ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಹಿರಿಯ ನಾಗರೀಕರಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು – ಕೆ. ಶ್ರೀನಿವಾಸಗೌಡ
ಕೋಲಾರ : ಮಕ್ಕಳು ತಂದೆ ತಾಯಿಗಳನ್ನು ಗೌರವಿಸುವುದರ ಜೊತೆಗೆ ಹಿರಿಯ ನಾಗರೀಕರ ಸಮಸ್ಯೆಗಳಿಗೆ ಸ್ಪಂಧಿಸುವಂತಾಗಬೇಕು ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಶ್ರೀನಿವಾಸ್ ಗೌಡ ಅವರು ತಿಳಿಸಿದರು.
ಇಂದು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ವಿಕಲಚೇತÀನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕೋಲಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ನಾಗರೀಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವ ಹಿರಿಯ ನಾಗರೀಕರ ದಿನಾಚರಣೆಯು ಹಿರಿಯರಿಗೆ ದೊರೆತಿರುವಂತಹ ಒಳ್ಳೆಯ ಕಾರ್ಯಕ್ರಮವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣದ ಜೊತೆಗೆ ಅವರಿಗೆ ಅವಶ್ಯಕವಾದುವುಗಳನ್ನು ನೀಡಿ ಉತ್ತಮವಾಗಿ ಬೆಳೆಸುತ್ತಾರೆ. ಆದರೆ ನಂತರ ಅವರು ತಮ್ಮ ಪೋಷಕರನ್ನೇ ದೂರ ಮಾಡುತ್ತಿರುವ ಸಂಗತಿಗಳು ಹೆಚ್ಚಾಗುತ್ತಿದ್ದು ಇದು ಸಂಪೂರ್ಣ ನಿಲ್ಲಬೇಕು ಎಂದು ತಿಳಿಸಿದರು.
ಹಿರಿಯ ನಾಗರೀಕರ ಜೊತೆಯಲ್ಲಿ ಅವರ ಮಕ್ಕಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಆಗ ತಂದೆ ತಾಯಿಗಳನ್ನು ನೋಡಿಕೊಳ್ಳುವ ಕಾರ್ಯ ಮಾಡುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ಹೇಗೆ ಸಾಕುತ್ತಾರೆ ಅದೇ ರೀತಿ ವಯಸ್ಸಾದ ಹಿರಿಯರನ್ನು ಮಕ್ಕಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಎಂ.ಜಿ.ಪಾಲಿ ಅವರು ಮಾತನಾಡಿ, ಹಿರಿಯರನ್ನು ಎಲ್ಲರು ಗೌರವದಿಂದ ಕಾಣಬೇಕು. ಹೆಚ್ಚಿನ ಬೆಲೆಯನ್ನು ನೀಡುವುದರ ಮೂಲಕ ಅವರು ಹೇಳಿದ ಹಿತನುಡಿಗಳನ್ನು ಅಳವಡಿಸಿಕೊಳ್ಳಬೇಕು, ಕೆಲವೂಂದು ಕುಟುಂಬಗಳಲ್ಲಿ ಕೌಟುಂಬಿಕ ಸಮಸ್ಯೆಗಳಿಂದ ಹಿರಿಯರನ್ನು ವೃದ್ಧಾಶ್ರಮದಲ್ಲಿ ಸೇರಿಸುವಂತಾಗಿದೆ ಹಾಗೆ ಮಾಡದೇ ಮನೆಯಲ್ಲೇ ಅವರನ್ನು ಹಾರೈಕೆ ಮಾಡಬೇಕು ಎಂದರು.
ಹಿರಿಯರ ತೀರ್ಮಾನಗಳಿಗೆ ಬೆಲೆಕೊಟ್ಟು ಅವುಗಳನ್ನು ಪಾಲನೆ ಮಾಡಬೇಕು ಹಿರಿಯರನ್ನು ಭೇಟಿ ಮಾಡಿ ಅವರ ಜೀವನದಲ್ಲಿನ ಅನುಭವಗಳನ್ನು ಅರಿತು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಹಲವು ಉದ್ದೇಶಗಳನ್ನು ಇಟ್ಟುಕೊಂಡು ಹಿರಿಯ ನಾಗರೀಕರ ಇಲಾಖೆಯನ್ನು ಪ್ರಾರಂಭ ಮಾಡಲಾಗಿದ್ದು, ಹಿರಿಯ ನಾಗರೀಕರಿಗೆ ಸರ್ಕಾರದಿಂದ ಬರುವಂತಹ ಸಾಧನಾ ಸಲಕರಣೆಗಳು ನೀಡಲಾಗುವುದು. ವಿಶೇಷವಾಗಿ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಹಮ್ಮಿಕೊಳ್ಳಲಾಗುವುದು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ತಪ್ಪದೇ ಗುರುತಿನ ಕಾರ್ಡ್ಗಳನ್ನು ಸೇವಾಸಿಂಧು ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ. ಈ ಕಾರ್ಡ್ನಿಂದ ಬಸ್ಸು, ರೈಲು, ವಿಮಾನ, ಆಸ್ಪತ್ರೆಗಳ ವಿಶೇಷ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಹಿರಿಯ ನಾಗರೀಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹಲವು ಅನುದಾನ ನೀಡುವಂತಹ ವ್ಯವಸ್ಥೆಯಿದೆ. ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಹಿರಿಯ ನಾಗರೀಕರು ದಿನಪೂರ್ತಿ ಕಳೆಯುವಂತಹ ಕಾರ್ಯ ಕ್ರಮ, ಎನ್.ಜಿ.ಒ ಗಳಿಂದ ಮೊಬೈಲ್ ಮೆಡಿಕೇರ್ ಸೆಂಟರ್ಗಳಿಂದ ಗ್ರಾಮಗಳಿಗೆ ಬೇಟಿ ನೀಡಿ ಹಿರಿಯ ನಾಗರೀಕರಿನ್ನು ವೈದ್ಯಕೀಯ ತಪಾಸಣೆ ಮಾಡುವ ಕಾರ್ಯು ಮಾಡಲಾಗುವುದು. ಪಾಲಕರ ಪೋಷಣಾ ರಕ್ಷಣಾ ಕಾಯ್ದೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ 600ರೂ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ತಿಳಿಸಿದರು.
ಕೆ.ಜಿ.ಎಫ್ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಸಿ.ಆರ್. ಆಶೋಕ್ ಅವರು ಮಾತನಾಡಿ, ಹಿರಿಯ ನಾಗರೀಕರು ದೇಶದ ಆಸ್ತಿ ಹಿರಿಯರನ್ನು ಗೌರವದಿಂದ ಕಾಣಬೇಕು. ಬಾಲ್ಯದಲ್ಲೇ ಮಕ್ಕಳಿಗೆ ಸಂಸ್ಕಾರವನ್ನು ತಂದೆ-ತಾಯಿಗಳು ಕಲಿಸಬೇಕಾಗುತ್ತದೆ. ವಿದ್ಯಾವಂತ ಮಕ್ಕಳು ಹೆಚ್ಚಾಗಿ ತಂದೆ-ತಾಯಿಯರನ್ನು ತೊರೆಯುತ್ತಿದ್ದಾರೆ. ಮಧ್ಯಮ ಹಂತದ ವಿದ್ಯಾರ್ಥಿಗಳು ತಂದೆ-ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ದುಡಿಮೆಯನ್ನು ಅವಲಂಬಿಸಿ ಹಿರಿಯರನ್ನು ಮರೆಯುತ್ತಿದ್ದಾರೆ ಎಂದರು.
ಹಿರಿಯ ನಾಗರೀಕರು ಒಳ್ಳೆಯ ಸ್ನೇಹಿತರ ಬಳಗವನ್ನು ರಚಿಸಿಕೊಂಡು ಯೋಗ, ಧ್ಯಾನ, ಭಜನೆ, ನಾಟಕ, ವಾಯುವಿಹಾರ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಸರ್ಕಾರವು ರೂಪಿಸಿರುವ ಸಂಧ್ಯಾ ಸುರಕ್ಷಾ ಯೋಜನೆ, ನಿವೃತ್ತಿ ವೇತನ, ಇನ್ನಿತರ ಹಲವು ಯೋಜನೆಗಳನ್ನು ಸುದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಹಿರಿಯ ನಾಗರೀಕರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಯೋಜನಾ ನಿರ್ದೇಶಕರು ಮತ್ತು ಶಿಶು ಅಭಿವೃದ್ದಿ ಅಧಿಕಾರಿಯಾದ ಜಯದೇವಿ, ಜಿಲ್ಲಾ ವಿಕಲಚೇತರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧಿಕಾರಿಯಾದ ವೆಂಕಟರಾಮ್, ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ದ್ಯಾವರಪ್ಪ, ಜಾಗೃತಿ ಸೇವಾ ಸಂಸ್ಥೆಯ ಕಾರ್ಯದರ್ಶಿಯಾದ ಧನರಾಜ್, ನಿವೃತ್ತ ಪೋಲೀಸ್ ಸಂಘದ ಗೌರವಾಧ್ಯಕ್ಷರಾದ ವೆಂಕಟಸ್ವಾಮಿ ಸೇರಿದಂತೆ ಅಂಗನವಾಡಿ ಕೇಂದ್ರಗಳ ರಾಜ್ಯಾಧ್ಯಕ್ಷರಾದ ಕಲ್ಪಮಂಜಲಿ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.