ವರದಿ:ಶಬ್ಬೀರ್ ಅಹ್ಮದ್
ಶ್ರೀನಿವಾಸಪುರ: ರಾತ್ರಿ ಗುಡುಗು ಮಿಂಚು ಮಳೆ ಹಾಗೂ ಬಿರುಗಾಳಿ ಆಲಿಕಲ್ಲಿನ ಹೊಡೆತಕ್ಕೆ ಮಾವಿನ ಕಾಯಿಯ ಬೆಳೆ ದೊಡ್ಡ ಪ್ರಮಾಣದಲ್ಲಿ ನಶ್ಟ
ಶ್ರೀನಿವಾಸಪುರ: ತಾಲ್ಲೂಕಿನ ದಳಸನೂರು ಹಾಗೂ ಸುಗಟೂರು ಕಸಬಾಗಳ ವ್ಯಾಪ್ತಿಯಲ್ಲಿ ರಾತ್ರಿ ಗುಡುಗು ಮಿಂಚಿನೊಂದಿಗೆ ಬಂದ ಮಳೆ ಹಾಗೂ ಬೀಸಿದ ಬಿರುಗಾಳಿ ಮತ್ತು ಆಲಿಕಲ್ಲಿನ ಹೊಡೆತಕ್ಕೆ ಮಾವಿನ ಕಾಯಿಯನ್ನು ದೊಡ್ಡ ಪ್ರಮಾಣದಲ್ಲಿ ಬಲಿ ಪಡೆದಿದೆ. ಇದರಿಂದ ಬೆಳೆಗಾರರಿಗೆ ಅಪಾರ ನಷ್ಟ ಉಂಟಾಗಿದೆ.
ರಾತ್ರಿ ಸುಮಾರು ಒಂದು ಗಂಟೆ ಸಮಯದಲ್ಲಿ ಗುಡುಗು ಮಿಂಚಿ ನಿಂದ ಕೂಡಿದ ಭಾರಿ ಮಳೆ ಸುರಿಯಿತು. ಮಳೆಯೊಂದಿಗೆ ಹಿಂದೆಂದು ಕಾಣದಷ್ಟು ವೇಗವಾಗಿ ಗಾಳಿ ಬೀಸಿತು. ಆಲಿ ಕಲ್ಲು ಬೀಳುವ ಶಬ್ದವೂ ಕೇಳಿಸಿತು. ಬೆಳಿಗ್ಗೆ ಹೋಗಿ ತೋಟದಲ್ಲಿ ನೋಡಿದರೆ, ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಯಿತು. ನಾಲ್ಕು ಕಾಸು ಸಿಗಬಹುದೆಂದು ನಿರೀಕ್ಷಿಸಿದ್ದು, ಮಾವಿನ ಕಾಯಿ ನೆಲಕಚ್ಚಿತ್ತು’ ಎಂದು ವೆಲಗಲಬುರ್ರೆ ಗ್ರಾಮದ ಮಾವು ಬೆಳೆಗಾರ ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಆರಮಾಕಲಹಳ್ಳಿ, ಶೆಟ್ಟಿಹಳ್ಳಿ, ವೈ.ಹೊಸಕೋಟೆ, ಅಗ್ರಹಾರ, ಯಲವಗುಂಟೆ, ಶಿವಪುರ ಮತ್ತಿತರ ಕೆಲವು ಕಡೆ ಗುರುವಾರ ಸುರಿದ ಮಳೆಯೊಂದಿಗೆ ಬೀಸಿದ ಬಿರುಗಾಳಿ ಹಾಗೂ ಆಲಿಕಲ್ಲಿನ ಹೊಡೆತಕ್ಕೆ ಸಿಕ್ಕಿ ಮಾವಿನ ಫಸಲಿಗೆ ಹಾನಿ ಉಂಟಾಗಿತ್ತು. ರಾತ್ರಿಯೂ ಅದೇ ಪರಿಸ್ಥಿತಿ ಮರುಕಳಿಸಿದೆ. ಬೆಳಿಗ್ಗೆ ಬೆಳೆಗಾರರು ಮರಗಳ ಕೆಳಗೆ ಬಿದ್ದಿದ್ದ ಕಾಯಿಯನ್ನು ಆಯುವ ಕಾರ್ಯದಲ್ಲಿ ನಿರತರಾಗಿದ್ದರು. ಆದ ಕಾಯಿಯನ್ನು ಮೂಟೆಗಳಿಗೆ ತುಂಬಿ ಟ್ರಾಕ್ಟರ್ ಹಾಗೂ ಬೈಕ್‌ಗಳ ಮೇಲೆ ಹೇರಿಕೊಂಡು ಬಂದು ಶ್ರೀನಿವಾಸಪುರದ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಸುರಿಯುವ ದೃಶ್ಯ ಸಾಮಾನ್ಯವಾಗಿತ್ತು.
‘ಸರ್ಕಾರ ವಿಶೇಷ ತಂಡಗಳನ್ನು ರಚಿಸಿ ಬಿರುಗಾಳಿ ಹಾಗೂ ಆಲಿಕಲ್ಲಿನ ಪೆಟ್ಟಿಗೆ ಸಿಕ್ಕಿ ಸಂಭವಿಸಿರುವ ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ಮಾಡಿಸಬೇಕು. ಮಾವಿನ ಫಸಲು ನಷ್ಟ ಅನುಭವಿಸಿರುವ ರೈತರಿಗೆ ಎಕರೆಯೊಂದಕ್ಕೆ ₹ 1 ಲಕ್ಷ ಪರಿಹಾರ ನೀಡಬೇಕು’ ಎಂದು ರೈತ ಸಂಘದ ರಾಜ್ಯ ಘಟಕದ ಉಪಾದ್ಯಕ್ಷ ಕೆ.ನಾರಾಯಣಗೌಡ ಆಗ್ರಹಿಸಿದರು.
ಈಗಾಗಲೇ ಬಿಸಿಲಿನ ಬೇಗೆಯಿಂದ ದೊಡ್ಡ ಪ್ರಮಾಣದಲ್ಲಿ ಉದುರಿ ನೆಲಕಚ್ಚಿರುವ ದೊಡ್ಡ ಗಾತ್ರದ ಹೀಚು ಮರಗಳ ಕೆಳಗೆ ಕೊಳೆಯುತ್ತಿದೆ. ಈಗ ಬಿರುಗಾಳಿ ಹಾಗೂ ಆಲಿಕಲ್ಲಿನ ಹೊಡೆತ ಶುರುವಾಗಿದೆ. ಕೆಲವು ಬೆಳೆಗಾರರು ಕಾಯಿ ಆಯಲು ಕೃಷಿ ಕಾರ್ಮಿಕರ ಕೊರತೆಯ ಕಾರಣ ಆಯದೆ ಬಿಟ್ಟಿದ್ದಾರೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಹಣೆಬರಹ ಸರಿಯಿಲ್ಲ
ಮಾವಿನ ಕಾಯಿ ಉದುರಿಬಿದ್ದ ಕಾಯಿಯನ್ನು ಕೆಜಿಯೊಂದಕ್ಕೆ ₹ 2 ರಂತೆ ಖರೀದಿಸಿ ಲಾರಿಗೆ ತುಂಬಿ ಹೊರಗಿನ ಮಾರುಕಟ್ಟೆಗೆ ಕಳಿಹಿಸುತ್ತಿದ್ದಾರೆ. ‘ಈ ಬೆಲೆಯಲ್ಲಿ ಕಾಯಿ ಆದ ಕೂಲಿಯೂ ಸಿಗುತ್ತಿಲ್ಲ. ತೋಟದಲ್ಲಿ ಕಾಯಿ ಕೊಳೆಯಲು ಬಿಟ್ಟರೆ ಊಜಿ ನೊಣದ ಹಾವಳಿ ಹೆಚ್ಚುತ್ತದೆ ಎಂಬ ಭಯದಿಂದ ತಂದು ಮಾರುಕಟ್ಟೆಯಲ್ಲಿ ಸುರಿಯುತ್ತಿದ್ದೇವೆ. ಒಟ್ಟಿನಲ್ಲಿ ನಮ್ಮ ಹಣೆಬರಹ ಸರಿಯಿಲ್ಲ’ ಎಂದು ರೈತ ಮುನಿಯಪ್ಪ ಅಭಿಪ್ರಾಯಪಟ್ಟರು.