ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಸಮಾರಂಭದಲ್ಲಿ ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ ಮಾತನಾಡಿದರು.
ಶ್ರೀನಿವಾಸಪುರ: ಕಾಯಕ ತತ್ವದ ಮಹತ್ವ ಸಾರುವ ಹಾಗೂ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಮಡಿವಾಳ ಮಾಚಿದೇವರ ವಚನಗಳು ಸಮಾಜಕ್ಕೆ ದಾರಿ ದೀಪವಾಗಿವೆ ಎಂದು ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಸಮಾರಂಭದಲ್ಲಿ, ಮಾಚಿದೇವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಸಮಾಜ ಸುಧಾರಕರು ಸಮಾಜದ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗುತ್ತಾರೆ ಎಂದು ಹೇಳಿದರು.
ಮಾಚಿದೇವರು ಸಮಾಜಕ್ಕೆ ಸ್ವಚ್ಛತೆಯ ಸಂದೇಶ ಸಾರಿದ ವಚನಕಾರ. ಅನುಭವ ಮಂಟಪದ ಕೊಡುಗೆಯಾದ ಅವರು, ಸಮಾಜ ಸುಧಾರಣೆಗೆ ಪ್ರೇರಕವಾಗಿ ಸಾಹಿತ್ಯ ರಚನೆ ಮಾಡಿದ್ದಾರೆ. ಅವರ ಸಾಹಿತ್ಯ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಕಾಯಕದಲ್ಲಿ ದೇವರನ್ನು ಕಂಡ ಅವರ ವ್ಯಕ್ತಿತ್ವ ವಿಶಿಷ್ಟವಾದುದು ಎಂದು ಹೇಳಿದರು.
ಮುಜರಾಯಿ ವಿಭಾಗದ ಅಧಿಕಾರಿ ಭಾಸ್ಕರ್, ಶ್ರೀನಿವಾಸಯ್ಯ, ಕಚೇರಿ ಸಿಬ್ಬಂದಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.