ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ, ಎಲ್ಐಸಿ ಪ್ರತಿನಿಧಿಗಳು ನಿಗಮದ ವಿವಿಧ ಉಳಿತಾಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕು:ಹನುಮಂತ ನಾಯಕ
ಶ್ರೀನಿವಾಸಪುರ: ಎಲ್ಐಸಿ ಪ್ರತಿನಿಧಿಗಳು ನಿಗಮದ ವಿವಿಧ ಉಳಿತಾಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕು ಎಂದು ಭಾರತೀಯ ಜೀವ ವಿಮಾ ನಿಗಮದ ಜಿಲ್ಲಾ ಘಟಕದ ವ್ಯವಸ್ಥಾಪಕ ಹನುಮಂತ ನಾಯಕ ಹೇಳಿದರು.
ಪಟ್ಟಣದ ಎಲ್ಐಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕಚೇರಿ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಿಗಮ ಕಳೆದ 63 ವರ್ಷಗಳಿಂದ ಸಾರ್ವಜನಿಕರ ಸೇವೆ ಮಾಡುತ್ತಿದೆ. ಪಾಲಸಿದಾರರ ಜೀವನ ಸುಖಕರವಾಗಿರುವಂತೆ ನೋಡಿಕೊಳ್ಳುತ್ತಿದೆ. ಇದು ದೇಶದ ಒಂದು ಹೆಮ್ಮೆಯ ಆರ್ಥಿಕ ಸಂಸ್ಥೆಯಾಗಿದೆ ಎಂದು ಹೇಳಿದರು.
ಸಂಸ್ಥೆಯ ಅಭಿವೃದ್ಧಿ ಹಾಗೂ ಪಾಲಸಿದಾರರ ಕ್ಷೇಮಾಭಿವೃದ್ಧಿಗೆ ನಿಗಮದ ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜನರ ಒಲವು ಗಳಿಸಿ ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ದೇಶದ ಹಾಗೂ ಜನರ ಆರ್ಥಿಕ ಆಭಿವೃದ್ಧಿಯಲ್ಲಿ ಎಲ್ಐಸಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ನಿಗಮದ ತಾಲ್ಲೂಕು ಘಟಕದ ವ್ಯವಸ್ಥಾಪಕ ಸತೀಶ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಕಂಪನಿಗಳು ಹಾಗೂ ಸ್ಥಳೀಯ ಲೇವಾದೇವಿದಾರರಿಂದ ಜನರು ಮೊಸಹೋಗುತ್ತಿದ್ದಾರೆ. ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಎಲ್ಐಸಿ ಯೋಜನೆಗಳನ್ನು ಪರಿಚಯಿಸಬೇಕು. ಹೆಚ್ಚಿನ ಸಂಖ್ಯೆಯ ಜನರು ಪಾಲಸಿ ಪಡೆಯುವಂತೆ ಮಾಡಬೇಕು ಎಂದು ಹೇಳಿದರು.
ಎಲ್ಐಸಿ ಜಿಲ್ಲಾ ಉಪ ವ್ಯವಸ್ಥಾಪಕ ವಾಸುದೇವ ಗಳಬಿ, ಮೇಲ್ವಿಚಾರಕ ಶಿವರಾಜ್, ವಿಸ್ತರಣಾಧಿಕಾರಿಗಳಾದ ನರೇಶ್, ನಟರಾಜ್, ಕೆ.ಬಾಲಚಂದ್ರ, ಆರ್.ರವೀಂದ್ರಯ್ಯ ಕುಲರ್ಣಿ, ಶ್ರೀನಿವಾಸ್ ಇದ್ದರು.