ವರದಿ:ಶಬ್ಬೀರ್ ಅಹ್ಮದ್
ಶ್ರೀನಿವಾಸಪುರ: ಇಲ್ಲಿನ ಪುರಸಭೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.79.99ರಷ್ಟು ಮತದಾನ
ಶ್ರೀನಿವಾಸಪುರ: ಇಲ್ಲಿನ ಪುರಸಭೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.79.99ರಷ್ಟು ಮತದಾನವಾಗಿದೆ ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ತಿಳಿಸಿದ್ದಾರೆ. ಬೆಳಿಗ್ಗೆ ಚುರುಕಾಗಿ ನಡೆದ ಮತದಾನ, ಮಧ್ಯಾಹ್ನ ಸುಡು ಬಿಸಿಲಿನ ಪರಿಣಾಮವಾಗಿ ಮಂದವಾಯಿತು. ಬಿಸಿಲು ಕಡಿಮೆ ಆಗುತ್ತಿದ್ದಂತೆ ಮತ್ತೆ ಮತದಾನ ಚುರುಕುಗೊಂಡಿತು. ಪಟ್ಟಣದಲ್ಲಿ ಸ್ಥಾಪಿಸಲಾಗಿದ್ದ 23 ಮತಗಟ್ಟೆಗಳಲ್ಲೂ ಪುರುಷ ಹಾಗೂ ಮಹಿಳಾ ಮತದಾರರು ಪ್ರತ್ಯೇಕ ಸರತಿ ಸಾಲುಗಳಲ್ಲಿ ನಿಂತು ಮತ ಚಲಾಯಿಸಿದರು.
ಮತದಾನದ ಸಂದರ್ಭದಲ್ಲಿ ಭಾರಿ ಪೊಲೀಸ್ ಬಂದೋಗಸ್ತ್ ಮಾಡಲಾಗಿತ್ತು. ಪ್ರತಿ ಮತಗಟ್ಟೆಗೆ ನಾಲ್ಕು ಮಂದಿ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿತ್ತು. 6 ಮತಗಟ್ಟೆಗಳಿಗೆ ಒಬ್ಬರಂತೆ ಒಬ್ಬ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾಗೂ ವಿಶೇಷ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು.ಮುಂಜಾಗ್ರತಾ ಕ್ರಮವಾಗಿ ಅತಿ ಸೂಕ್ಷ್ಮ ಮತಗಟ್ಟೆಗಳ ಎದುರು ಸಶಸ್ತ್ರ ಪೊಲೀಸ್ ಪಡೆಯ ಕಾವಲು ಹಾಕಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಕಟೋಚ್ ಸಪೆಟ್, ಹೆಚ್ಚುವರಿ ವರಿಷ್ಠಾಧಿಕಾರಿ ಜಾಹ್ನವಿ, ಡಿವೈಎಸ್‌ಪಿ ಉಮೇಶ್, ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ರಾಮಕೃಷ್ಣಯ್ಯ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆರ್.ವೆಂಕಟೇಶ್ ಭದ್ರತೆಯ ಉಸ್ತುವಾರಿ ವಹಿಸಿದ್ದರು.