ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಂ.ನರೇಶ್ ಮಾತನಾಡಿದರು.
ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಕುಡಿಯು ನೀರು ಪೂರೈಕೆಗೆ ಆದ್ಯತೆ ನೀಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಂ.ನರೇಶ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಆರೋಗ್ಯ ಇಲಾಖೆ ಅಲ್ಲಿಗೆ ವೈದ್ಯರನ್ನು ನೇಮಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜನ ಸಾಮಾನ್ಯರು ಮನೆ ನಿರ್ಮಿಸಿಕೊಳ್ಳಲು ತೆಗೆದುಕೊಂಡು ಹೋಗುವ ಮರಳನ್ನು ಪೊಲೀಸರು ವಶಪಡಿಸಿಕೊಳ್ಳುವ ಬಗ್ಗೆ ಸದಸ್ಯರು ಪಕ್ಷ ಭೇದ ಮರೆತು ಅತೃಪ್ತಿ ವ್ಯಕ್ತಪಡಿಸಿದರು. ತಾಲ್ಲೂಕಿನಲ್ಲಿ ಸರ್ಕಾರದ ವತಿಯಿಂದ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮನೆ ಇಲ್ಲದವರು ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಅವರಿಗೆ ಮರಳು ನಿರಾಕರಿಸಿದರೆ ಹೇಗೆ ಎಂಬುದು ಸದಸ್ಯರ ಪ್ರಶ್ನೆಯಾಗಿತ್ತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಮಾತನಾಡಿ, ತಾಲ್ಲೂಕಿನ ಬಡವರು ಮನೆ ನಿರ್ಮಿಸಿಕೊಳ್ಳಲು ಮರಗಳು ಸಾಗಿಸುವ ಕುರಿತು ತಹಶೀಲ್ದಾರ್ ಅವರೊಂದಿಗೆ ಚರ್ಚಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಶೀಘ್ರವಾಗಿ ನೀರು ಪೂರೈಕೆ ಮಾಡಲು, ಬತ್ತಿಹೋದ ಕೊಳವೆ ಬಾವಿಗಳ ವಿದ್ಯುತ್ ಸಂಪರ್ಕವನ್ನು ಅಗತ್ಯವಿರುವ ಕೊಳವೆ ಬಾವಿಗಳಿಗೆ ಸ್ಥಳಾಂತರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕೃಷಿ ಇಲಾಖೆ ನೀಡುವ ಟಾರ್ಪಾಲಿನ್ಗಳನ್ನು ಸಮರ್ಪಕವಾಗಿ ವಿತರಣೆ ಮಾಡದಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಕೃಷಿ, ಕೈಗಾರಿಕೆ, ಶಿಕ್ಷಣ, ಅಕ್ಷರ ದಾಸೋಹ, ಮೀನುಗಾರಿಕೆ, ರೇಷ್ಮೆ ಕೃಷಿ, ಕುಡಿಯುವ ನೀರು ಪೂರೈಕೆ, ಬೆಸ್ಕಾಂ, ತೋಟಗಾರಿಕೆ, ಅರಣ್ಯ, ಆರೋಗ್ಯ, ಶಿಶು ಅಭಿವೃದ್ಧಿ ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಆಯಾ ಇಲಾಖೆಗೆ ಸಂಬಂಧಿಸಿದಂತೆ ಇಲಾಖೆ ಮುಖ್ಯಸ್ಥರು ಪ್ರಗತಿಯ ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೃಷ್ಣಾರೆಡ್ಡಿ, ಮಂಜುನಾಥರೆಡ್ಡಿ, ನರಸಿಂಹಯ್ಯ, ರಾಜಶೇಖರರೆಡ್ಡಿ, ನಾಗವೇಣಿ, ಬಿ.ಇ.ಸುಗುಣ ರಾಮಚಂದ್ರ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮಂಜುಳ ರಾಮಚಂದ್ರಗೌಡ, ಸಹಾಯಕ ನಿರ್ದೇಶಕ ಅಂಬರೀಶ್, ಕಚೇರಿ ವ್ಯವಸ್ಥಾಪಕ ಸುರೇಶ್ ಇದ್ದರು.