ಸಹಾಯಕ ಖಜಾನಾಧಿಕಾರಿ ರಾಮಮೂರ್ತಿರಿಗೆ ಬೀಳ್ಕೊಡುಗೆ ಕರ್ತವ್ಯ ನಿರ್ವಹಣೆ ಇತರೆ ಸಿಬ್ಬಂದಿಗೆ ಮಾದರಿ-ವಿ.ರುಕ್ಮಿಣಿದೇವಿ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ:- ಕರ್ತವ್ಯ ನಿರ್ವಹಣೆಯಲ್ಲಿ ಉತ್ಸಾಹ,ಕಚೇರಿಗೆ ಬರುವವರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ತೋರುವ ದಕ್ಷತೆ ಇತರೆ ಸಿಬ್ಬಂದಿಗೆ ಮಾದರಿಯಾಗಲಿ ಎಂದು ಜಿಲ್ಲಾ ಖಜಾನೆ ಉಪನಿರ್ದೇಶಕಿ ಎನ್.ರುಕ್ಮಿಣಿದೇವಿ ತಿಳಿಸಿದರು.
ಜಿಲ್ಲಾ ಖಜಾನೆಯಲ್ಲಿ ಸತತ 35 ವರ್ಷಗಳ ಸೇವೆಯ ನಂತರ ನಿವೃತ್ತರಾದ ಸಹಾಯಕ ಖಜಾನಾಧಿಕಾರಿ ರಾಮಮೂರ್ತಿ ಅವರನ್ನು ಖಜಾನೆ ಇಲಾಖೆ,ಶಿಕ್ಷಣ,ಪದವಿ ಪೂರ್ವ ಶಿಕ್ಷಣ, ಸಿಡಿಪಿಒ,ವಿಕಲಚೇತನರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಸನ್ಮಾನಿಸಿ ಬೀಳ್ಕೊಟ್ಟು ಅವರು ಮಾತನಾಡುತ್ತಿದ್ದರು.
ಕರ್ತವ್ಯದಲ್ಲಿ ತೋರಿದ ಪ್ರಾಮಾಣಿಕತೆ, ಮಾಡಿದ ಕೆಲಸದಿಂದ ಆತ್ಮತೃಪ್ತಿ ಸಿಕ್ಕರೆ ನಿವೃತ್ತಿ ಜೀವನದಲ್ಲಿ ಹೆಚ್ಚು ನೆಮ್ಮದಿ ಸಿಗುತ್ತದೆ, ಅಂತಹ ಸಾಲಿಗೆ ರಾಮಮೂರ್ತಿಯೂ ಸೇರಿದ್ದಾರೆ ಎಂದರು.
ಕಚೇರಿಗೆ ವೇತನ ಮತ್ತಿತರ ಬಿಲ್ಲುಗಳ ಪಾವತಿಗೆ ಬರುವ ಇತರೆಲ್ಲಾ ಇಲಾಖೆಗಳ ನೌಕರರು, ತರಾತುರಿಯಲ್ಲೇ ಬರುತ್ತಾರೆ, ಬಂದವರನ್ನು ಶಾಂತವಾಗಿಸಿ ಕೆಲಸ ಮಾಡಿಕೊಟ್ಟು ಗೊಂದಲ ನಿವಾರಿಸುತ್ತಿದ್ದ ರಾಮಮೂರ್ತಿ ಅವರ ಸೇವೆ ಇನ್ನು ಮುಂದೆ ಇಲಾಖೆಗೆ ಇಲ್ಲವಾಗಿದೆ ಎಂದು ತಿಳಿಸಿದ ಅವರು, ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿದ ರಾಮಮೂರ್ತಿ ಮಾತನಾಡಿ, 35 ವರ್ಷಗಳ ಸುಧೀರ್ಘ ಸೇವೆ ನನಗೆ ತೃಪ್ತಿ ತಂದಿದೆ, ಖಜಾನೆಯಲ್ಲಿ ಸದಾ ಒತ್ತಡದಲ್ಲೇ ಕೆಲಸ ಮಾಡುವ ಪರಿಸ್ಥಿತಿ ಇದೆ, ಆದರೆ ತಮ್ಮ ಕಾರ್ಯಕ್ಕೆ ಎಲ್ಲಾ ಸಿಬ್ಬಂದಿ, ಉಪನಿರ್ದೇಶಕರು ಸ್ಪಂದಿಸಿದ್ದಾರೆ ಎಂದು ಧನ್ಯವಾದ ತಿಳಿಸಿದರು.
ಸಹಾಯಕ ಖಜಾನೆ ಅಧಿಕಾರಿಗಳಾದ ಮಹೇಶ್ವರಪ್ಪ, ನಾರಾಯಣರಾವ್, ವರದರಾಜ್, ಖಜಾನೆ ನೌಕರರ ಸಂಘದ ಶಂಕರ್, ರವಿಶಂಕರ್, ನಟೇಶ್, ನರೇಂದ್ರ ಮತ್ತಿತರರು ಮಾತನಾಡಿ, ರಾಮಮೂರ್ತಿಯವರು 60ರ ವಯಸ್ಸಿನಲ್ಲೂ ಕ್ರಿಯಾಶೀಲರಾಗಿದ್ದರು, ಅವರನ್ನು ಕಂಡಾಗ ನಿವೃತ್ತಿಯ ವಯಸ್ಸಾಗಿದೆ ಎಂದು ಹೇಳಲು ಸಾಧ್ಯವೇ ಇಲ್ಲ ಎಂದರು.
ಸರ್ಕಾರಿ ನೌಕರಿಯಲ್ಲಿ ನಿವೃತ್ತಿ ಸಾಮಾನ್ಯ ಪ್ರಕ್ರಿಯೆ, ಆದರೆ ಕರ್ತವ್ಯದಲ್ಲಿದ್ದಾಗ ಮಾಡಿದ ಕೆಲಸ ನಮ್ಮ ಜೀವನವಿಡೀ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ, ಅಂತಹ ಹಾದಿಯಲ್ಲಿ ರಾಮಮೂರ್ತಿ ಖಜಾನೆಯಲ್ಲಿ ಉತ್ತಮ ಹೆಸರು ಪಡೆದಿದ್ದರು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ರಾಮಮೂರ್ತಿ ನಿವೃತ್ತಿ ಎಂಬ ವಿಷಯ ನಂಬಲು ಸಾಧ್ಯವಾಗಲಿಲ್ಲ, ಅವರಿಗಿನ್ನು 45 ವರ್ಷ ಇರಬಹುದು ಎಂದು ಭಾವಿಸಿದ್ದೆ, ಇಂತಹ ಕ್ರಿಯಾಶೀಲ ಗುಣ, ಎಲ್ಲರ ಕೆಲಸ ಮಾಡಿಕೊಡುವ ಬದ್ದತೆ ಇತರೆ ನೌಕರರಿಗೂ ಬರಲಿ ಎಂದರು.
ಕಾರ್ಯಕ್ರಮದಲ್ಲಿ ಖಜಾನೆ ಇಲಾಖೆಯಿಂದ ರಾಮಮೂರ್ತಿರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಖಜಾನೆಯ ಅಶೋಕ್,ಸೋಮಶೇಖರ್, ಬ್ರಹ್ಮಾನಂದ್,ಶಿವಪ್ರಸಾದ್, ಆರ್.ವೀಣಾ, ಕೆಜಿಎಫ್‍ನ ಖಜಾನಾಧಿಕಾರಿ ವಿಜಯಕುಮಾರ್, ಅಶೋಕ್,ಪ್ರಭಾಕರ್, ಆರ್.ಸೋಮಶೇಖರ್,ನಾಗರಾಜ್, ಸಾಕಮ್ಮ, ರಾಣೆಮ್ಮ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.