ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಜಲಶಕ್ತಿ ಅಭಿಯಾನ ವತಿಯಿಂದ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಬಹುಮಾನ ವಿತರಿಸಿದರು.
ಶ್ರೀನಿವಾಸಪುರ: ವಿದ್ಯಾರ್ಥಿಗಳು ಮಳೆ ನೀರಿನ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಜಲ ಶಕ್ತಿ ಅಭಿಯಾನ ವತಿಯಿಂದ ಜಲ ಸಂಕ್ಷಣೆ ಕುರಿತು ಏರ್ಪಡಿಸಿದ್ದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಮಳೆ ನೀರು ಕೊಯಿಲು ಇಂದಿನ ಅಗತ್ಯವಾಗಿದೆ. ಮನೆ ಮಾಳಿಗೆ ಮೇಲೆ ಬೀಳುವ ಮಳೆ ನೀರನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಬಳಸಿಕೊಳ್ಳಬಹುದು. ಆಳವಾದ ಕೊಳವೆ ಬಾವಿಗಳಿಂದ ಬರುವ ವಿಷಯುಕ್ತ ನೀರು ಜನ ಹಾಗೂ ಜಾನುವಾರು ಆರೋಗ್ಯಕ್ಕೆ ಕಂಟಕವಾಗಿದೆ. ಆದರೆ ಮಳೆ ನೀರು ಆರೋಗ್ಯ ವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದರು.
ಸ್ಪರ್ಧೆಯಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪ್ರಥಮ, ರಂಗಾರಸ್ತೆ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ದ್ವಿತೀಯ ಹಾಗೂ ಪ್ರಗತಿ ಸಂಯುಕ್ತ ಅನುದಾನಿತ ಪ್ರೌಢ ಶಾಲಾ ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದುಕೊಂಡರು.
ಪುರಸಭೆ ಪರಿಸರ ಅಭಿಯಂತರ ಶೇಖರ್ ರೆಡ್ಡಿ, ಆರೋಗ್ಯ ನಿರೀಕ್ಷಕರಾದ ಕೆ.ಜಿ.ರಮೇಶ್, ಎಂ.ಪೃಥ್ವಿರಾಜ್, ಸಿಎಒ ರಾಜೇಶ್ವರಿ, ವನಜಾಕ್ಷಿ ಇದ್ದರು.