ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ವರ್ತಕರು ಮಾ.30 ರಿಂದ ಕಡ್ಡಾಯವಾಗಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವ್ಯಾಪಾರ ವಹಿವಾಟು ನಡೆಸಬೇಕು : ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ವರ್ತಕರ ಸಭೆಯಲ್ಲಿ ಮಾತನಾಡಿ, ವರ್ತಕರಿಗೆ ವಸ್ತುಳನ್ನು ಇಟ್ಟುಕೊಳ್ಳಲು ಕೊಠಿಗಳನ್ನು ನೀಡಲಾಗುವುದು. ಪ್ರತಿದಿನ ನಿಗದಿತ ಸಂಖ್ಯೆಯ ವರ್ಗಕರು ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು. ಪಟ್ಟಣದಲ್ಲಿ ಅಂಗಡಿ ತೆರೆಯಲು ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯೂ ಇರುತ್ತದೆ. ಆದರೆ ವ್ಯಾಪಾರಿಗಳು ತಲುಪಿಸಲು ನಿಯಮ ಮೀರಿ ಹೆಚ್ಚಿನ ಹಣ ಪಡೆಯಬಾರದು. ಎಲ್ಲವೂ ವ್ಯವಸ್ಥಿತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ರಾಘವೇಂದ್ರ ಪ್ರಕಾಶ್ ಮಾತನಾಡಿ, ಸೈನಿಕರು ತಮ್ಮ ಪ್ರಾಣದ ಮೇಲಿನ ಹಂಗು ತೊರೆದು ದೇಶದ ರಕ್ಷಣೆ ಮಾಡುತ್ತಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ವರ್ತಕರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಗ್ರಾಹಕರಿಗೆ ಅಗತ್ಯವಾದ ವಸ್ತುಗಳನ್ನು ನ್ಯಾಯವಾದ ಬೆಲೆಗೆ ಮಾರಾಟ ಮಾಡಬೇಕು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಮಾತನಾಡಿ, ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ಮೊದಲ ಆದ್ಯತೆ ನೀಡಲಾಗಿದೆ. ಪಟ್ಟಣದ ಎಲ್ಲೆಡೆ ವೈರಾಣು ನಿರೋಧಕ ಔಷಧ ಸಿಂಪಡಣೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ನಾಗರಿಕರು ನೈರ್ಮಲ್ಯ ಪಾಲನೆಗೆ ಸಹಕರಿಸಬೇಕು ಎಂದು ಹೇಳಿದರು.
ಉಪ ತಹಶೀಲ್ದಾರ್ ಮಲ್ಲೇಶ್, ಶಿರಸ್ತೇದಾರ್ ನರೇಶ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ವಿನೋದ್, ಆರೋಗ್ಯ ನಿರೀಕ್ಷಕರಾದ ಕೆ.ಜಿ.ರಮೇಶ್, ಪೃಥ್ವಿರಾಜ್, ಪರಿಸರ ನಿರೀಕ್ಷಕ ಶೇಖರ್ ರೆಡ್ಡಿ ಇದ್ದರು.