ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಗುರು ಶಿಷ್ಯ ಸಂಬಂಧ ಮುಂದುವರಿಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ವೈ.ಎ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಕ ಸಮುದಾಯ ಸಮಾಜಕ್ಕೆ ಆದರ್ಶಪ್ರಾಯವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು. ಜ್ಞಾನಾರ್ಜನೆಗೆ ಶಿಕ್ಷಕರು ಪ್ರೇರಣ ಶಕ್ತಿಯಾಗಬೇಕು. ಎಲ್ಲ ಶಿಕ್ಷಕರಿಗೂ ಸಮಾನ ಗೌರವ ಪ್ರಾಪ್ತವಾಗಬೇಕು. ಶಿಕ್ಷಕರನ್ನು ವರ್ಗೀಕರಣ ಮಾಡಬಾರದು. ಶಿಕ್ಷಕರ ನಡೆ ನುಡಿ ಸಮಾಜವನ್ನು ತಿದ್ದುವಂತಿರಬೇಕು. ಈ ದೃಷ್ಟಿಯಿಂದಲೇ ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಇದು ಬದಲಾದ ಪರಿಸ್ಥತಿಯಲ್ಲಿ ಸ್ವಾಗತಾರ್ಹ ಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಪಂಚಾಯಿತಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಮಾತನಾಡಿದರು. ಸಮಾರಂಭದಲ್ಲಿ ನಿವೃತ್ತರಾದ ಶಿಕ್ಷಕರು ಹಾಗೂ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್.ವೇಣುಗೊಪಾಲ್, ಮಖಂಡ ಜಯರಾಮರೆಡ್ಡಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಜಯರಾಂ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ, ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ನಾಗರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎನ್.ಗೋವಿಂದರೆಡ್ಡಿ, ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಎಚ್.ಸಂಪತ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಅಧಿಕಾರಿಗಳಾದ ವಸಂತ, ಶ್ರೀನಿವಾಸ್, ಸುಬ್ರಮಣಿ, ಸುಲೋಚನ, ಬೈರೇಗೌಡ ಇದ್ದರು.