ಸರಕಾರದಿಂದ ಹೊಸ ಆ್ಯಪ್ ಅಭಿವೃದ್ಧಿ/ 5-15 ನಿಮಿಷ ಮುಂಚೆಯೇ ಆರ್ಭಟದ ಮಾಹಿತಿ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಸರಕಾರದಿಂದ ಹೊಸ ಆ್ಯಪ್ ಅಭಿವೃದ್ಧಿ/ 5-15 ನಿಮಿಷ ಮುಂಚೆಯೇ ಆರ್ಭಟದ ಮಾಹಿತಿ
ಮಿಂಚಿನ ಸಂಚಲನದ ಸಂದೇಶ ನೀಡುವ ತಂತ್ರಾಂಶ ರೈತರ ಜೀವರಕ್ಷಕ
ಸಿಡಿಲಿಗೆ ಆಪತ್ಬಾಂಧವವಾಗಲಿದೆ ದಾಮಿನಿ
ಸಿಡಿಲಿಗೆ ಕೊಡೆಯಾಗಿ ದಾಮಿನಿ

ಮಳೆಗಾಲದ ಜೊತೆಗೆ ಸಿಡಿಲಿನ ಅನಾಹುತಗಳೂ ಜೋರು. ಮುಂಗಾರು ಕಾಲದಲ್ಲಿ ಆರ್ಭಟಿಸುವ ಗುಡುಗು-ಸಿಡಿಲು ಪ್ರಾಣಕ್ಕೆ ಕುತ್ತು ತರಬಹುದೆಂದು ಆತಂಕಪಡುವವರ ನೆರವಿಗೆಂದೇ ದಾಮಿನಿ ಬರಲಿದ್ದಾಳೆ!
ಕಳೆದ ತಿಂಗಳ ಜೂನ್ 25 ರಂದು ಬಿಹಾರ ರಾಜ್ಯದಲ್ಲಿ ಸುಮಾರು 83 ಜನರು ಹಾಗೂ ಉತ್ತರ ಪ್ರದೇಶದಲ್ಲಿ ಸುಮಾರು 24 ಮಂದಿ ಮಿಂಚಿನ ಹೊಡೆತದಿಂದ ಮೃತಪಟ್ಟಿದ್ದರು. ಹೀಗೆ ಹಲವಾರು ದುರಂತಗಳು ಗುಡುಗು ಮಿಂಚಿನಿಂದಲೇ ಆಗುತ್ತಿವೆ. ಹಾಗಾಗಿ ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಭಾರತೀಯ ಉಷ್ಣವಲಯದ ಹವಾಮಾನಶಾಸ್ತ್ರ ಸಂಸ್ಥೆ (ಐಐಟಿಎಂ) ಹಾಗೂ ಭೂ ವ್ಯವಸ್ಥೆ ವಿಜ್ಞಾನ ಸಂಸ್ಥೆ ಒಗ್ಗೂಡಿ ದಾಮಿನಿ (ಆಚಿmiಟಿi) ಎಂಬ ಆನ್‍ಡ್ರಾಯಿಡ್ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ.
ಸಿಡಿಲು ಹೊಡೆಯುವ ಕೆಲವು ನಿಮಿಷಗಳ ಮುಂಚೆ ಮುನ್ಸೂಚನೆ ನೀಡಲಿರುವ ಈ ಆ್ಯಪ್ ಸಾವು, ನೋವಿನ ಪ್ರಮಾಣ ಗಣನೀಯ ತಗ್ಗಿಸಲು ನೆರವಿಗೆ ಬರಲಿದೆ.
ಈ ಆ್ಯಪ್‍ನ ವಿಶೇಷತೆ ಏನಿದೆ?
ಒಂದು ಸ್ಥಳದ ಸುತ್ತಲಿನ 20-40 ಕಿಲೋ ಮೀಟರ್ ದೂರದವರೆಗೆ 15 ನಿಮಿಷಗಳ ಒಳಗೆ ಸಂಭವಿಸಬಹುದಾದ ಸಿಡಿಲಿನ ಬಗ್ಗೆ ನಿಖರವಾದ ಮಾಹಿತಿ ದೊರೆಯುತ್ತದೆ. ಈ ಮಾಹಿತಿ ಆಧರಿಸಿ, ಜನಸಾಮಾನ್ಯರು ಸುರಕ್ಷಿತವಾದ ಸ್ಥಳಗಳಿಗೆ ತೆರಳಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಆ್ಯಪ್ ಸಹಕಾರಿಯಾಗಿದೆ.


ಆ್ಯಪ್‍ನ ಬಳಕೆಯ ವಿಧಾನ
 ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಇನ್‍ಸ್ಟಾಲ್ ಮಾಡಿಕೊಳ್ಳಬೇಕು.
 ನಂತರ ತಮ್ಮ ಹೆಸರು, ದೂರವಾಣಿ ಸಂಖ್ಯೆ, ವಿಳಾಸ, ಪಿನ್‍ಕೋಡ್ ಮತ್ತು ತಮ್ಮ ವೃತ್ತಿಯನ್ನು ನೋಂದಾಯಿಸಬೇಕು. ಅಲ್ಲದೆ ಈ ಅಪ್ಲಿಕೇಶನ್‍ನಲ್ಲಿ ತಮಗೆ ಬೇಕಾದವರ ದೂರವಾಣಿ ಸಂಖ್ಯೆಯನ್ನು ನಮೂದಿಸಬಹುದು.
 ಈ ಅಪ್ಲಿಕೇಶನ್ನಲ್ಲಿ ಬರುವ ಮಳೆಯ ಆಕಾರದ ಬಟನ್ ಅನ್ನು ಹೊತ್ತಿದಾಗ ಅದು ಒಂದು ನಕ್ಷೆಯನ್ನು ತೋರಿಸುತ್ತದೆ. ಅದರ ಮೇಲ್ಭಾಗದಲ್ಲಿ ತಮಗೆ ಬೇಕಾದ ಸ್ಥಳದ ಹೆಸರು ಟೈಪ್ ಮಾಡಿ ಸರ್ಚ್ ಬಟನ್ ಒತ್ತಬೇಕು. ಆ ಸ್ಥಳದ ಸುತ್ತಮುತ್ತ 20-40 ಕಿ.ಮೀ. ವರೆಗೆ 15 ನಿಮಿಷಗಳ ಒಳಗಾಗಿ ಸಂಭವಿಸಬಹುದಾದ ಮಿಂಚಿನ ಕುರಿತು ಮಾಹಿತಿ ದೊರೆಯುತ್ತದೆ.
 ಮಿಂಚು ಸಂಭವಿಸುವಾಗ ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಎಲ್ಲಿ ಇರಬೇಕು ಎಲ್ಲಿ ಇರಬಾರದು ಜೊತೆಗೆ ಒಬ್ಬ ವ್ಯಕ್ತಿಗೆ ಮಿಂಚು ಹೊಡೆದಾಗ ತಾವು ತೆಗೆದುಕೊಳ್ಳಬೇಕಾದ ಪ್ರಥಮ ಚಿಕಿತ್ಸೆಯ ವಿವರವನ್ನು ಮಧ್ಯದ ಇನ್‍ಸ್ಟ್ರಕ್ಷನ್ ಬಟನ್ ಒತ್ತಿದಾಗ ಅದು ಸೂಚಿಸುತ್ತದೆ. ನಂತರ ರಿಫ್ರೆಶ್ ಬಟನ್ ಒತ್ತಿದಾಗ ಮಾಹಿತಿ ಮರು ಶೇಖರಣೆಗೊಳ್ಳುತ್ತದೆ.ಈ ಆ್ಯಪ್ ವಿಶ್ವದ ಯಾವುದೇ ಸ್ಥಳದಲ್ಲಿ ಬರುವಂತಹ ಮಿಂಚಿನ ಕುರಿತು ಮಾಹಿತಿಯನ್ನು ನೀಡುತ್ತದೆ.

ಇಂಗ್ಲೀಷ್‍ಮಯ ಆ್ಯಪ್, ಸುಲಭ ಬಳಕೆ ಸ್ವಲ್ಪ ಕಷ್ಟಕರ




ಸಿಡಿಲಿನ ಕುರಿತು ಜನ ಸಾಮಾನ್ಯರಿಗೆ ಕಿಂಚಿಷ್ಟು ಕೂಡ ಅರಿವಿಲ್ಲ. ಮಳೆ ಬಂದ ಕೂಡಲೇ ಜನರು ಮರಗಳ ನೆರವು ಪಡೆಯುತ್ತಾರೆ. ಆದರೆ ಮರಗಳ ಅಡಿಯಲ್ಲೇ ಸಿಡಿಲು ಬಡಿಯುವ ಸಂಭವ ಹೆಚ್ಚಿದೆ. ಇಂತಹ ಅನಾಹುತಗಳ ನೆರವಿಗಾಗಿಯೇ ದಾಮಿನಿ ಆ್ಯಪ್ ಇದೆ. ರೈತರು ಸಾಮಾನ್ಯ ಜನರಿಗೂ ಈ ಆ್ಯಪ್ ಜೀವರಕ್ಷಕವಾಗಿದೆ.
ಕು. ಸ್ವಾತಿ ಜಿ. ಆರ್.
ಕೃಷಿ ಹವಾಮಾನ ತಜ್ಞೆ
ಕೃಷಿ ವಿಜ್ಞಾನ ಕೇಂದ್ರ, ಕೋಲಾರ