ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ಪಟ್ಟಣದ ಒಳ ಚರಂಡಿ ನೀರನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿರುವವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಹೊರ ವಲಯದ ಅಮಾನಿ ಕೆರೆ ಸಮೀಪ ಬುಧವಾರ ಅಕ್ರಮವಾಗಿ ಒಳ ಚರಂಡಿಯಿಂದ ನೀರನ್ನು ಎತ್ತಲು ಬಳಸುತ್ತಿದ್ದ ಯಂತ್ರಗಳನ್ನು ವಶಪಡಿಸಿಕೊಂಡ ಬಳಿಕ ಮಾತನಾಡಿ, ಈ ಭಾಗದ ನಿವಾಸಿಗಳು ನೀಡಿದ ದೂರನ್ನು ಅನುಸರಿಸಿ, ಕಂದಾಯ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಏಕ ಕಾಲದಲ್ಲಿ ದಾಳಿ ನಡೆಸಿ ಒಳಚರಂಡಿಯಿಂದ ನೀರೆತ್ತಲು ಬಳಸುತ್ತಿದ್ದ 30 ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಯುಜಿಡಿ ನೀರನ್ನು ನೇರವಾಗಿ ಹರಿಸಿ ಬೆಳೆದ ಸೊಪ್ಪು ಹಾಗೂ ತರಕಾರಿ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು. ಕೃತ್ಯವನ್ನು ಮುಂದುವರಿಸಿದಲ್ಲಿ ಅಂಥವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗುವುದು. ಕೆರೆ ಒತ್ತುವರಿ ತೆರವು ಗೊಳಿಸಲಾಗುವುದು ಎಂದು ಹೇಳಿದರು. ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಪುರಸಭೆ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಪರಿಸರ ಅಭಿಯಂತರ ಡಿ.ಶೇಖರರೆಡ್ಡಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಾರಾಯಣಪ್ಪ, ಪುರಸಭಾ ಸದಸ್ಯ ಬಿ.ಎಲ್.ಭಾಸ್ಕರ್ ಇದ್ದರು.