ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಹೇಳಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕನಕದಾಸ ಜಯಂತಿ ಸಮಾರಂಭದಲ್ಲಿ ಕನಕ ದಾಸರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಿದರು. ಅವರು ಯೋಧನಾಗಿ ಪರಾಕ್ರಮಕ್ಕೆ, ಕವಿಯಾಗಿ ಸಮಾಜ ಸುಧಾರಣೆಗೆ ಹೆಸರಾಗಿದ್ದಾರೆ ಎಂದು ಹೇಳಿದರು.
ಅವರ ನೆನೆಪು ಜಯಂತಿಗೆ ಸೀಮಿತವಾಗಬಾರದು. ಅವರನ್ನು ಯಾವುದೇ ಒಂದು ಜಾತಿಗೆ ಸೀಮಿತ ಗೊಳಿಸಬಾರದು. ಸಮಾಜದ ಹಿತಕ್ಕೆ ಶ್ರಮಿಸಿದ ವ್ಯಕ್ತಿಗೆ ಜಾತಿ ಮತದ ಭೇದ ಇರುವುದಿಲ್ಲ. ಜಾತಿ ವ್ಯವಸ್ಥೆಯನ್ನು ತಮ್ಮ ಕೀರ್ತನೆಯಲ್ಲಿ ಪ್ರಶ್ನಿಸಿದ ಹಾಗೂ ಜಾತಿ ವ್ಯವಸ್ಥೆಯ ಟೊಳ್ಳುತನವನ್ನು ಬಯಲು ಮಾಡಿದ ಮಹಾ ಸಂತ ಕವಿ ಕನಕದಾಸರು ಎಂದು ಹೇಳಿದರು.
ಉಪ ತಹಶೀಲ್ದಾರ್ ಮಲ್ಲೇಶ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ವೇಮಣ್ಣ ಇದ್ದರು.