ಶ್ರೀನಿವಾಸಪುರ: ಅಲೆಮಾರಿ ಬುಡ್ಗಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕು ಒಕ್ಕೂಟದಿಂದ ಒತ್ತಾಯ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಶ್ರೀನಿವಾಸಪುರ: ಅಲೆಮಾರಿ ಬುಡ್ಗಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕು ಒಕ್ಕೂಟದಿಂದ ಒತ್ತಾಯ

 

 

ಶ್ರೀನಿವಾಸಪುರ: ಅಲೆಮಾರಿ ಬುಡ್ಗಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ತಾಲ್ಲೂಕು ಕಛೇರಿಯ ಮುಂದೆ ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕು ಒಕ್ಕೂಟದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ತಾಲ್ಲೂಕು ಕಛೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅಲೆಮಾರಿ ಬುಡಕಟ್ಟು ಮಹಾ ಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಹೆಚ್.ಜಿ.ಮುರುಗೇಶ್ ಸ್ವತಂತ್ರ ಬಂದು 73 ವರ್ಷ ಕಳೆದರು ಅಲೆಮಾರಿ ಬುಡ್ಗಜಂಗಮರನ್ನು ಗುರ್ತಿಸುವಲ್ಲಿ ತಾಲ್ಲೂಕು ತಹಶೀಲ್ದಾರರು ವಿಫಲರಾಗಿದ್ದಾರೆ. ಸ್ವತಂತ್ರ ಪೂರ್ವದಿಂದಲೂ ಅಲೆಮಾರಿ ಬುಡ್ಗಜಂಗಮರನ್ನು ಕುರಿತು ಹಲವಾರು ಕುಲ ಶಾಸ್ತ್ರೀಯ ಅಧ್ಯಾಯನಗಳು ಕೇಂದ್ರ ಸರ್ಕಾರ-ರಾಜ್ಯ ಸರ್ಕಾರ ಜಿಲ್ಲಾಡಳಿತ ನೀಡಿರುವ ನೂರಾರು ಆದೇಶಗಳು ಆಧಾರವಾಗಿ ಇಟ್ಟುಕೊಂಡರು ಸಹ ಇಲ್ಲಿನ ತಹಶೀಲ್ದಾರ್ ಗಮನ ಹರಿಸದೆ ನಮ್ಮ ಜನಾಂಗವನ್ನು ಕಡೆಗಣಿಸುತ್ತಿದ್ದಾರೆ ಎಂದರು.
ನಮ್ಮ ಸಮುದಾಯಕ್ಕೆ ರಾಜ್ಯಾದ್ಯಂತ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದು, ಈ ಜಿಲ್ಲೆಯಲ್ಲಿ ಮಾತ್ರ ನ್ಯಾಯಲಯದಲ್ಲಿ ಬುಡ್ಗಜಂಗಮದ ದಾವೆ ನಡುಯುತ್ತಿದ್ದರಿಂದ ಇದರ ನೆಪ ಒಡ್ಡಿ ನಮ್ಮ ಸಮುದಾಯಕ್ಕೆ ಪ್ರಮಾಣ ಪತ್ರ ನೀಡುತ್ತಿಲ್ಲ. ಇಲ್ಲಿನ ಅಧಿಕಾರಿಗಳು ವಿನಾಕಾರಣ ಕೆಲವು ಬಲವಂತರ ಬಂಟರಾಗಿ ಸಂವಿಧಾನದ ಹಕ್ಕುಗಳಿಗೆ ವಿರುದ್ದವಾಗಿ ಕಾರ್ಯ ನಿರ್ವಹಿಸುತ್ತಾ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಶೋಷಿತ ಸಮುದಾಯಗಳಿಗೆ ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಕಗ್ಗೊಲೆ ಮಾಡುತ್ತಿರುವುದು ಖಂಡನೀಯವಾಗಿದೆ ಶೀಘ್ರವಾಗಿ ನಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿ ಬುಡ್ಗಜಂಗಮರಿಗೆ ಜಾತಿ ಪ್ರಮಾಣ ಪತ್ರ ವಿತರಿಸಬೇಕು ನಮ್ಮ ಸಮುದಾಯದ ಏಳಿಗೆಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ ಬುಡ್ಗಂಗಮರಿಗೆ ವಿನಾಕಾರಣ ಸರ್ಕಾರ ಆದೇಶವಿಲ್ಲ ಇತರೆ ಕಾರಣಗಳು ಹೇಳಿ ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ತಾಲ್ಲೂಕು ಕಚೇರಿಯ ಮುಂದೆಯೆ ಅನಿರ್ದಿಷ್ಟ ಧರಣಿಯನ್ನು ಮಾಡುತ್ತೇವೆಂದು ಹೆಚ್ಚರಿಕೆಯನ್ನು ನೀಡಿದರು.
ಅಲೆಮಾರಿ ಬುಡಕಟ್ಟು ಮಹಾ ಸಭಾ ತಾಲ್ಲೂಕು ಅಧ್ಯಕ್ಷ ಕೆ.ಎಂ.ಮಂಜುನಾಥ್ ಮಾತನಾಡಿ ಈ ತಾಲ್ಲೂಕಿನಲ್ಲಿ ಬುಡ್ಗಜಂಗಮ, ಹಂದಿಜ್ಯೋಗಿ, ಚೆನ್ನದಾಸರ್, ಹಕ್ಕಿ-ಪಿಕ್ಕಿ, ದೊಂಬರ ಜನಾಂಗದವರು ಸುಮಾರು 6 ಸಾವಿರಕ್ಕಿಂತ ಹೆಚ್ಚು ಜನ ವಾಸವಾಗಿದ್ದು ಇವರೆಲ್ಲರೂ ಅಲೆಮಾರಿ ಜನಾಂಗಕ್ಕೆ ಸೇರಿದವರು. ಹಾಗೂ ಇವರೆಲ್ಲ ಪರಿಶಿಷ್ಟ ಜಾತಿಗೆ ಸೇರಿದ್ದಾರೆಂದು ಸರ್ಕಾರ ಮೊದಲು ಜಾತಿ ಪ್ರಮಾಣ ಪತ್ರ ಸಹ ನೀಡಿದ್ದು ಇವರಿಗೆ ಸರ್ಕಾರ ಜಾತಿ ಪ್ರಮಾಣ ಪತ್ರ ನೀಡಬಹುದೆಂದು ಸರ್ಕಾರದ ಆದೇಶವು ಸಹ ಇದೆ. ಕಳೆದ 5-6 ವರ್ಷಗಳಿಂದ ನಮ್ಮ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರವು ಇಲ್ಲದ ಕಾರಣ ತುಂಬಾ ತೊಂದರೆಯಾಗಿದೆ. ನಮ್ಮ ಸಮುದಾಯದವರು ಊರೂರು ಅಲೆದು ಕೂಲಿ ಮಾಡಿ ಜೀವನ ಮಾಡುವವರಾಗಿದ್ದಾರೆ. ಮುಖ್ಯವಾಗಿ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದ್ದು ಕನಿಷ್ಟ ಪಕ್ಷ ವಿದ್ಯಾರ್ಥಿ ವೇತನ ಪಡೆಯಲು ಸಹ ಆಗುತ್ತಿಲ್ಲ ಸುಮಾರು ಬಾರಿ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದರು ಇದನ್ನು ತಹಶೀಲ್ದಾರ್ ವಜಾ ಮಾಡುತ್ತಿದ್ದಾರೆ. ಇದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ ಕೂಡಲೇ ನಮಗೆ ಜಾತಿ ಪ್ರಮಾಣ ಪತ್ರ ನೀಡಬೇಕು ಇಲ್ಲದ ಪಕ್ಷದಲ್ಲಿ ನಮ್ಮ ಸಂಘಟನೆಯಿಂದ ತಾಲ್ಲೂಕು ಕಛೇರಿಯ ಮುಂದೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದರು.
ಇದೇ ಸಮಯದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಮತ್ತು ದಲಿತ ಸಂಘರ್ಷ ಸಮಿತಿಯ ಮುಖಂಡ ಕೂಸಂದ್ರ ರೆಡ್ಡಪ್ಪ ಬುಡ್ಗಜಂಗಮ ಸಮಾಜದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಇವರು ಕೂಡಲೇ ತಹಶೀಲ್ದಾರ್ ರವರು ದಾಖಲೆಗಳನ್ನು ಪರಿಶೀಲಿಸಿ ಈ ಸಮಾಜಗಳಿಗೆ ಜಾತಿ ಪತ್ರ ನೀಡಿ ವಿದ್ಯಾರ್ಥಿಗಳಿಗೆ ಮತ್ತು ಸರ್ಕಾರದ ಸೌಲಭ್ಯಗಳಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕು ಇಲ್ಲದೆ ಇದ್ದ ಪಕ್ಷದಲ್ಲಿ ತಾಲ್ಲೂಕಿನ ಎಲ್ಲಾ ಸಂಘಟನೆಗಳ ಒಮ್ಮತದಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.
ತಹಶೀಲ್ದಾರ್ ಸುಜಾತಮ್ಮ ಮನವಿ ಪತ್ರ ಸ್ವೀಕರಿಸಿ ನಾವು ಆದೇಶಗಳನ್ನು ಪರಿಶೀಲನೆ ಮಾಡಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟು ಮಹಾ ಸಭಾ ತಾಲ್ಲೂಕು ಉಪಾಧ್ಯಕ್ಷ ಎಂ.ಶಂಕರ್, ಉತ್ತನೂರು ಮುರಳಿ, ತೊಟ್ಲಿ ವೆಂಕಟೇಶ್, ಮದನಹಳ್ಳಿ ಮಂಜು, ವೇಮಗಲ್ ನಾಗರಾಜ್, ಖಜಾಂಚಿ ಜನಾರ್ಧನ್, ಬೈಕೊತ್ತೂರು ಶಂಕರ್, ನೆಲವಂಕಿ ಶಂಕರ್, ಹಾಗೂ ಸಮುದಾಯದ ಮಕ್ಕಳು ಮತ್ತು ಪೋಷಕರು ಹಾಗೂ ಇನ್ನಿತರರು ಹಾಜರಿದ್ದರು.