 1 ಕೋಟಿ ರೂಗಳ ಕ್ಷೇಮಾಭಿವೃದ್ದಿ ನಿಧಿ ಸ್ಥಾಪನೆ ಮಾಡುವುದಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಘೋಷಣೆ ಮಾಡಿದರು.
ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಮಸ್ಯೆಗಳ ಕುರಿತು ಚರ್ಚೆ ಹಾಗೂ ಕಾರ್ಯಚಟುವಟಿಕೆಗಳ ಕುರಿತು ನಡೆದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪತ್ರಕರ್ತರ ಕ್ಷೇಮಾಭಿವೃದ್ದಿಯನ್ನು 25 ಸಾವಿರ ರೂಗಳ ಮೂಲಧನ ಹಾಕಿ ಆರಂಭಿಸುವ ಮೂಲಕ ಈ ನಿಧಿಯನ್ನು ಬೆಳೆಸೋಣ, ಪತ್ರಕರ್ತರಿಗೆ ಆರೋಗ್ಯ ಮತ್ತಿತರ ಸಮಸ್ಯೆಗಳಿಗೆ ನೆರವಾಗುವ ಸದುದ್ದೇಶದಿಂದ ಈ ಕಾರ್ಯ ಮಾಡುತ್ತಿರುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಟಿಯ ಪಾವಿತ್ರ್ಯತೆ ಉಳಿಸಿ

ಪತ್ರಕರ್ತರ ಭವನದಲ್ಲಿ ನಡೆಯುವ ಪತ್ರಿಕಾಗೋಷ್ಟಿಯ ಪಾವಿತ್ರ್ಯತೆಯನ್ನು ಕಾಪಾಡಲು ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದ ಅವರು, ಈ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ, ಯಾರೇ ಇಲ್ಲಿ ವೃತ್ತಿಗೆ ಅಗೌರವ ಬರುವ ರೀತಿಯಲ್ಲಿ ವರ್ತಿಸಿದರೆ ಗಂಭೀರವಾಗಿ ಪರಿಗಣಿಸುವ ಮೂಲಕ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಪತ್ರಕರ್ತರ ಸದಸ್ಯತ್ವದ ಕುರಿತು ಮಾತನಾಡಿದ ಅವರು, ಕಾರ್ಯನಿರತರಿಗೆ ಆದ್ಯತೆ, ಕಾರ್ಯಮರೆತವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಸದಸ್ಯತ್ವ ಪರಿಷ್ಕರಿಸೋಣ ಎಂದು ತಿಳಿಸಿದರು.
ತಿಂಗಳಲ್ಲಿ 2 ದಿನ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ನಡೆಸಲು ಕ್ರಮವಹಿಸಲಾಗುವುದು ಎಂದ ಅವರು, ಇದರಿಂದಾಗಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ಪತ್ರಕರ್ತರು ಸಮಾಜಕ್ಕೆ ನೆರವಾಗುವ ಪ್ರಯತ್ನ ನಡೆಸೋಣ ಎಂದು ತಿಳಿಸಿ, ಮೊದಲು ಸಂವಾದಕ್ಕೆ ಜಿಲ್ಲಾಧಿಕಾರಿಗಳು, ಎಸ್ಪಿ, ಜಿಪಂ ಸಿಇಒ ಅವರನ್ನು ಒಂದೊಂದು ದಿನ ಒಬ್ಬೊಬ್ಬರನ್ನು ಆಹ್ವಾನಿಸೋಣ ಎಂದರು.
ಈ ಸಂವಾದದಿಂದಾಗಿ ಪತ್ರಕರ್ತರು ಹಾಗೂ ಸರ್ಕಾರದ ನಡುವೆ ಬಾಂಧವ್ಯ ವೃದ್ದಿಯ ಜತೆಗೆ ಸಮಾಜಮುಖಿಯಾಗಿ ಕೆಲಸ ಮಾಡುವ ಅವಕಾಶವೂ ಲಭ್ಯವಾಗುತ್ತದೆ ಎಂದು ತಿಳಿಸಿದರು.

ಪತ್ರಕರ್ತರ ಸಂಘದ ವೆಬ್‌ಸೈಟ್ ಮಾಡಿ

ಪತ್ರಕರ್ತರು ಹಾಗೂ ಅವರ ಕುಟುಂಬ ಸದಸ್ಯರಿಗಾಗಿ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸದಸ್ಯರ ಪ್ರಸ್ತಾಪಕ್ಕೆ ಸಭೆ ಸಹಮತ ನೀಡಿತು ಮತ್ತು ಜಿಲ್ಲಾಮಟ್ಟದಲ್ಲಿ ಸಣ್ಣ ಪತ್ರಿಕೆಗಳಿಗೆ ಹೆಚ್ಚಿನ ಜಾಹಿರಾತು ಸಿಗಲು ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲೆ ಒತ್ತಡ ಹಾಕಲು ನಿರ್ಧರಿಸಲಾಯಿತು.
ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಪತ್ರಕರ್ತರ ಸಂಘದಿಂದ ವೆಬ್‌ಸೈಟ್ ಮಾಡಿ, ಅದರಲ್ಲಿ ಜಿಲ್ಲೆಯ ಪತ್ರಕರ್ತರ ವಿಶೇಷ ಲೇಖನಗಳು,ವರದಿಗಳನ್ನು ಇಡೀ ಜಗತ್ತಿನಾದ್ಯಂತ ವೀಕ್ಷಿಸಲು ಅನುವು ಮಾಡಿಕೊಡಬೇಕು ಎಂದರು.
ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಗ್ರಂಥಾಲಯಕ್ಕೆ ಮಾಧ್ಯಮ ಅಕಾಡೆಮಿಯಿಂದ ಪ್ರಕಟಗೊಂಡ 10 ಸಾವಿರ ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವುದಾಗಿ ಗಣೇಶ್ ಘೋಷಿಸಿದರು.
ಜಿಲ್ಲೆಯ ಅನೇಕ ಪತ್ರಕರ್ತರು ಸಂವಾದದಲ್ಲಿ ಪಾಲ್ಗೊಂಡು ತಮ್ಮ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‌ಕುಮಾರ್, ಬ್ಯಾಲಹಳ್ಳಿ ಗೋವಿಂದಗೌಡ, ಸಂಘದ ನಿಕಟಪೂರ್ವ ಅಧ್ಯಕ್ಷ ವಿ.ಮುನಿರಾಜು ಹಿರಿಯ ಪತ್ರಕರ್ತರಾದ ಸಿ.ಎಂ.ಮುನಿಯಪ್ಪ, ಬಿ.ಸುರೇಶ್, ಟಿವಿ9 ರಾಜೇಂದ್ರ, ಶ್ರೀನಿವಾಸಮೂರ್ತಿ, ಅಬ್ಬಣಿ ಶಂಕರ್, ಮಾಮಿ, ಗೋಪಿಕಾ ಮಲ್ಲೇಶ್, ಪದಾಧಿಕಾರಿಗಳಾದ ಟೇಕಲ್ ಲಕ್ಷ್ಮೀಶ್, ಸಿ.ಜಿ.ಮುರಳಿ,ಮಾಲೂರು ರವಿ, ಕೋ.ನಾ.ಪ್ರಭಾಕರ್ ಮತ್ತಿತರ 50ಕ್ಕೂ ಹೆಚ್ಚು ಪತ್ರಕರ್ತರು ಹಾಜರಿದ್ದರು.