ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಇಲ್ಲಿನತಾಲ್ಲೂಕು ಕಚೇರಿ ಎದುರು ಬುಧವಾರ ಜಿಲ್ಲಾ ಮಾಜಿ ಯೋಧರ ಟ್ರಸ್ಟ್ ಸದಸ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಧರಣಿ ನಡೆಸಿದರು. ಟ್ರಸ್ಟ್‌ನ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ್ ಧರಣಿ ನಿರತ ನಿವೃತ್ತ ಯೋಧರನ್ನು ಉದ್ದೇಶಿಸಿ ಮಾತನಾಡಿ, ದೇಶಕ್ಕಾಗಿ ಜೀವದ ಮೇಲಿನ ಹಂಗು ತೊರೆದು ಹೋರಾಡಿ ನಿವೃತ್ತರಾದ ಯೋಧರ ಪರಿಸ್ಥಿತಿ ತೃಪ್ತಿಕರವಾಗಿಲ್ಲ. ಸರ್ಕಾರ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಹಾಕಿಕೊಳ್ಳುತ್ತಿಲ್ಲ. ಇದು ದುರದೃಷ್ಟಕರ ಎಂದು ಹೇಳಿದರು. ದೇಶಕ್ಕಾಗಿ ಶ್ರಮಿಸಿದ ಮಾಜಿ ಯೋಧರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಹಾಗಾಗಿ ಅವರಿಗೆ ಕೃಷಿ ಕೈಗೊಳ್ಳಲು ಅಗತ್ಯವಾದ ಜಮೀನು ಮಂಜೂರು ಮಾಡಬೇಕು. ಮನೆಗಳನ್ನು ನಿರ್ಮಿಸಿ ಕೊಡಬೇಕು. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಯೋಜನೆ ರೂಪಿಸಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಅವರಿಗೆ ನೀಡಲಾಯಿತು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಇದ್ದರು. ನಿವೃತ್ತ ಯೋಧರ ಟ್ರಸ್ಟ್ ಮುಖಂಡರಾದ ಎನ್.ಅಮರನಾಥ್, ಎಂ.ರಾಜಣ್ಣ, ಎನ್.ನಾಗರಾಜ್, ಕೃಷ್ಣಮೂರ್ತಿ, ಕೇಶವಮೂರ್ತಿ, ರಮೇಶ್, ಶ್ರೀನಿವಾಸ್, ಪಿ.ಕೃಷ್ಣಯ್ಯ, ಸುರೇಶ್ ಇದ್ದರು.