

ಉಡುಪಿ, ಫೆ.18 “ಹಿಂದೂಳಿದವರು ಮುಖ್ಯವಾಹಿನಿಗೆ ಬರಬೇಕು ಶಿಕ್ಷಣ ಪಡೆಯಬೇಕು ಸಾಂಸ್ಕ್ರತಿಕವಾಗಿ ಮುಂದೆಬರಬೇಕು ಈ ಥರಹದ ಹಲವಾರು ಉದ್ದೇಶಗಳನ್ನು ಇಟ್ಟುಕೊಂಡು ಈ ಸಂಸ್ಥೆಯನ್ನು ಕಟ್ಟಿದ್ದೇವೆ, ರಾಜಕೀಯದಲ್ಲಿ ಇಂದು ನಾವು ಜಯಿಸುತ್ತೇವೆ ಮತ್ತೊಮ್ಮೆ ಇತರರು ಗೆಲ್ಲಬಹುದು ರಾಜಕೀಯ ಶಾಸ್ವತ್ವಲ್ಲ ಆದರೆ ಮಾನವ ಬಂಧುತ್ವ ವೇದಿಕೆಯಂತ ವೇದಿಕೆ ನಿರಂತರವಾಗಿ ಸಮಾಜಕ್ಕೆ ಸೇವೆ ದೊರಕಲಿದೆ, ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸುತ್ತದೆ” ಎಂದು ಮಾನವ ಬಂಧುತ್ವ ವೇದಿಕೆಯ ಸಂಸ್ಥಾಕರಾದ ಲೋಕಪಯೋಗಿ ಸಚಿವ ಸನ್ಮಾನ್ಯ ಸತೀಶ್ ಜಾರಕಿ ಹೋಳಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ, ಮಹಿಳಾ ಬಂಧುತ್ವ ವೇದಿಕೆ ಕರ್ನಾಟಕ ಮಂಗ್ಳೂರು ವಿಭಾಗ ಇವರ ಆಶ್ರಯದಲ್ಲಿ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಹೌಸ್ ಉಡುಪಿ ಅಂಬಾಗಿಲು ಕಕ್ಕುಂಜೆಯ ಅನುಗ್ರಹದಲ್ಲಿ 17 ರಂದು ಪದಾಧಿಕಾರಿಗಳ ಸಮಾವೇಶ ಹಾಗೂ ವಿಚಾರ ಸಂಕಿರಣದ ಉದ್ಘಾಟಿಸಿ ಅವರು ಸಂದೇಶ ನೀಡಿದರು.
ವಿಚಾರ ಸಂಕಿರಣದ ಬಹುಸಂಸ್ಕ್ರತಿಯ ಅಳಿವು-ಉಳಿವು ಬಗ್ಗೆ ಹಿರಿಯ ಪತ್ರಕರ್ತ, ಚಿಂತಕರಾದ ದಿನೇಶ್ ಅಮೀನ್ ಮಟ್ಟು ಮಾತನಾಡುತ್ತ “ತುಳುನಾಡನ್ನು ಬಂಟರು, ಬಿಲ್ಲವರು, ಮುಸ್ಲಿಮರು, ಕ್ರಿಶ್ಚಿಯನ್ನರು ಕೂಡಿ ಕಟ್ಟಿದರು. ಬಹುಸಂಸ್ಕೃತಿಯ ತುಳುನಾಡನ್ನು ಪ್ರೀತಿಯಿಂದ ಕಟ್ಟಲಾಗಿದೆಯೇ ಹೊರತು ಧ್ವೇಷ, ಹಿಂಸೆಯಿಂದಲ್ಲ. ಇಲ್ಲಿನ ಕೂಡು ಸಂಸ್ಕೃತಿಯನ್ನು ಒಡೆಯುವ ಕಾರ್ಯ ನಡೆಸಲಾಗುತ್ತಿದೆ” ಎಂದು ಅವರು ಅಭಿಪ್ರಾಯ ಪಟ್ಟರು.
ಇಡೀ ದೇಶದಲ್ಲಿ ಕೋಮುವಾದದ ಬೀಜವನ್ನು ಬಾಬರಿ ಮಸೀದಿ ಧ್ವಂಸದ ಬಳಿಕ ಬಿತ್ತಲಾದರೆ, ಕರಾವಳಿಯಲ್ಲಿ 80ರ ದಶಕದಲ್ಲೇ ಬಿತ್ತಲಾಗಿತ್ತು. ಇಂದು ಕರಾವಳಿಯಲ್ಲಿ ವಿದ್ಯೆ ಹಾಗೂ ಧರ್ಮ ವ್ಯಾಪಾರವಾಗಿದೆ. ಜೊತೆಗೆ ರಾಜಕೀಯ ಹಾಗೂ ಸಂಬಂಧ ಕೂಡ ವ್ಯಾಪಾರವಾಗಿದೆ. ಇಲ್ಲಿನ ಬಹು ಸಂಸ್ಕೃತಿಯನ್ನು ಉದ್ದೇಶ ಪೂರ್ವಕವಾಗಿ ನಾಶ ಮಾಡಲಾಗಿದೆ ಎಂದು ಅವರು ತಿಳಿಸಿದರು. ಇಂದು ದೇಶದಲ್ಲಿ ಸಂವಿಧಾನೇತರ ಶಕ್ತಿಗಳು ಆಡಳಿತ ನಡೆಸುತ್ತಿವೆ. ಬಿಜೆಪಿ ಪಕ್ಷ ಇಂದು ಆರೆಸ್ಸೆಸ್ ಇಲ್ಲದೇ ಏನು ಮಾಡಲು ಆಗದ ಸ್ಥಿತಿಯಲ್ಲಿದೆ. ಅದಕ್ಕೆ ಪರ್ಯಾಯವಾಗಿ ನಾವು ರಾಜಕೀಯೇತರವಾಗಿ ಸೆಕ್ಯುಲರ್ ಪರಿವಾರವನ್ನು ಕಟ್ಟಿ ಬಲಪಡಿಸುವ ಅಗತ್ಯ ಇದೆ. ಆ ಮೂಲಕ ಬಹುಸಂಸ್ಕೃತಿಯಲ್ಲಿರುವ ಸಂವಿಧಾನ ಆಶಯಗಳಾದ ಸ್ವಾತಂತ್ರ್ಯ ಸಮಾನತೆ, ಸಹೋದರತ್ವವನ್ನು ಉಳಿಸಬೇಕಾಗಿದೆ ಎಂದರು.
‘ಬಹುತ್ವ ಭಾರತದ ಪ್ರಸ್ತುತ ಸವಾಲುಗಳು’ ಕುರಿತು ವಿಚಾರ ಮಂಡಿಸಿದ ಹಿರಿಯ ಚಿಂತಕ ಪ್ರೊ.ಕೆ.ಫಣಿರಾಜ್, ದೇಶದಲ್ಲಿ ಶೋಷಣೆಗೆ ಒಳಗಾದವರಿಗೆ ಸಮಾನತೆ, ಸ್ವಾತಂತ್ರ್ಯ ತಂದು ಕೊಡುವ ಐಕ್ಯ ಕಾನೂನುನ್ನು ಜಾರಿಗೆ ತರಬೇಕಾದ ಅಗತ್ಯ ಇದೆ. ಸಮಾನ ನಾಗರಿಕ ಸಂಹಿತೆಯು ಏಕರೂಪದಲ್ಲಿ ಅಲ್ಲ, ಐಕ್ಯರೂಪದಲ್ಲಿ ಇರಬೇಕು ಎಂದು ಅಭಿಪ್ರಾಯ ಪಟ್ಟರು. ಎಲ್ಲ ಮತಗಳಲ್ಲಿರುವ ಸ್ವಾತಂತ್ರ್ಯ, ಸಮಾನತೆಯ ಅಂಶಗಳನ್ನು ಸೇರಿಸಿ ಸಮಾನ ನಾಗರಿಕ ಸಂಹಿತೆ ಮಾಡಬೇಕು. ಆದರೆ ಇಂದು ಬಹುತ್ವವನ್ನು ಮುರಿಯುವ, ಸಮಾನತೆ ಕೊಲ್ಲುವ, ಸ್ವಾತಂತ್ರ್ಯವನ್ನು ಧಮನ ಮಾಡುವ ಬ್ರಾಹ್ಮಣಶಾಹಿ, ವೈದಿಕಶಾಹಿ ಏಕರೂಪದ ನಾಗರಿಕ ಸಂಹಿತೆ ದೇಶದಲ್ಲಿ ಹೇರಲು ಪ್ರಯತ್ನಗಳು ನಡೆಯುತ್ತಿವೆ” ಎನ್ನುತ್ತಾ “ಬಹುತ್ವ ನಮ್ಮ ನಿತ್ಯದ ಸಂಸ್ಕೃತಿಯಲ್ಲಿ ಇದೆ. ಆದರೆ ರಾಜಕೀಯದ ಮೂಲಕ, ಸಂವಿಧಾನವನ್ನು ಒಳಗಿನಿಂದಲೇ ಒಡೆಯುವ ಮೂಲಕ ನಾಗರಿಕರ ಪ್ರಜಾ ಅಸ್ಮಿತಿಯನ್ನೇ ನಾಶ ಮಾಡುವ ಪ್ರಯತ್ನಗಳು ಆಗುತ್ತಿವೆ. ನಮಗೆ ಐಕ್ಯತೆಯ ಬಹುತ್ವ ಬೇಕು. ಅದು ಏಕತೆ ಆಗುವ ಸಂದರ್ಭದಲ್ಲಿ ನಾವು ಎಚ್ಚರ ವಹಿಸಬೇಕು. ಇದರ ಬಗ್ಗೆ ನಾಗರಿಕ ಸಮಾಜ ಹೋರಾಟ ಮಾಡಬೇಕು ಎಂದರು. ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರಾದ ಡಾ.ಎ.ಬಿ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು, ವೇದಿಕೆಯಲ್ಲಿ ಮಹಿಳಾ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕಿ ಡಾ.ಲೀಲಾ ಸಂಪಿಗೆ, ಉಡುಪಿ ಜಿಲ್ಲಾ ಸಂಚಾಲಕಿ ಶಾಂತಿ ಬೈಂದೂರು, ದ.ಕ. ಜಿಲ್ಲಾ ಸಂಚಾಲಕ ಪ್ರೇಮಿ ಫರ್ನಾಂಡೀಸ್, ಮಾನವ ಬಂಧುತ್ವ ವೇದಿಕೆಯ ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್, ರಾಜ್ಯ ಸಮಿತಿ ಸದಸ್ಯ ರೋನಾಲ್ಡ್ ಮನೋಹರ ಕರ್ಕಡ, ದ.ಕ. ಜಿಲ್ಲಾ ಸಂಚಾಲಕ ಜಯರಾಂ ಪೂಜಾರಿ ಉಪಸ್ಥಿತರಿದ್ದರು. ವೇದಿಕೆಯ ಚಾರ್ಲ್ಸ್ ಆ್ಯಂಬ್ಲರ್ ಸ್ವಾಗತಿಸಿದರು. ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.


























