ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ಹಾಲು ಉತ್ಪಾದಕರು ಸ್ವಚ್ಛವಾದ ಹಾಲು ಪೂರೈಸಬೇಕು.
ಶ್ರೀನಿವಾಸಪುರ: ಹಾಲು ಉತ್ಪಾದಕರು ಸ್ವಚ್ಛವಾದ ಹಾಲು ಪೂರೈಸಬೇಕು. ಹಾಗೆ ಪೂರೈಸಿದ ಪ್ರತಿ ಲೀಟರ್ ಹಾಲಿಗೆ 10 ಪೈಸೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರ ಅಳವಡಿಸಲು ಪೂರಕವಾದ ಸಿವಿಲ್ ಚಟುವಟಿಕೆ ಕೈಗೊಳ್ಳಲು 13 ಸಂಘಗಳಿಗೆ ತಲಾ ರೂ.50 ಸಾವಿರದ ಚೆಕ್ ವಿತರಿಸಿ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಸಾಕಷ್ಟು ಸ್ಥಳಾವಕಾಶ ಇರುವ ತಾಲ್ಲೂಕಿನ ಪಾತನೆಲವಂಕಿ, ಜೋಡಿ ಲಕ್ಷ್ಮೀಸಾಗರ, ಕೊಪ್ಪವಾರಿಪಲ್ಲಿ, ಚಿರುವನಹಳ್ಳಿ, ದಳಸನೂರು, ಆರಮಾಕಲಹಳ್ಳಿ, ಹೊಗಳಗೆರೆ, ಬಂಗವಾದಿ, ಗಾಂಡ್ಲಹಳ್ಳಿ, ಚೌಡನಹಳ್ಳಿ, ಮಾಸ್ತೇನಹಳ್ಳಿ, ಕುಪ್ಪಳ್ಳಿ ಹಾಗೂ ಸಿ.ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತಲಾ ರೂ.3 ಲಕ್ಷ ವೆಚ್ಚದಲ್ಲಿ ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರಗಳನ್ನು ಅಳವಡಿಸಲು ಆರ್ಥಿಕ ನೆರವು ನೀಡಲಾಗಿದೆ ಎಂದು ಹೇಳಿದರು.
ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ. ವಿ.ಎನ್.ಶ್ರೀಕಾಂತ್, ಸಹಾಯಕ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ, ವಿಸ್ತರಣಾಧಿಕಾರಿಗಳಾದ ಎಸ್.ದೇವರಾಜ್, ಪಿ.ಕೆ.ನರಸಿಂಹರಾಜು, ಎಸ್.ಗಣೇಶ್, ಎಸ್.ವಿನಾಯಕ, ಎ.ಎನ್. ಶ್ರೀನಿವಾಸಮೂರ್ತಿ ಇದ್ದರು.