ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ ಏರ್ಪಡಿಸಿದ್ದ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಾರಂಭವನ್ನು ತಹಶೀಲ್ದಾರ್ ಕೆ.ಎನ್.ಸುಜಾತ ಉದ್ಘಾಟಿಸಿದರು.
ಶ್ರೀನಿವಾಸಪುರ: ಅಂಬಿಗರ ಚೌಡಯ್ಯ ಅವರ ವಚನಗಳು ಮನುಕುಲಕ್ಕೆ ದಾರಿ ದೀಪವಾಗಿವೆ ಎಂದು ತಹಶೀಲ್ದಾರ್ ಕೆ.ಎನ್.ಸುಜಾತ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಜಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಒಬ್ಬ ವ್ಯಕ್ತಿ ಜಾತಿಯಿಂದ ಉತ್ತಮನಾಗಲು ಸಾಧ್ಯವಿಲ್ಲ. ಕರ್ತವ್ಯ ನಿಷ್ಠೆಯಿಂದ ಸಮಾಜದ ಮನ್ನಣೆ ಪಡೆಯಬಹುದು ಎಂಬುದು ಅಂಬಿಗರ ಚೌಡಯ್ಯ ಅವರ ಜೀವನ ಸಂದೇಶವಾಗಿದೆ ಎಂದು ಹೇಳಿದರು.
ತಾಲ್ಲೂಕು ಬೆಸ್ತರ ಸಂಘದ ಅಧ್ಯಕ್ಷ ಕೋಟೇಶ್ ಮಾತನಾಡಿ, ಅಂಬಿಗರು ಸರಳ ಜೀವನ ನಡೆಸುತ್ತಾ, ಸಮಾಜದ ಒಳಿತಿಗೆ ಶ್ರಮಿಸುತ್ತಿದ್ದಾರೆ. ಅವರ ಬದುಕು ಕಷ್ಟದಿಂದ ಕೂಡಿದೆ. ಆದ್ದರಿಂದ ಸಮುದಾಯ ಸಂಘಟಿತವಾಗಬೇಕು. ಗೌರವಯುತ ಜೀವನ ನಡೆಸಲು ಅಗತ್ಯವಾದ ಸೌಲಭ್ಯ ಪಡೆಯಲು ಹೋರಾಟ ಮಾಡಬೇಕು ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಟಿ.ವೆಂಕಟೇಶ್ ಮಾತನಾಡಿ, ಅಂಬಿಗ ಸಮುದಾಯ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಸರ್ಕಾರ ನೀಡುವ ಸೌಲಭ್ಯ ಪಡೆದು ಆರ್ಥಿಕವಾಗಿ ಮುಂದೆ ಬರಲು ಪ್ರಯತ್ನಿಸಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮರೆಯಬಾರದು. ಸಾಂಘಿಕ ಪ್ರಯತ್ನದ ಮೂಲಕ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದಿದ್ದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್, ಬಿಇಒ ಉಮಾದೇವಿ, ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವೀಂದ್ರಗೌಡ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜಣ್ಣ, ಮುಖಂಡರಾದ ಶಂಕರಪ್ಪ, ಸತ್ಯನಾರಾಯಣ, ಆಂಜಪ್ಪ, ಸತ್ಯನಾರಾಯನ, ಸತೀಶ್ ಕುಮಾರ್, ಆನಂದ್, ನಾರಾಯಣಸ್ವಾಮಿ, ವಿಜಯಲಕ್ಷ್ಮಿ ಸತ್ಯನಾರಾಯಣ ಇದ್ದರು.