ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಅಡ್ಡಗಲ್ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರ ವೈರಾಣು ನಿರೋಧಕ ಔಷಧ ಸಿಂಪಡಣೆ ಮಾಡಲಾಯಿತು.

ಆರೋಗ್ಯ ನಿರೀಕ್ಷಕ ಸುಬ್ರಮಣಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ, ಕೊರೊನಾ ತಡೆಗೆ ಗ್ರಾಮಸ್ಥರು ಸಹಕರಿಸಬೇಕು. ನಗರ ಪ್ರದೇಶದಂತೆ ಗ್ರಾಮೀಣ ಪ್ರದೇಶದಲ್ಲೂ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಹೊರಗಡೆಯಿಂದ ಬರುವ ವ್ಯಕ್ತಿಗಳ ಬಗ್ಗೆ ಎಚ್ಚರ ವಹಿಸಬೇಕು. ಕೊರೊನಾ ರೋಗದ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರಿಗೆ ತಿಳಿಸಬೇಕು ಎಂದು ಹೇಳಿದರು.
ಪಿಡಿಒ ಚಂದ್ರಪ್ರಕಾಶ್ ,ಆರೋಗ್ಯ ನಿರೀಕ್ಷಕ ಹರೀಶ್, ಪುರಸಭೆ ಸಿಬ್ಬಂದಿ ಇದ್ದರು.
ಶ್ರೀನಿವಾಸಪುರ: ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ತರಕಾರಿ ಖರೀದಿಸಲು ಚಿಲ್ಲರೆ ವ್ಯಾಪಾರಿಗಳು ಹಾಗೂ ಗ್ರಾಹಕರು, ಸಾಮಾಜಿಕ ಅಂತರ ಪಾಲಿಸುವುದನ್ನು ಮರೆತು ಮುಗಿಬಿದ್ದರು.
ಮಾರುಕಟ್ಟೆ ಪ್ರಾಂಗಣದಲ್ಲಿ ಬೆಳಿಗ್ಗೆ 10 ಗಂಟೆ ವರೆಗೆ ತರಕಾರಿ ಮಾರಾಟಕ್ಕೆ ಅನುಮತಿ ನೀಡಲಾಗಿದ್ದು, ರೈತರು ಗ್ರಾಮೀಣ ಪ್ರದೇಶದಿಂದ ವಿವಿಧ ತರಕಾರಿ ತಂದಿದ್ದರು. ತಂದ ತರಕಾರಿ ಹರಾಜು ಹಾಕುವ ಸಂದರ್ಭದಲ್ಲಿ, ತರಕಾರಿ ಖರೀದಿಸಲು ಬಂದಿದ್ದ ಚಿಲ್ಲರೆ ವ್ಯಾಪಾರಿಗಳು ಹಾಗೂ ಗ್ರಾಹಕರು ವಿವೇಚನಾ ರಹಿತವಾಗಿ ಗುಂಪಾಗಿ ನಿಂತು ಆತಂಕ ಮೂಡಿಸಿದರು.
ಪುರಸಭೆ ಆರೋಗ್ಯ ನಿರೀಕ್ಷಕರಾದ ಕೆ.ಜಿ.ರಮೇಶ್, ಪೃಥ್ವಿರಾಜ್ ಸ್ಥಳಕ್ಕೆ ಆಗಮಿಸಿ ಕೊರಾನ ಮಾರಿ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಪಾಲಿಸುವಂತೆ ತಿಳಿಸಿದರು.
