ಸಾಹಿತ್ಯದಲ್ಲಿ ರಾಷ್ಟ್ರೀಯ ಭಾವನೆ ಬಿಂಬಿಸುವುದು ಇಂದಿನ ಅಗತ್ಯವಾಗಿದೆ:ಟಿ.ಎಸ್‌.ಮಾಯಾ ಬಾಲಚಂದ್ರ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ಸಾಹಿತ್ಯದಲ್ಲಿ ರಾಷ್ಟ್ರೀಯ ಭಾವನೆ ಬಿಂಬಿಸುವುದು ಇಂದಿನ ಅಗತ್ಯವಾಗಿದೆ. ಸಾಹಿತಿಗಳು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾದ ಸಾಹಿತ್ಯ ರಚನೆಯಲ್ಲಿ ತೊಡಗಬೇಕು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಸಂಚಾಲಕಿ ಟಿ.ಎಸ್‌.ಮಾಯಾ ಬಾಲಚಂದ್ರ ಹೇಳಿದರು.  ಪಟ್ಟಣದ ರಾಮ ಮಂದಿರದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಹಿರಿಯ ಸಾಹಿತಿಗಳ ಮಾರ್ಗದರ್ಶನದಲ್ಲಿ ಕಿರಿಯ ಲೇಖಕರನ್ನು ದೇಶದ ಹಿತಾಸಕ್ತಿಗೆ ಪೂರಕವಾಗಿ ರೂಪಿಸುವುದು ಪರಿಷತ್ತಿನ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಹೇಳಿದರು.  ಪ್ರತಿ ತಿಂಗಳು ಮೂರನೇ ಶನಿವಾರ ಮಧ್ಯಾಹ್ನ 3 ಗಂಟೆಗೆ ಪರಿಷತ್ತಿನ ಸದಸ್ಯರ ಸಭೆ ನಡೆಸಲಾಗುವುದು. ಸಭೆಯಲ್ಲಿ ಸಾಹಿತ್ಯ ಚಟುವಟಿಕೆ ಕೈಗೊಳ್ಳಲಾಗುವುದು. ಸಮಾನ ಮನಸ್ಕರನ್ನು ಪರಿಷತ್ತಿನ ಸದಸ್ಯರನ್ನಾಗಿ ಮಾಡಿಕೊಳ್ಳಲಾಗುವುದು. ಯುವ ಸಮುದಾಯದಲ್ಲಿ ಸಾಹಿತ್ಯಾಭಿರುಚಿ ಮೂಡಿಸಲು ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರಲಾಗುವುದು. ಮಕ್ಕಳಲ್ಲಿ ಉತ್ತಮ ಸಾಂಸ್ಕಾರ ಬೆಳೆಸಲು ಒತ್ತು ನೀಡಲಾಗುವುದು ಎಂದು ಹೇಳಿದರು.  ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಸಂಯೋಜಕ ಕೇಶವಮೂರ್ತಿ ಮಾತನಾಡಿ, ಸಾಹಿತ್ಯ ವ್ಯಕ್ತಿಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ಪರಿಷತ್ತಿನ ವತಿಯಿಂದ ಸೃಜನ ಶೀಲ ಸಾಹಿತ್ಯ ನಿರ್ಮಾಣ ಕಾರ್ಯಕ್ಕೆ ಬೆಂಬಲ ನೀಡಲಾಗುವುದು ಹಾಗೂ ಓದುಗರ ತಂಡಗಳನ್ನು ಕಟ್ಟಲಾಗುವುದು. ವ್ಯಕ್ತಿತ್ವ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.  ಈ ಸಂದರ್ಭದಲ್ಲಿ ಸಾಹಿತಿ ಪನಸಮಾಕನಹಳ್ಳಿ ಆರ್‌.ಚೌಡರೆಡ್ಡಿ ಅವರನ್ನು ಸನ್ಮಾನಿಸಲಾಯಿತು.  ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯದರ್ಶಿ ರಾಯಲ್ಪಾಡ್‌ ರಾಘವೇಂದ್ರ, ವೇಣು ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಎನ್‌.ಬಿ.ಗೋಪಾಲಗೌಡ, ಮುಖಂಡರಾದ  ಅರುಣ್‌ ಕುಮಾರ್‌, ಪ್ರಭುರೆಡ್ಡಿ, ರಾಮಾಂಜಿ, ಉಪನ್ಯಾಸಕಿ ಕಮಲ ಹೆಗ್ಗಡೆ, ಶಿಕ್ಷಕಿಯರಾದ ಶಾರದಾ ಕೃಷ್ಣಮೂರ್ತಿ, ಚಿಕ್ಕರೆಡ್ಡಮ್ಮ,  ಜಯಲಕ್ಷ್ಮಿ, ಆರತಿ, ರಕ್ಷಾ, ರೆಡ್ಡಮ್, ಮಮತಾ ರಾಣಿ ಇದ್ದರು.