ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದ ವಾಸವಿ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಮುಖಂಡರು ವೆಂಕಟೇಶ್ವರಸ್ವಾಮಿ ಕಲ್ಯಾಣೋತ್ಸವ ಹಾಗೂ ಪ್ರತಿಭೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ

ಶ್ರೀನಿವಾಸಪುರ: ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸೆ.21 ರಂದು ಸಂಜೆ 5 ಗಂಟೆಗೆ ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಲೋಕ ಕಲ್ಯಾಣಾರ್ಥ ವೆಂಕಟೇಶ್ವರಸ್ವಾಮಿ ಕಲ್ಯಾಣೋತ್ಸವ ಹಾಗೂ ಪ್ರತಿಭೋತ್ಸವ ಏರ್ಪಡಿಸಲಾಗಿದೆ ಎಂದು ಸಭಾದ ರಾಜ್ಯ ಘಟಕದ ಸದಸ್ಯ ಕೆ.ವಿ.ರಾಮ್ ಪ್ರಸಾದ್ ಹೇಳಿದರು.
ಪಟ್ಟಣದ ವಾಸವಿ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವೆಂಕಟೇಶ್ವರಸ್ವಾಮಿ ಕಲ್ಯಾಣೋತ್ಸವ ಹಾಗೂ ಪ್ರತಿಭೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಒಟ್ಟಾರೆ ಸಮಾಜದ ಒಳಿತಿಗಾಗಿ ಪ್ರಾರ್ಥಿಸುವುದು ಹಾಗೂ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಯ್ಕೆಮಾಡಲಾದ ಒಂದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಪುರಸ್ಕರಿಸಲಾಗುವುದು. ತಿರುಮಲ ತಿರುಪತಿ ದೇವಾಲಯದ ವತಿಯಿಂದ ವೆಂಕಟೇಶ್ವರಸ್ವಾಮಿ ಕಲ್ಯಾಣೋತ್ಸವ ಹಾಗೂ ಅನ್ನಮಯ್ಯ ವೃಂದದವರಿಂದ ಅನ್ನಮಯ್ಯ ಸಂಕೀರ್ತನೆ ಏರ್ಪಡಿಸಲಾಗಿದೆ. ಜಿಲ್ಲಾ ಸಮಿತಿಯಿಂದ ಪ್ರಸಾದ ವಿನಿಯೋಗ ಮಾಡಲಾಗುವುದು. ಜಿಲ್ಲೆಯ ತಾಲ್ಲೂಕು ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶದಿಂದ ಕಾರ್ಯಕ್ರಮಕ್ಕೆ ಹೋಗಲು ವಾನಹ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಮುಖಂಡರಾದ ವೈ.ಆರ್.ಶಿವಪ್ರಕಾಶ್, ಎಂ.ಕೆ.ಸತೀಶ್, ಎಂ.ಆರ್.ಆನಂದ್, ಕೆ.ವಿ.ಸೂರ್ಯನಾರಾಯಣಶೆಟ್ಟಿ, ಆರ್.ಬಿ.ನಾಗೇಂದ್ರಬಾಬು ಕೇದಾರನಾಥ್, ವೈ.ಆರ್.ನಾಗೇಂದ್ರಬಾಬು, ಪ್ರಾಣೇಶ್ ಇದ್ದರು.