ಹೆಣ್ಣುಮಕ್ಕಳ ಶ್ರೀರಕ್ಷೆ ಇದ್ದರೆ ಇಡೀ ರಾಜ್ಯದಲ್ಲಿ ಡಿಸಿಸಿ ಬ್ಯಾಂಕುಗಳ ಮೂಲಕ ಶೂನ್ಯ ಬಡ್ಡಿ ಸಾಲ ಕೊಡುವ ಆಂದೋಲನ ರೂಪಿಸುವೆ-ರಮೇಶ್‍ಕುಮಾರ್

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಹೆಣ್ಣುಮಕ್ಕಳ ಶ್ರೀರಕ್ಷೆ ಇದ್ದರೆ ಇಡೀ ರಾಜ್ಯದಲ್ಲಿ ಡಿಸಿಸಿ ಬ್ಯಾಂಕುಗಳ ಮೂಲಕ ಶೂನ್ಯ ಬಡ್ಡಿ ಸಾಲ ಕೊಡುವ ಆಂದೋಲನ ರೂಪಿಸುವೆ-ರಮೇಶ್‍ಕುಮಾರ್

ಕೋಲಾರ:- ಹೆಣ್ಣುಮಕ್ಕಳ ಆಶೀರ್ವಾದ ಮತ್ತು ಶ್ರೀರಕ್ಷೆ ಇದ್ದರೆ ಹೆಣ್ಣು ಮಕ್ಕಳ ಸ್ವಾವಲಂಬಿ ಜೀವನಕ್ಕಾಗಿ ಡಿಸಿಸಿ ಬ್ಯಾಂಕುಗಳ ಮೂಲಕ ಇಡೀ ರಾಜ್ಯದಲ್ಲಿ ತಾಯಂದಿರಿಗೆ ಶೂನ್ಯ ಬಡ್ಡಿಯ ಸಾಲ ಕೊಡಿಸುವ ಬೃಹತ್ ಆಂದೋಲನ ರೂಪಿಸುವುದಾಗಿ ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು.
ಕೋಲಾರ ಜಿಲ್ಲೆಯ ರಾಯಲ್ಪಾಡು ಗ್ರಾಮದ ರೈತರ ಸೇವಾ ಸಹಕಾರ ಬ್ಯಾಂಕ್ ಮತ್ತು ಡಿ.ಸಿ.ಸಿ ಬ್ಯಾಂಕ್ ಸಹಯೋಗದಲ್ಲಿ ಹೋಬಳಿಯ 185 ಸ್ತ್ರೀ ಶಕ್ತಿ ಸಂಘಗಳಿಗೆ 9.12ಕೋಟಿ ಸಾಲ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.
ಸಬಲೀಕರಣಕ್ಕಾಗಿ, ಬಡ್ಡಿಕೋರರ ಹಾಗೂ ಸಿರಿವಂತರ ಹತ್ತಿರ ಕೈ ಚಾಚದೆ, ಸಾಲಕ್ಕಾಗಿ ನೆಂಟರ ಹತ್ತಿರ ಹೋಗದಂತೆ ಹೆಣ್ಣು ಮಕ್ಕಳು ಸ್ವಾವಲಂಭಿ ಜೀವನ ನಡೆಸುವಂತೆ ಮಾಡಲು ಶ್ರಮಿಸುವುದಾಗಿ ತಿಳಿಸಿದರು.
ಸಹಕಾರ ಬ್ಯಾಂಕುಗಳಿಂದ ನಂಬಿಕೆ ಆಧಾರದಲ್ಲಿ ಸಾಲ ನೀಡಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಯಾವುದಾದರೂ ಒಡವೆ ಅಥವಾ ಭೂಮಿಯನ್ನು ಅಡವಿಟ್ಟರೆ ಮಾತ್ರ ಸಾಲ ನೀಡುತ್ತಾರೆ. ಇದನ್ನು ಮನಗಂಡು ನಂಬಿಕೆಯನ್ನು ಉಳಿಸುವ ಕೆಲಸ ಎಲ್ಲರೂ ಮಾಡಬೇಕಾಗಿದೆ ಎಂದರು.
ಮನುಷ್ಯನ ಆಯಸ್ಸು ತನ್ನ ಕೈಯಲ್ಲಿ ಇರುವುದಿಲ್ಲ ಇದ್ದು ಸಾಯುವ ಮಧ್ಯದಲ್ಲಿ ಒಳ್ಳೆಯ ಕೆಲಸಗಳು ಮಾಡಬೇಕಿದೆ. ಇದಕ್ಕೆ ಉದಾಹರಣೆ ಎಂದರೆ 150ನೇ ವರ್ಷದ ಗಾಂಧಿ ಜಯಂತಿ ಇಂದಿಗೂ ನಾವು ಆಚರಣೆ ಮಾಡುತ್ತಿದ್ದೇವೆ ಎಂದರೆ ಅವರ ಸೇವೆಯನ್ನು ಗುರ್ತಿಸಿ ಆ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಒಳ್ಳೆಯತನ ಕಾಣಿಸುವ ಕೆಲಸ ಮಾಡಬೇಕಿದೆ ಎಂದರು.
ಸರ್ಕಾರಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಸಾವಿರಾರು ಕೋಟಿ ವಂಚನೆ ಮಾಡುವವರಿಗೆ ಸಾಲ ನೀಡುತ್ತಾರೆ. ಸಣ್ಣ ರೈತರು ಮತ್ತು ಹೆಣ್ಣು ಮಕ್ಕಳು ಮೋಸ, ದ್ರೋಹ ಏನೂ ತಿಳಿಯದೆ ತಾನು ಪಡೆದ ಸಾಲವನ್ನು ಮರುಪಾವತಿ ಮಾಡುತ್ತಿದ್ದರೂ ಸಾಲ ನೀಡಲು ಮೀನಾಮೇಶ ಏಣಿಸುತ್ತಿದ್ದ ದಿನಗಳನ್ನು ಕಂಡಿದ್ದೇನೆ ಎಂದರು.
ಸ್ವಾತಂತ್ರ್ಯದ ನಂತರ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಡಿ.ಸಿ.ಸಿ. ಬ್ಯಾಂಕ್ ವತಿಯಿಂದ ದೊಡ್ಡ ಆಂದೋಲನದ ರೀತಿಯಲ್ಲಿ ಸಾಲವನ್ನು ವಿತರಣೆ ಮಾಡುವ ಮೂಲಕ ನಮ್ಮ-ನಿಮ್ಮ ನಂಬಿಕೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಇದು ಚುನಾವಣೆಯ ಸಂಧರ್ಭವವೂ ಅಲ್ಲ ಚುನಾವಣೆಗಾಗಿ ಮಾಡುತ್ತಿರುವ ಕೆಲಸವೂ ಅಲ್ಲ ಯಾರೂ ಏನೇ ಮಾತನಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಚುನಾವಣೆಗೆ ಇನ್ನು ಮೂರುವರೆ ವರ್ಷಗಳ ಕಾಲವಿದೆ. ಮುಂದಿನ 6 ತಿಂಗಳಲ್ಲಿಯೇ ಚುನಾವಣೆ ಬರಲೂ ಬಹುದು ಎಂದರು.
ಮಹಿಳಾ ಸ್ವ ಸಹಾಯ ಸಂಘಗಳಿಗೆ ಶೂನ್ಯ ಬಡ್ಡಿಯಲ್ಲಿ ಒಂದು ಲಕ್ಷ ಸಾಲ ನೀಡಬೇಕು ಎಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಚಿಂತನೆ ಮಾಡಲಾಗಿತ್ತು. ಆದರೆ ಸರ್ಕಾರ ಬದಲಾದ ಕಾರಣ ಅದನ್ನು ಅನುಷ್ಠಾನ ತರಲು ಈಗಿನ ಮುಖ್ಯಮಂತ್ರಿಗಳಿಗೆ ಬಿಡುವಿಲ್ಲದಂತಾಗಿದೆ ಎಂದರು.
ಕೆಲವರಿಗೆ ರಾಜಕೀಯ ಎಂದರೆ ಹಾವಾಡಿಗನಂತೆ ಹಾವಾಡಿಸುವುದು ಎಂದುಕೊಂಡಿದ್ದಾರೆ ರಾಜಕೀಯ ಎನ್ನುವುದು ಜನಸೇವೆ ಮಾಡುವ ಕಾಳಜಿ ಕರುಳಿನಿಂದ ಬರಬೇಕು ಎಂದ ಅವರು ರಾಯಲ್ಪಾಡು, ಒಬಳೇಶ್ವರ ಬೆಟ್ಟ ಮತ್ತು ಸುಣ್ಣಕಲ್ಲು ಬೆಟ್ಟಗಳ ಸಾಲಿನಲ್ಲಿ ಮಳೆ ನೀರನ್ನು ತಡೆಯಲು ಪ್ರಾಜೆಕ್ಟ್‍ಗಳನ್ನು ಮಾಡಿ ಈ ಭಾಗದಲ್ಲಿ ನೀರು ನಿಲ್ಲಸುವ ಕೆಲಸವನ್ನು ಮಾಡಲಾಗುವುದು ಎಂದರು.


ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಕೇಳಲು ಹೋದರೆ ನಿಮ್ಮನ್ನು ಕುಳ್ಳರಿಸಿ ಮಾತನಾಡುವುದು ಅವರಿಗೆ ಕಷ್ಟ ನಾವು ತಾಂಬೂಲ ಹರಿಶಿನ ಕುಂಕುಮ ಹೂ ನೀಡಿ ನಿಮ್ಮ ಮನೆ ಬಾಗಿಲಿಗೆ ಬಂದು ಸಾಲ ಕೊಡುತ್ತಿದ್ದೇವೆ ಎಂದರು.
ಸಾಲ ಪಡೆಯುವ ಮಹಿಳೆಯರು ಮರುಪಾವತಿ ಮಾಡದಿದ್ದರೆ ಬ್ಯಾಂಕಿಗೆ ಮೋಸಮಾಡಿದಂತೆ ಮರುಪಾವತಿ ಮಾಡಿ ಗೌರವ ಉಳಿಸಬೇಕು. ಬಡ್ಡಿ ರಹಿತವಾಗಿ ಸಾಲ ನೀಡುವ ಶಕ್ತಿ ಡಿ.ಸಿ.ಸಿ ಬ್ಯಾಂಕಿಗೆ ಶಕ್ತಿ ತುಂಬಿದ ಶಾಸಕ ರಮೇಶ್ ಕುಮಾರ್‍ರವರು ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಕೊಟ್ಟಂತಹ ಅಪಾರವಾದ ಕೊಡುಗೆ ಎಂದರೆ ತಪ್ಪಾಗಲಾರದು ಎಂದರು.
ಇಂದು ಸಾಲ ಪಡೆಯುತ್ತಿರುವುದು ಮುಖ್ಯವಲ್ಲ ಇದು ಮಹಿಳೆಯರ ಬ್ಯಾಂಕ್ ಎಂದೇ ಪ್ರಸಿದ್ದಿ ಪಡೆಯುತ್ತಿದೆ ಯಾರು ಎಷ್ಟೇ ಟೀಕೆ ಮಾಡಿದರೂ ಈ ಸೇವೆಯನ್ನು ನಿರಂತರವಾಗಿ ಮುನ್ನೆಡುಸುತ್ತೇವೆ ಇದರ ಜೊತೆಗೆ ವಿವಿಧ ರೀತಿಯ ಸಾಲ ನೀಡಲು ಶುಕ್ರವಾರ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಜಿಲ್ಲಾ ಪರಿಷತ್ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನರೇಶ್, ಮಾಜಿ ಸದಸ್ಯ ಕೆ.ಕೆ. ಮಂಜುನಾಥ್, ಮುದಿಮುಡುಗು ಸೋಸೈಟಿ ಅಧ್ಯಕ್ಷ ಬಗ್ಗಲಘಟ್ಟ ಶ್ರೀನಿವಾಸರೆಡ್ಡಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗರಾಜ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂಜಯ್‍ರೆಡ್ಡಿ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಕೃಷ್ಣಾರೆಡ್ಡಿ, ಗುಡಿಸಿವಾರಿಪಲ್ಲಿ ರೆಡ್ಡಪ್ಪ, ಮಂಜೇವಾರಿಪಲ್ಲಿ ನಾರಾಯಣರೆಡ್ಡಿ, ಗ್ರಾ. ಪಂ. ಸದಸ್ಯ ಗಂಗಾಧರ್, ಎ.ಪಿ.ಎಂ.ಸಿ. ನಿರ್ದೇಶಕ ಪೆದ್ದರೆಡ್ಡಿ, ಸಹಕಾರಿ ಬ್ಯಾಂಕುಗಳ ಕಾರ್ಯದರ್ಶಿಗಳಾದ ನಾರಾಯಣಸ್ವಾಮಿ, ವೀರಪ್ಪರೆಡ್ಡಿ, ಪ್ರಭಾಕರರೆಡ್ಡಿ ಇತರರು ಇದ್ದರು.