ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಿಸಿ: ಡಾ.ಸಿ.ಜಿ.ರಮೇಶ್ 

ವರದಿ:ಶಬ್ಬೀರ್ ಅಹ್ಮದ್

ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಿಸಿ: ಡಾ.ಸಿ.ಜಿ.ರಮೇಶ್ 

ಕೋಲಾರ: ಜೂನ್ 01 ತಾಯಿ ಮಕ್ಕಳ ಆರೋಗ್ಯ ಕಾರ್ಯಕ್ರಮಡಿಯಲ್ಲಿ ಶಿಶು ಮರಣ ಪ್ರಮಾಣವನ್ನು ತಡೆಗಟ್ಟುವ ಸಲುವಾಗಿ 0 ಯಿಂದ 5 ವರ್ಷದೊಳಗಿನ ಮಕ್ಕಳ ಕುಟುಂಬಗಳಲ್ಲಿ ಅತಿಸಾರ ಬೇದಿ ನಿಯಂತ್ರಣ ಪಾಕ್ಷಿಕವನ್ನು ಅಂಗನವಾಡಿಗಳಲ್ಲಿ ಜೂನ್. 3 ರಿಂದ 17 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿಯಾದ ಡಾ.ಸಿ.ಜಿ.ರಮೇಶ್ ಅವರು ತಿಳಿಸಿದರು. 

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಆರ್.ಬಿ.ಎಸ್.ಕೆ, ಆರ್.ಕೆ.ಎಸ್.ಕೆ, ಶುಚಿ, ವಿಪ್ಸ್ ಕುರಿತು ಚರ್ಚಿಸಲು ಹಾಗೂ ತಾಲ್ಲೂಕು ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಮಕ್ಕಳಲ್ಲಿ ಅತಿಸಾರ ಬೇದಿಯಿಂಧಾಗಿ ಸಾವು ಸಂಭವಿಸಬಹುದು.  ಇದರ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸುವುದೇ ಅಲ್ಲದೆ ಇಂತಹ ಸಮಸ್ಯೆಗಳು ಕಂಡು ಬಂದಾಗ ಕೂಡಲೇ ವೈದ್ಯರ ಬಳಿ ತೋರಿಸಬೇಕು. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಹೇಳಿದರು.

ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ಈ ರೀತಿಯ ದುಷ್ಪರಿಣಾಮಗಳು ಬೀರಿದಾಗ ಶೇ.66 ರಷ್ಟು ಮಂದಿಯನ್ನು ಮಾತ್ರ ಆಸ್ಪತ್ರೆಗಳಲ್ಲಿ ದಾಖಲಿಸಲಾಗುತ್ತಿದೆ. ಇದನ್ನು ಶೇ.100 ರಷ್ಟಕ್ಕೆ ತರಬೇಕಾದ ಅವಶ್ಯಕತೆ ಇದೆ. ಈ ಅತಿಸಾರ ಭೇದಿಯಿಂದ ಪ್ರತಿವರ್ಷ ಸುಮಾರು 1.2 ಲಕ್ಷ ಶಿಶುಗಳು ಮರಣ ಹೊಂದುತ್ತಿವೆ. ಈ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು. 

ಶಿಶುಗಳಿಗೆ ಇಂತಹ ಸಮಸ್ಯೆಗಳು ಕಂಡು ಬಂದಾಗ ಓ.ಆರ್.ಎಸ್. ದ್ರಾವಣವನ್ನು ನೀಡಬೇಕು. ಅದು ಎಷ್ಟು ನೀಡಬೇಕು? ಹೇಗೆ ನೀಡಬೇಕು? ಎಂಬ ಕುರಿತು ಇಲಾಖೆಗಳು ಹಾಗೂ ಆಶಾಕಾರ್ಯಕರ್ತೆಯರು ಮನೆಮನೆಗೆ ತೆರಳಿ ಇಂತಹ ಸಮಸ್ಯೆ ಇರುವವರನ್ನು ಗುರುತಿಸಿ ತಿಳಿಸುವುದೇ ಅಲ್ಲದೆ ಓ.ಆರ್.ಎಸ್.ದ್ರಾವಣ ಬಳಕೆಯ ಬಗ್ಗೆಯೂ ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಹೇಳಿದರು. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾತ್ರ ಇಂತಹ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿಲ್ಲ. ಇದರ ಜೊತೆಗೆ ಶಿಕ್ಷಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಸಹ ಕೈ ಜೋಡಿಸಬೇಕಲ್ಲದೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದ ಅವರು, ಶುಚಿತ್ವವನ್ನು ಕಾಪಾಡಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದು ತಿಳಿಸಿದರು. 

ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಕೆ.ಎಸ್.ನಾಗರಾಜಗೌಡ ಅವರು ಮಾತನಾಡಿ, ಸ್ವಚ್ಛತೆಯನ್ನು ಕಾಪಾಡಿಕೊಳ್ಳದೆ ಇರುವುದು ಸರಿಯಾಗಿ ಕೈ ತೊಳೆಯದೆ ಇರುವುದರಿಂದಲೇ ಶೇ.60 ಕ್ಕೂ ಹೆಚ್ಚು ಕಾಯಿಲೆಗಳು ಬರುತ್ತವೆ. ಹಾಗಾಗಿ ಕೈ ತೊಳೆಯುವ ಕೆಲಸ ಮೊದಲು ನಮ್ಮಿಂದಲೇ ಪ್ರಾರಂಭವಾಗಬೇಕು. ಅದು ನಮ್ಮ ಕುಟುಂಬದ ಮೇಲೆ ನಂತರ ಸಮಾಜದಲ್ಲಿ ಎಲ್ಲರೂ ಅದನ್ನು ಅಳವಡಿಸಿಕೊಳ್ಳುವಂತಾಗುತ್ತದೆ ಎಂದರು. 

ಮುಖ್ಯವಾಗಿ ಶಾಲೆಗಳಲ್ಲಿ ಮಕ್ಕಳಿಗೆ ಕೈ ತೊಳೆಯುವ ಅಭ್ಯಾಸವನ್ನು ಮಾಡಿಸಬೇಕು, ಜೊತೆಗೆ ಶುಚಿತ್ವ ಕಾಪಾಡಿಕೊಳ್ಳುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಅಷ್ಟೇ ಅಲ್ಲದೆ ಅಡುಗೆ ಸಿಬ್ಬಂದಿಯವರು ಮುಖ್ಯವಾಗಿ ಕೈ ತೊಳೆದುಕೊಂಡು ಅಡುಗೆ ಕಾರ್ಯಗಳನ್ನು ಮಾಡಬೇಕು. ಈ ವಿಚಾರಗಳನ್ನು ತಪ್ಪದೆ ಅಳವಡಿಸಿಕೊಳ್ಳುವಂತೆ ಎಲ್ಲಾ ಶಿಕ್ಷಕರಿಗೂ ಮಾಹಿತಿ ನೀಡಲು ಸೂಚಿಸಿದರು. 

ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಯಾದ ಬಾಲಾಜಿ ಮಾತನಾಡಿ, ಮಕ್ಕಳು ಆರೋಗ್ಯವಂತರಾಗಿದ್ದಾಗ ಮಾತ್ರ ಹೆಚ್ಚು ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ಶಿಕ್ಷಕರು ಭೋದಿಸಿದ ಪಾಠವನ್ನು ಅರಗಿಸಿಕೊಳ್ಳುತ್ತಾರೆ. ಈ ಔಚಿತ್ಯವನ್ನು ಅರಿತು ಶಿಕ್ಷಕರು ಕೆಲಸ ಮಾಡಬೇಕು. ಹಾಗಾಗಿ ಶಿಕ್ಷಕರು ಮಕ್ಕಳ ಶಿಕ್ಷಣದ ಜೊತೆಗೆ ಆರೋಗ್ಯದ ಮೇಲೂ ಸಹ ಹೆಚ್ಚು ಕಾಳಜಿಯನ್ನು ವಹಿಸಬೇಕು ಎಂದರು. 

ತಾಲ್ಲೂಕು ಪಂಚಾಯಿತಿ ಪ್ರಭಾರ ವ್ಯವಸ್ಥಾಪಕರಾದ ಲಕ್ಷ್ಮೀಶಕಾಮತ್ ಅವರು ಮಾತನಾಡಿ, ಪ್ರತಿಯೊಬ್ಬರೂ ಶುದ್ದ ಕುಡಿಯುವ ನೀರನ್ನು ಉಪಯೋಗಿಸುವುದರಿಂದ ಯಾವುದೇ ರೀತಿಯ ಕಾಯಿಲೆಗಳು ಉಂಟಾಗುವುದಿಲ್ಲ. ಶಾಲೆಯಲ್ಲಿ ಮಕ್ಕಳಿಗೂ ಸಹ ಶುದ್ಧ ಕುಡಿಯುವ ನೀರನ್ನು ತಪ್ಪದೆ ಒದಗಿಸಲು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ. ಒಂದು ಯಾವುದೇ ಪಂಚಾಯಿತಿಗಳು ಕುಡಿಯಲು ಶಾಲೆಗಳಿಗೆ ನೀರನ್ನು ನೀಡದೆ ಇದ್ದಲ್ಲಿ ಮಾಹಿತಿಯನ್ನು ನೀಡಿ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ನಿರೀಕ್ಷಕರಾದ ಆರ್.ಸತ್ಯನಾರಾಯಣಗೌಡ, ಡಾ. ಕವಿತಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ