ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ, ರಾಜಕಾರಣಿಗಳ ನಿರ್ಲಕ್ಷ್ಯದಿಂದಾಗಿ ಸಮಗ್ರ ನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿದೆ :ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಆಪಾದಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಮಂಗಳವಾರ ಏರ್ಪಡಿಸಿದ್ದ ದುಂಡು ಮೇಜಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ 1800 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಮಳೆಯ ಪ್ರಮಾಣ ಕುಸಿದಿದೆ. ಇದರಿಂದ ಕೃಷಿ ಅಳಿವಿನ ಹಾದಿ ಹಿಡಿದಿದೆ. ಶುದ್ಧ ಕುಡಿಯುವ ನೀರಿಗೂ ಹಾಹಾಕಾರ ಎದ್ದಿದೆ ಎಂದು ಹೇಳಿದರು.
ಎತ್ತಿನ ಹೊಳೆ ಯೋಜನೆ ನಿರೀಕ್ಷಿತ ವೇಗದಲ್ಲಿ ಜಾರಿಗೆ ಬರುತ್ತಿಲ್ಲ. ಕೆಸಿ ವ್ಯಾಲಿ ನೀರಿನ ಗುಣಮಟ್ಟದ ಬಗ್ಗೆ ಅಪಸ್ವರ ಕೇಳಿಬರುತ್ತಿದೆ. ಈ ಜಿಲ್ಲೆ ಕಾವೇರಿ ನದಿ ಪಾಸಲೆಗೆ ಸೇರುವುದರಿಂದ, ಜನರ ದಾಹ ತೀರಿಸಲು ಮೇಕೆ ದಾಟು ಯೋಜನೆಯಿಂದ ನೀರು ಸರಬರಾಜು ಮಾಡಬಹುದಾಗಿದೆ. ಸ್ಥಳೀಯ ನೀರಾವರಿ ಯೋಜಜೆಗಳು ಹಳ್ಳ ಹಿಡಿದಿವೆ ಎಂದು ಹೇಳಿದರು.
ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈ.ವಿ.ವೆಂಕಟಾಚಲ ಮಾತನಾಡಿ, ಕೃಷಿ ಕೇತ್ರದಲ್ಲಿ ಮಾತ್ರ ಅತಿ ಹೆಚ್ಚು ಉದ್ಯೋಗಾವಕಾಶ ಇದೆ. ದೇಶದ ಶೇ.75 ರಷ್ಟು ಜನ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಆದರೂ ಸರ್ಕಾರಗಳು ಈ ಕ್ಷೇತ್ರಕ್ಕೆ ನಿರೀಕ್ಷಿತ ಪ್ರೋತ್ಸಾಹ ಹಾಗೂ ನೆರವು ನೀಡುತ್ತಿಲ್ಲ. ಇದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಜಿಲ್ಲಾ ಕೆಪಿಆರ್‌ಎಸ್ ಪ್ರಧಾನ ಕಾರ್ಯದರ್ಶಿ ಟ.ಎಂ.ವೆಂಕಟೇಶ್, ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಶ್ರೀರಾಮರೆಡ್ಡಿ, ತಾಲ್ಲೂಕು ಕೆಪಿಆರ್‌ಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪಾತಕೋಟ ನವೀನ್ ಕುಮಾರ್, ಮುಖಂಡ ಕೋಟೇಶ್‌್ ಸಮಗ್ರ ನೀರಾವರಿ ಯೋಜನೆ ಅಗತ್ಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿಕೊಡಲಾಯಿತು. ರೈತರು ನೀರಾವರಿ ಯೋಜನೆ ಕುರಿತು ಪ್ರಶ್ನೆ ಕೇಳಿ ಉತ್ತರ ಪಡೆದರು.
ಮುಖಂಡರಾದ ಎನ್.ವೀರಪ್ಪರೆಡ್ಡಿ, ವೆಂಕಟೇಶ್, ಶ್ರೀಧರ್, ನಾರಾಯಣರೆಡ್ಡಿ, ನಾರಾಯಣಸ್ವಾಮಿ, ವೆಂಕಟಲಕ್ಷ್ಮಮ್ಮ, ವೆಂಕಟರಮಣ, ಶ್ರೀದೇವಿ, ಆಂಜಿಲಮ್ಮ, ಜಿ.ಈಶ್ವರಮ್ಮ, ಮಮತ, ಪುಷ್ಪ, ನಾಗಭೂಷಣ ಇದ್ದರು.