ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ವಿವಿಧ ಇಲಾಖೆಯಗಳ ಕಚೇರಿಗಳ ನೂತನ ಕಟ್ಟಡ ಹಾಗೂ ಭವನಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಮತ್ತು ಕೃಷಿ ರಥಕ್ಕೆ ಚಾಲನೆ ನೀಡಿದರು.
ಶ್ರೀನಿವಾಸಪುರ: ಜನರ ಅನುಕೂಲದ ದೃಷ್ಟಿಯಿಂದ ಎಲ್ಲ ಸರ್ಕಾರಿ ಕಚೇರಿಗಳನ್ನೂ ಒಂದೇ ಕಡೆ ನಿರ್ಮಿಸಲಾಗುತ್ತಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಹೊರ ವಲಯದ ಅಮಾನಿ ಕೆರೆ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿವಿಧ ಇಲಾಖೆಯಗಳ ಕಚೇರಿಗಳ ನೂತನ ಕಟ್ಟಡ ಹಾಗೂ ವಿವಿಧ ಭವನಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಬೇರೆ ಬೇರೆ ಇಲಾಖೆಗಳಿಗೆ ಅಗತ್ಯವಾದ ಸರ್ಕಾರಿ ಕಚೇರಿ ಕಟ್ಟಡಗಳು ಹಾಗೂ ವಿವಿಧ ಸಮುದಾಯಗಳಿಗೆ ಸಮುದಾಯ ಭವನ ನಿರ್ಮಿಸಿಕೊಳ್ಳಲು ನೀಡಲಾಗಿರುವ ನಿವೇಶನಗಳ ಒತ್ತುವರಿ ತೆರವುಗೊಳಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಒಂದು ಮುಖ್ಯ ಇಲಾಖೆಗೆ ಸಂಬಂಧಿಸಿದ ಎಲ್ಲ ಇಲಾಖೆಗಳೂ ಒಂದೇ ಸಂಕೀರ್ಣದಲ್ಲಿ ಇರುವಂತೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಕಚೇರಿ ಕಟ್ಟಡಗಳ ನಿರ್ಮಾಣದ ಜೊತೆಗೆ, ಪಟ್ಟಣದಿಂದ ಜನರು ಕಚೇರಿಗಳಿಗೆ ಬಂದು ಹೋಗಲು ಅನುಕೂಲವಾಗುವಂತೆ ರಸ್ತೆಗಳನ್ನು ನಿರ್ಮಿಸಲಾಗುವುದು. ಎಲ್ಲ ಕಚೇರಿಗಳ ಕಟ್ಟಡಗಳ ನಿರ್ಮಾಣ ಪೂರ್ಣಗೊಂಡ ಮೇಲೆ, ಇದೊಂದು ಮಾದರಿ ಕಚೇರಿಗಳ ಸಂಕೀರ್ಣವಾಗಿ ರೂಪಗೊಳ್ಳಲಿದೆ ಎಂದು ಹೇಳಿದರು.
ಈಗಾಗಲೆ ಕೆಲವು ಇಲಾಖೆಗಳ ಕಚೇರಿ ಕಟ್ಟಡ ನಿರ್ಮಿಸಲು ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಉಳಿದ ಕಚೇರಿ ಕಟ್ಟಡಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಸಲಾಗುದು. ಕಚೇರಿಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಮೇಲೆ, ಪ್ರತ್ಯೇಕ ಸ್ಥಳದಲ್ಲಿ ಮನೆ ನಿವೇಶನಗಳನ್ನು ನಿರ್ಮಿಸಿ, ಅರ್ಹ ನಿವೇಶನ ರಹಿತರಿಗೆ ಪಕ್ಷಾತೀತವಾಗಿ ವಿತರಿಸಲಾಗುವುದು ಎಂದು ಹೇಳಿದರು.
ಕಂದಾಯ ಇಲಾಖೆಗೆ ಸೇರಿದ ಮಿನಿ ವಿಧಾನ ಸೌಧ, ತಾಲ್ಲೂಕು ಕಚೇರಿಗಳ ಸಂಕೀರ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾ ಭವನ, ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಬಾಲಕಿಯರ ವಸತಿ ಗೃಹ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಕೀರ್ಣ, ಹಾಲು ಉತ್ಪಾದಕರ ಕಚೇರಿ ಸಂಕೀರ್ಣ ಸೇರಿದಂತೆ 31 ಇಲಾಖೆಗಳ ಕಚೇರಿ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಕೃಷಿ ಹಾಗೂ ಇತರ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಕೃಷಿ ಅಭಿಯಾನ ಯೋಜನೆ ಅಂಗವಾಗಿ ಏರ್ಪಡಿಸಲಾಗಿದ್ದ ಕೃಷಿ ರಥಕ್ಕೆ ಅವರು ಚಾಲನೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ತೂಪಲ್ಲಿ ಆರ್.ಚೌಡರೆಡ್ಡಿ, ತಹಶೀಲ್ದಾರ್ ಬಿ.ಎಸ್ ರಾಜೀವ್, ರಾಜಸ್ವ ನಿರೀಕ್ಷಕರಾದ ಬಿ.ವಿ.ಮುನಿರೆಡ್ಡಿ, ಗುರುಪ್ರಸಾದ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಎಪಿಎಂಸಿ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಕೋಚಿಮುಲ್ ನಿರ್ದೇಶಕ ಹನುಮೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಇದ್ದರು.