ಶ್ರೀನಿವಾಸಪುರದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕ ಕುಂದು ಕೊರತೆ ಹಾಗೂ ಜಾಗೃತಿ ಸಭೆಯಲ್ಲಿ ಜಿಲ್ಲಾ ಎಸಿಬಿ ಡಿವೈಎಸ್‌ಪಿ ಎಂ.ಎಲ್‌.ಪುರುಷೋತ್ತಂ ಮಾತನಾಡಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕ ಕುಂದು ಕೊರತೆ ಹಾಗೂ ಜಾಗೃತಿ ಸಭೆಯಲ್ಲಿ ಜಿಲ್ಲಾ ಎಸಿಬಿ ಡಿವೈಎಸ್‌ಪಿ ಎಂ.ಎಲ್‌.ಪುರುಷೋತ್ತಂ ಮಾತನಾಡಿದರು.
ಶ್ರೀನಿವಾಸಪುರ: ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಎಸಿಬಿ ಡಿವೈಎಸ್‌ಪಿ ಎಂ.ಎಲ್‌.ಪುರುಷೋತ್ತಂ ಹೇಳಿದರು.
  ಪಟ್ಟಣದ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಾರ್ವಜನಿ ಕುಂದು ಕೊರತೆ ವಿಚಾರಣೆ ಹಾಗೂ ಜಾಗೃತಿ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಲಂಚಕ್ಕೆ ಕೈಯೊಡ್ಡದೆ, ನಿಗದಿತ ಸಮಯದೊಳಗೆ ಅವರ ಕೆಲಸ ಮಾಡಿಕೊಡಬೇಕು. ಅವರನ್ನು ಅನಗತ್ಯವಾಗಿ ಕಚೇರಿಗೆ ಸತ್ತಾಡಿಸಬಾರದು ಎಂದು ಹೇಳಿದರು.
  ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಸಿಬಿ ವತಿಯಿಂದ ಒಂದು ಪುಸ್ತಕ ನೀಡಲಾಗುವುದು. ಆ ಪುಸ್ತಕದಲ್ಲಿ ಪ್ರತಿ ಸರ್ಕಾರಿ ನೌಕರ ಕಚೇರಿ ಪ್ರವೇಶಿಸಿದಾಗ ತನ್ನ ಜೇಬಿನಲ್ಲಿ ಇರುವ ಹಣದ ಲೆಕ್ಕ ಬರೆಯಬೇಕು. ಹಾಗೆಯೇ ಕೆಲಸ ಮುಗಿಸಿ ಮನೆಗೆ ಹೋಗುವಾಗಲೂ ತನ್ನಲ್ಲಿನ ಹಣದ ಲೆಕ್ಕ ನಮೂದಿಸಬೇಕು. ಇದು ಕಡ್ಡಾಯವಾಗಿರುತ್ತದೆ ಎಂದು ಹೇಳಿದರು.
  ಸಾರ್ವಜನಿಕರಿಗೆ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪರಿಚಯ ಇರಬೇಕಾಗುತ್ತದೆ. ಆದ್ದರಿಂದ ಪ್ರತಿ ನೌಕರರ ಹೆಸರು, ಪದನಾಮ ಹಾಗೂ ದೂರವಾಣಿ ಸಂಖ್ಯೆಯನ್ನು ಕಚೇರಿಯಲ್ಲಿ ಕಾಣುವಂತೆ ನಮೂದಿಸಬೇಕು. ಹಾಗೆ ಮಾಡುವುದರಿಂದ ಸಾರ್ವಜನಿಕರು ಬೇರೆಯವರ ನೆರವಿಲ್ಲದೆ ತಮಗೆ ಅಗತ್ಯವಾದ ಅಧಿಕಾರಿ ಅಥವಾ ನೌಕರರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
  ಯಾವುದೇ ಸರ್ಕಾರಿ ನೌಕರ ಲಂಚಕ್ಕಾಗಿ ಪೀಡಿಸಿದಲ್ಲಿ, ಎಸಿಬಿಗೆ ದೂರು ನೀಡಬೇಕು. ಆರೋಪ ಸಾಬೀತಾದರೆ ಅಂಥ ನೌಕರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
  ಪೊಲೀಸ್‌ ಇನ್ಸ್‌ಪೆಕ್ಟರ್‌ ಜಿ.ಎನ್‌.ವೆಂಕಟಾಚಲಪತಿ, ಸಿಬ್ಬಂದಿ ಕೃಷ್ಣೇಗೌಡ, ಮಮತ, ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌, ವಲಯ ಅರಣ್ಯಾಧಿಕಾರಿ ರಾಮಕೃಷ್ಣ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎ.ಬೈರಾರೆಡ್ಡಿ, ತಾಲ್ಲೂಕು ಪಂಚಾಯಿತಿ ಕಚೇರಿ ವ್ಯವಸ್ಥಾಪಕ ಸುರೇಶ್‌ ಇದ್ದರು.