ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ ತಾಲ್ಲೂಕಿನ ದಳಸನೂರು ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭವನ್ನು ಶಾಸಕ ಕೆ.ಆರ್.ರಮೇಶ್ ಕುಮಾರ್ ಉದ್ಘಾಟಿಸಿದರು.
ಶ್ರೀನಿವಾಸಪುರ: ಫಲಾನುಭವಿಗಳು, ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವುದರ ಮೂಲಕ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ದಳಸನೂರು ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಏರ್ಪಡಿಸಿದ್ದ ಸಾಲವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಲೇವಾದೇವಿಗಾರರ ಶೋಷಣೆಯಿಂದ ಮಹಿಳೆಯರನ್ನು ಮುಕ್ತಗೊಳಿಸುವ ಉದ್ದೇಶದಿಂದ ಬಡ್ಡಿ ರಹಿತ ಸಾಲ ನೀಡುವ ವ್ಯವಸ್ಥೆ ತರಲಾಯಿತು ಎಂದು ಹೇಳಿದರು.
‘ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ತಲಾ ರೂ.50 ಸಾವಿರ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ರೂ.1 ಲಕ್ಷ ನೀಡುವ ಉದ್ದೇಶ ಇತ್ತಾದರೂ, ಸರ್ಕಾರ ಬದಲಾದ ಪರಿಣಾಮವಾಗಿ ಅದು ಸಾಧ್ಯವಾಗಲಿಲ್ಲ. ಮುಂದೆ ರಾಜ್ಯ ಅಥವಾ ಕೇಂದ್ರದಲ್ಲಿ ನನಗೆ ಅವಕಾಶ ಸಿಕ್ಕಿದಲ್ಲಿ ಉದ್ದೇಶಿತ ಸಾಲದ ಮೊತ್ತವನ್ನು ನೀಡಲಾಗುವುದು’ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಬಡ್ಡಿ ರಹಿತ ಸಾಲ ಪಡೆದ ಮಹಿಳೆಯರು ನಿಯಮಾನುಸಾರ ಮರುಪಾವತಿ ಮಾಡುತ್ತಿದ್ದಾರೆ. ಆದ್ದರಿಂದಲೇ ಹೊಸ ಸಾಲ ನೀಡಲು ಸಾಧ್ಯವಾಗುತ್ತಿದೆ. ಬಡವರಿಗೆ ನೀಡುವ ಸಾಲ ಮರುಪಾವತಿಯಾಗುತ್ತದೆ. ಬಡವರ ಆರ್ಥಿಕ ಅಭಿವೃದ್ಧಿ ಡಿಸಿಸಿ ಬ್ಯಾಂಕ್ ಉದ್ದೇಶವಾಗಿದೆ. ಈಗ ಗೃಹೋಪಯೋಗಿ ವಸ್ತುಗಳನ್ನು ಸಾಲದ ರೂಪದಲ್ಲಿ ನೀಡಲಾಗುತ್ತಿದೆ. ಅದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ 90 ಸ್ತ್ರೀ ಶಕ್ತ ಸಂಘಗಳಿಗೆ ರೂ.4.5ಕೋಟಿ ಸಾಲ ನೀಡಲಾಯಿತು. ಕೆಸಿಸಿ ರೈತರಿಗೆ ರೂ.1.5 ಕೋಟಿ ಸಾಲ ವಿತರಣೆ ಮಾಡಲಾಯಿತು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್, ಮಾಜಿ ನಿರ್ದೇಶಕ ಮುನಿವೆಂಕಟಪ್ಪ, ಮುಖಂಡರಾದ ವೆಂಕಟರೆಡ್ಡಿ, ಹೂವಳ್ಳಿ ಬಾಬು, ಬೈಚಪ್ಪ, ವೀರಭದ್ರಸ್ವಾಮಿ, ಅಯ್ಯಪ್ಪ ಸಮಾರಂಭದಲ್ಲಿ ಇದ್ದರು.