JANANUDI.COM NETWORK
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಿ- ಡಿ.ಕೆ.ಶಿವಕುಮಾರ್., ಅಧ್ಯಕ್ಷರು., ಕೆಪಿಸಿಸಿ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಹಾಗೂ ರಾಜ್ಯ, ಜಿಲ್ಲಾ ಹಾಗೂ ಬ್ಲಾಕ್ಗಳ ಎಲ್ಲಾ ಪದಾದಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ:
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಏಪ್ರಿಲ್.14 ರಂದು, ಬೆಳಿಗ್ಗೆ 10 ಗಂಟೆಗೆ ಕೊರೊನಾ ಲಾಕ್ಡೌನ್ ಹಿನ್ನಲೆಯಲ್ಲಿ ತಮ್ಮತಮ್ಮ ವಾಸಸ್ಥಳದಿಂದ ಯಾರೂ ಹೊರಬರದೆ, ಇರುವ ಸ್ಥಳದಲ್ಲಿಯೇ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ, ಈ ನಾಡಿನ ಸರ್ವ ಜಾತಿ, ಧರ್ಮಗಳ ಜನರಲ್ಲಿ ಐಕ್ಯತೆ, ಸಮಗ್ರತೆಯನ್ನು ಬೆಸೆದ ಅಂಬೇಡ್ಕರ್ ಸಂವಿಧಾನಕ್ಕೆ ಗೌರವ ಸಮರ್ಪಿಸಬೇಕಾಗಿ ವಿನಂತಿ.
– ಡಿ.ಕೆ.ಶಿವಕುಮಾರ್., ಅಧ್ಯಕ್ಷರು., ಕೆಪಿಸಿಸಿ.
ಭಾರತ ಸಂವಿಧಾನದ ಪೀಠಿಕೆ
“ಭಾರತದ ಪ್ರಜೆಗಳಾದ ನಾವು, ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ,
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;ವನ್ನು
ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ;ವನ್ನು
ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ;
ಗಳನ್ನು ದೊರಕಿಸಿ,
ವೈಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆ ಯನ್ನು ಪ್ರೋತ್ನಾಹಿಸಲು ನಿರ್ಧರಿಸಿ;
ನಮ್ಮ ಸಂವಿಧಾನ ರಚನಾಸಭೆಯಲ್ಲಿ ಈ ೧೯೪೯ರ ನವೆಂಬರ್ ಮಾಹೆಯ ೨೬ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗೆ ವಿಧಿಸಿಕೊಳ್ಳುತ್ತೇವೆ.”
ಪೀಠಿಕೆಯು ಭಾರತದ ಸಂವಿಧಾನದ ಒಂದು ಅಂಗವಲ್ಲ; ಏಕೆಂದರೆ ಇದನ್ನು ನ್ಯಾಯಾಲಯದಲ್ಲಿ ಪ್ರಯೋಗಿಸಲು ಸಾಧ್ಯವಿಲ್ಲ. ಹಾಗಿದ್ದರೂ, ಸಂವಿಧಾನದಲ್ಲಿ ದ್ವಂದ್ವ ಇರುವಂತೆ ಕಂಡುಬರುವಲ್ಲಿ ಪೀಠಿಕೆಯನ್ನು ಉಪಯೋಗಿಸಿ ದ್ವಂದ್ವ ನಿವಾರಿಸಬಹುದಾದ ಕಾರಣ ಸರ್ವೋಚ್ಛ
ಪೀಠಿಕೆಯ ಕೆಲವು ಪದಗಳ ನಿರೂಪಣೆ
ಸಾರ್ವಭೌಮ
ಸಾರ್ವಭೌಮ ಎಂಬ ಪದದ ಅರ್ಥ ಪರಮಾಧಿಕಾರ ಅಥಾವ ಸ್ವತಂತ್ರ ಎಂದು. ಭಾರತವು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಾರ್ವಭೌಮ. ಬಾಹ್ಯವಾಗಿ ಯಾವುದೇ ವಿದೇಶೀ ಶಕ್ತಿಯ ಅಧೀನದಲ್ಲಿ ಭಾರತ ಇಲ್ಲ ಹಾಗೂ ಆಂತರಿಕವಾಗಿ ಒಂದು ಮುಕ್ತ, ಜನರಿಂದ ಆರಿಸಲ್ಪಟ್ಟ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುತ್ತದೆ.
ಸಮಾಜವಾದಿ
ಸಮಾಜವಾದಿ ಪದವು ಪೀಠಿಕೆಗೆ ೧೯೭೬ರಲ್ಲಿ ೪೨ನೇ ತಿದ್ದುಪಡಿಯಿಂದ ಸೇರಿಸಲ್ಪಟ್ಟಿತು. ಇದರ ಅರ್ಥ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ. ಸಾಮಾಜಿಕ ಸಮಾನತೆಯ ಅರ್ಥ ಧರ್ಮ, ಜಾತಿ, ಲಿಂಗ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು. ಸಾಮಾಜಿಕ ಸಮಾನತೆಯ ಅಡಿಯಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳಿವೆ. ಆರ್ಥಿಕ ಸಮಾನತೆಯ ಅರ್ಥ ಭಾರತ ಸರಕಾರ ಎಲ್ಲರಿಗೂ ಸಮಾನ ಆರ್ಥಿಕ ಅವಕಾಶಗಳನ್ನು ಹಾಗೂ ಎಲ್ಲರಿಗೂ ಯೋಗ್ಯವಾದ ಜೀವನಮಟ್ಟವನ್ನು ಕಲ್ಪಿಸಲು ಯತ್ನಿಸುತ್ತದೆ. ಇದರ ತತ್ತ್ವಾರ್ಥ ಒಂದು ಸುಖೀ ರಾಜ್ಯದ ನಿರ್ಮಾಣಕ್ಕೆ ಬದ್ಧರಾಗುವುದಾಗಿದೆ.
ಭಾರತವು ಮಿಶ್ರ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸರಕಾರವು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಬಹಳಷ್ಟು ಕಾನೂನುಗಳನ್ನು ಮಾಡಿದೆ. ಇವುಗಳಲ್ಲಿ ಅಸ್ಪೃಶ್ಯತೆ ಮತ್ತು ಜೀತಪದ್ಧತಿ ನಿವಾರಣೆ, ಸಮಾನ ಭತ್ಯೆ ಮಸೂದೆ ಮತ್ತು ಬಾಲಕಾರ್ಮಿಕ ನಿಷೇಧ ಮಸೂದೆ ಸೇರಿವೆ.
ಜಾತ್ಯತೀತ
ಜಾತ್ಯತೀತ ಎಂಬ ಪದವನ್ನು ಪೀಠಿಕೆಗೆ ೧೯೭೬ರ ೪೨ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಇದರ ಅರ್ಥ ಎಲ್ಲ ಧರ್ಮಗಳ ಸಮಾನತೆ ಮತ್ತು ಧಾರ್ಮಿಕ ಸಹನೆ. ಭಾರತವು ಯಾವುದೇ ಅಧಿಕೃತ ಧರ್ಮವನ್ನು ಹೊಂದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಆಯ್ಕೆಯ ಧರ್ಮದ ಪ್ರಚಾರವನ್ನು ಮಾಡುವ ಹಾಗೂ ಆಚರಿಸುವ ಹಕ್ಕಿದೆ. ಸರಕಾರವು ಯಾವುದೇ ಧರ್ಮದ ಪರ ಅಥವಾ ವಿರುದ್ಧ ನಿಲುವನ್ನು ತಳೆಯುವಂತಿಲ್ಲ. ಎಲ್ಲ ಪ್ರಜೆಗಳು ತಮ್ಮ ಧಾರ್ಮಿಕ ಭಾವನೆಗಳ ಹೊರತಾಗಿಯೂ ಕಾನೂನಿನ ಕಣ್ಣಿನಲ್ಲಿ ಸಮಾನರಾಗಿದ್ದಾರೆ. ಸರಕಾರೀ ಅನುದಾನಿತ ಶಾಲೆಗಳಲ್ಲಿ ಯಾವುದೇ ಧರ್ಮದ ಆಚಾರ-ಪ್ರಚಾರ ನಡೆಯುವಂತಿಲ್ಲ. ಬೊಮ್ಮಾಯಿ vs ಭಾರತ ಸರಕಾರ ದಾವೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ಜಾತ್ಯತೀತತೆಯು ಭಾರತ ಸಂವಿಧಾನದ ವಿನ್ಯಾಸದ ಒಂದು ಸಮಗ್ರ ಅಂಗ ಎಂದು ಭಾವಿಸಿದೆ.
ಪ್ರಜಾಪ್ರಭುತ್ವ
ಪ್ರಜಾಪ್ರಭುತ್ವವಾದ ಭಾರತ ದೇಶದ ಪ್ರಜೆಗಳು ಕೇಂದ್ರ, ರಾಜ್ಯ ಹಾಗೂ ಪ್ರಾದೇಶಿಕ ವಿಭಾಗಗಳಲ್ಲಿ ತಮ್ಮ ಸರಕಾರವನ್ನು ಸಾರ್ವತ್ರಿಕ ಮತಾಧಿಕಾರದ ಪದ್ಧತಿಯ ಮೂಲಕ ಆರಿಸುತ್ತಾರೆ. ಭಾರತದ ಎಲ್ಲ ೧೮ ವರ್ಷಗಳ ವಯೋಮಿತಿಯ ಮೇಲಿರುವ ಕಾನೂನುಬದ್ಧ ಮತ ಚಲಾಯಿಸುವ ಅಧಿಕಾರ ಹೊಂದಿರುವ ಪ್ರಜೆಗಳು ಧರ್ಮ, ಜಾತಿ, ಮತ, ಲಿಂಗ ಅಥವಾ ಶಿಕ್ಷಣ ಮಟ್ಟದ ಭೇದವಿಲ್ಲದೇ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.
ಗಣತಂತ್ರ
ಗಣತಂತ್ರವು ರಾಜಪ್ರಭುತ್ವಕ್ಕೆ ವಿರುದ್ದವಾದದ್ದು. ರಾಜಪ್ರಭುತ್ವದಲ್ಲಿ ಒಂದು ರಾಜ್ಯದ ಮುಖ್ಯಸ್ತರು ವಂಶ ಪಾರಂಪರೆಯ ಆಧಾರದ ಮೇಲೆ ಜೀವಮಾನದವರೆಗೆ ಅಥವಾ ಸಿಂಹಾಸನವನ್ನು ತ್ಯಜಿಸುವವರೆಗೆ ನೇಮಿತಗೊಳ್ಳುತ್ತಾರೆ. ಪ್ರಜಾಪ್ರಭುತ್ವದಲ್ಲಿ ಗಣತಂತ್ರ ಎಂದರೆ ” ಒಂದು ರಾಷ್ಟ್ರದ ಮುಖ್ಯಸ್ಥರನ್ನು ಪ್ರತ್ಯೇಕ್ಷ ಅಥವಾ ಪರೋಕ್ಷ ಚುನಾವಣೆಯ ಮೂಲಕ ಆಯ್ಕೆ ಮಾಡುವುದಕ್ಕೆ ಗಣತಂತ್ರ” ಎನ್ನುವರು.