ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶಿಕ್ಷಣವೇ ಶಕ್ತಿ, ಯುಕ್ತಿ ಹಾಗೂ ಸರ್ವತೋಮುಖ ಅಭಿವೃದ್ಧಿ ಹೊಂದಲು ಬೇಕಾದ ಆಯುಧ: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರತ್ನಯ್ಯ
ಶ್ರೀನಿವಾಸಪುರ: ಶಿಕ್ಷಣವೇ ಶಕ್ತಿ, ಯುಕ್ತಿ ಹಾಗೂ ಸರ್ವತೋಮುಖ ಅಭಿವೃದ್ಧಿ ಹೊಂದಲು ಬೇಕಾದ ಆಯುಧ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರತ್ನಯ್ಯ ಹೇಳಿದರು.
ಪಟ್ಟಣದ ಜಿಜಿ ವೇಣು ಸೆಂಟ್ರಲ್ ಶಾಲೆಯ ಮೈದಾನದಲ್ಲಿ ಏರ್ಪಡಿಸಿದ್ದ ಜಿಜಿ ವೇಣು ಸಮೂಹ ಶಿಕ್ಷಣ ಸಂಸ್ಥೆಗಳ 30ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಲಿಕೆ ಗರ್ಭಾವಸ್ಥೆಯಿಂದಲೇ ಪ್ರಾರಂಭವಾಗುತ್ತದೆ. ಮಗುವಿನ ಮೊದಲ ಪಾಠ ಶಾಲೆ ಮನೆಯೇ ಆಗಿರುತ್ತದೆ. ತಾಯಿಯೇ ಮೊದಲ ಗುರು. ಮಕ್ಕಳನ್ನು ನೈತಿಕವಾಗಿ ಬೆಳೆಸಿದಲ್ಲಿ, ಅವರ ನಡೆ, ನುಡಿ ಸಮಾಜ ಮುಖಿಯಾಗಿರುತ್ತದೆ. ಆದ್ದರಿಂದ ಪೋಷಕರು ಮಕ್ಕಳಿಕಗೆ ಆಸ್ತಿ ಮಾಡುವ ಬದಲು, ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು ಎಂದು ಹೇಳಿದರು.
ಸಾಹಿತಿ ಆರ್.ಚೌಡರೆಡ್ಡಿ ಮಾತನಾಡಿ, ಕೋಲಾರ ಜಿಲ್ಲೆ ಮಳೆ ಹಾಗೂ ಅಂತರ್ಜಲ ಕೊರತೆ ಪರಿಣಾಮವಾಗಿ ಬರಪೀಡಿತವಾಗಿದೆ. ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಎಲ್ಲ ಕಸುಬುಗಳೂ ನಿಂತುಹೋಗುವ ಹಂತ ತಲುಪಿವೆ. ಆದ್ದರಿಂದ ಇಲ್ಲಿನ ಮಕ್ಕಳು ಶಿಕ್ಷಣದ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಮೊಬೈಲ್ ಬಿಟ್ಟು ಪುಸ್ತಕ ಹಿಡಿಯಬೇಕು ಎಂದು ಹೇಳಿದರು.
ವಕೀಲ ಲೋಕೇಶ್ ಮೂರ್ತಿ ಮಾತನಾಡಿ, ಜಿಜಿ ವೇಣು ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿವೆ. ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ಶಿಸ್ತು ಹಾಗೂ ಸಂಯಮದಿಂದ ಕಲಿಯಬೇಕು. ಅಂಕ ಗಳಿಕೆಗೆ ಸೀಮಿತವಾಗದೆ ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.
ಜಿಜಿ ವೇಣು ವಿದ್ಯಾ ಪೀಠ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಜಿ.ಗೋವಿಂದಗೌಡ ಮಾತನಾಡಿ, ಜಿಜಿ ವೇಣು ಸಮೂಹ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಶಿಕ್ಷಕರ ಶ್ರಮ ಹಾಗೂ ಪೋಷಕರ ಪ್ರೋತ್ಸಾಹ ಅಡಗಿದೆ. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಶಾಲಾ ಕಾಲೇಜು ಪ್ರಾರಂಭಿಸಲಾಗುವುದು. ಇದನ್ನು ದೇಶ ಕಟ್ಟುವ ಕೆಲಸ ಎಂದು ಭಾವಿಸಲಾಗಿದೆ ಎಂದು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಅಬೂಬಕರ್, ಕಾರ್ಯದರ್ಶಿ ಎನ್.ಜಿ.ರಾಜಾ ಮಣಿಕಂಠ, ಜಂಟಿ ಕಾರ್ಯದರ್ಶಿ ಮುನಿವೆಂಕಟಸ್ವಾಮಿ, ಪ್ರಾಂಶುಪಾಲ ಲಾಲ್ ದೀಪ್, ವಕೀಲ ಸುವರ್ಣ ಇದ್ದರು.