ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ ತಾಲ್ಲೂಕಿನ ಪುಲಗೂರುಕೋಟೆ ಗ್ರಾಮದದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿದರು.
ಶ್ರೀನಿವಾಸಪುರ: ಮೂಲ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಪುಲಗೂರುಕೋಟೆ ಗ್ರಾಮದದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಕೆ, ಮನೆ ಹಾಗೂ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಸತತ ಪ್ರಯತ್ನದ ನಡುವೆಯೂ ಕೆಲವು ಕಡೆ ಅಂತರ್ಜಲದ ಕೊರತೆಯಿಂದಾಗಿ ಕುಡಿಯುವ ನೀರು ಪೂರೈಕೆ ಕಷ್ಟವಾಗಿದೆ. ಆದರೂ ನೀರು ದೊರಕಿಸಿಕೊಡುವ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದರು.
ತಾಲ್ಲೂಕಿಗೆ 18 ಸಾವಿರ ಮನೆಗಳು ಮಂಜೂರಾಗಿದ್ದು, ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿದೆ. ಅಗತ್ಯ ಇರುವ ಕಡೆಗಳಲ್ಲಿ ಸಮುದಾಯ ಭವನ ಹಾಗೂ ಸಿಮೆಂಟ್ ರಸ್ತೆಗಳ ನಿರ್ಮಾಣ ಕಾರ್ಯ ಮುಂದುವರಿದೆ. ಸರ್ವತೋಮುಖ ಪ್ರಗತಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಡಿಯುವ ನೀರು, ಸಮುದಾಯ ಭವನ, ಪಡಿತರ ಚೀಟಿ ವಿತರಣೆ, ವಿದ್ಯುತ್ ಸರಬರಾಜು, ಸಿಸಿ ರಸ್ತೆಗಳು, ಚರಂಡಿಗಳು, ವೃದ್ಧಾಪ್ಯ ವೇತನ ಹಾಗೂ ಮನೆಗಳ ಪ್ರಗತಿ ಬಗ್ಗೆ ಪರಿಶೀಲಿಸಿದರು. ಎರಡನೇ ಹಂತದ ಮನೆಗಳ ಮಂಜೂರಾತಿ ಹಾಗೂ ದನ, ಕುರಿ ಕೊಟ್ಟೆಗೆ ಆದೇಶ ಪತ್ರಗಳನ್ನು ವಿತರಿಸಿದರು. ಹೊಸ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನರೇಶ್, ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ ಮತ್ತಿತರರು ಇದ್ದರು.