ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರದ ತರಕಾರಿ ಮಾರುಕಟ್ಟೆಗೆ ಎಪಿಎಂಸಿ ಅಧ್ಯಕ್ಷ ಎನ್.ರಾಜೇಂದ್ರ ಪ್ರಸಾದ್ ಭೇಟಿ ನೀಡಿ ಮಾರುಕಟ್ಟೆ ಸ್ಥಳಾಂತರ ಕುರಿತು ವರ್ತಕರೊಂದಿಗೆ ಚರ್ಚಿಸಿದರು.
ಶ್ರೀನಿವಾಸಪುರ: ಪಟ್ಟಣದಲ್ಲಿ ತರಕಾರಿ ಸಗಟು ವಹಿವಾಟನ್ನು ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಎನ್.ರಾಜೇಂದ್ರ ಪ್ರಸಾದ್ ಹೇಳಿದರು.
ಪಟ್ಟಣದ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಪರವಾನಗಿ ಪಡೆದ ವರ್ತಕರೊಂದಿಗೆ ಮಾತನಾಡಿ, ಮಾರುಕಟ್ಟೆ ಪ್ರಾಂಗಣದಲ್ಲಿ ರೂ.97 ಲಕ್ಷ ವೆಚ್ಚದಲ್ಲಿ ತರಕಾರಿ ಮಾರುಕಟ್ಟೆಗೆ ಅಗತ್ಯವಾದ ಸೌಲಭ್ಯ ಕಲ್ಪಿಸಲಾಗಿದೆ. ಹಲವು ವರ್ಷಗಳಿಂದ ತರಕಾರಿ ಮಾರುಕಟ್ಟೆ ಸ್ಥಳಾಂತರ ಪ್ರಯತ್ನ ನಡೆದಿದೆಯಾದರೂ, ವರ್ತಕರು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ಈಗ ಕಡ್ಡಾಯವಾಗಿ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಎಪಿಎಂಸಿ ಪ್ರಾಂಗಣದಲ್ಲಿ ನಿರ್ಮಿಸಲಾಗಿರುವ ನೂತನ ತರಕಾರಿ ಮಾರುಕಟ್ಟೆಗೆ ಆದಷ್ಟು ಬೇಗ ತರಕಾರಿ ವಹಿವಾಟು ಸ್ಥಳಾಂತರಗೊಳ್ಳಬೇಕು. ಚಿಲ್ಲರೆ ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ಸಗಟು ಖರೀದಿ ನಡೆಸಿ ಪಟ್ಟಣಕ್ಕೆ ಕೊಂಡೊಯ್ದು ಮಾರಾಟ ಮಾಡಬಹುದಾಗಿದೆ. ಅದರಂತೆ ಇಲ್ಲೂ ಸಹ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.
ಎಪಿಎಂಸಿ ಸಹಾಯಕ ಕಾರ್ಯದರ್ಶಿ ಪಿ.ಎನ್.ಜಗನ್ನಾಥ್ ಮತ್ತು ಸಿಬ್ಬಂದಿ ಇದ್ದರು.