ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಸೇವೆಯನ್ನು ಸಲ್ಲಿಸುವುದರ ಜೊತೆಗೆ ನೊಂದ ವ್ಯಕ್ತಿಗಳಿಗೆ ಸ್ಪಂಧಿಸುವುದು ಅಗತ್ಯವಾಗಿದೆ : ಜಿಲ್ಲಾಧಿಕಾರಿ ಜೆ.ಮಂಜುನಾಥ್

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಸೇವೆಯನ್ನು ಸಲ್ಲಿಸುವುದರ ಜೊತೆಗೆ ನೊಂದ ವ್ಯಕ್ತಿಗಳಿಗೆ ಸ್ಪಂಧಿಸುವುದು ಅಗತ್ಯವಾಗಿದೆ : ಜಿಲ್ಲಾಧಿಕಾರಿ ಜೆ.ಮಂಜುನಾಥ್

ಕೋಲಾರ, ಜೂನ್ 25 ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಸೇವೆಯನ್ನು ಸಲ್ಲಿಸುವುದರ ಜೊತೆಗೆ ನೊಂದ ವ್ಯಕ್ತಿಗಳಿಗೆ ಸ್ಪಂಧಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಯಾದ ಜೆ.ಮಂಜುನಾಥ್ ಅವರು ತಿಳಿಸಿದರು. 

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಎಸ್.ಎನ್.ಆರ್.ಇನ್ಸಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಅವರು ಆಯೋಜಿಸಿದ್ದ ರಕ್ತದಾನ ಮಹತ್ವದ ಬಗ್ಗೆ ಕಾರ್ಯಾಗಾರ, ಕಿರಿಯ ಮಹಿಳಾ ಆರೋಗ್ಯ ಸಹಾಯಕ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾ ಸ್ವೀಕಾರ ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ನೊಂದ ಜೀವಕ್ಕೆ ವೈದ್ಯಕೀಯ ಚಿಕಿತ್ಸೆ ಕೊಡುವುದು ಒಂದು ಭಾಗವಾದರೆ, ಕೌನ್ಸಲಿಂಗ್ ಮಾಡಿ ಅವರ ನೋವಿಗೆ ಸ್ಪಂಧಿಸುವುದು ಮತ್ತೊಂದು ಭಾಗ. ಈ ರೀತಿಯಾಗಿ ಸ್ಪಂಧಿಸುವುದರಿಂದ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಅವರಲ್ಲಿ ಮೂಡುತ್ತದೆ ಎಂದರು. 

ಮದರ್  ತೆರೆಸಾ ಅವರು ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ ವಿಶ್ವಮಟ್ಟದಲ್ಲಿ ಉತ್ತಮ ಹೆಸರು ಪಡೆದರು. ಅವರಂತೆಯೇ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುವ ಮೂಲಕ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆಯಿರಿ ಎಂದು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ವೈದ್ಯ ಮತ್ತು ತಜ್ಞರ ಕೆಲಸವು ವೈದ್ಯಕೀಯ ಕ್ಷೇತ್ರದಲ್ಲಿ ಅತಿ ಮುಖ್ಯವಾದುದು. ಇವರ ಕೊರತೆಯ ನಡುವೆ ವೈದ್ಯಕೀಯ ಕ್ಷೇತ್ರದಲ್ಲಿ ಒಂದಷ್ಟು ಉತ್ತಮ ಸೇವೆ ದೊರೆಯುತ್ತಿದೆ. ಇದರಲ್ಲಿ ಪ್ಯಾರಾಮೆಡಿಕಲ್‍ರವರ ಪಾತ್ರವು ಅತ್ಯಮೂಲ್ಯವಾದುದು ಹಾಗಾಗಿ ವಿದ್ಯಾರ್ಥಿಗಳು ಪ್ಯಾರಾಮೆಡಿಕಲ್ ತರಬೇತಿಯನ್ನು ಪಡೆದುಕೊಳ್ಳಬೇಕು. ಇದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯ ಎಂದು ತಿಳಿಸಿದರು. 

ವೈದ್ಯಕೀಯ ಕ್ಷೇತ್ರದಲ್ಲಿ ರಕ್ತದ ಮಹತ್ವ ಹೆಚ್ಚಾಗಿದೆ. ರಕ್ತದಾನದಿಂದ ಒಂದು ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ. ರಕ್ತವನ್ನು ದಾನ ಮಾಡುವುದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ರಕ್ತದಾನವನ್ನು ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಉತ್ತಮ ವೈದ್ಯಕೀಯ ಸೇವೆ ದೊರೆಯಲು ಅನುಕೂಲವಾಗುತ್ತದೆ ಎಂದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ.ವಿಜಯಕುಮಾರ್ ಮಾತನಾಡಿ, ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲಾಗಿದ್ದು ಇಂತಹವರು ಕಂಡು ಬಂದಲ್ಲಿ ಕೂಡಲೇ ಮಾಹಿತಿಯನ್ನು ನೀಡಿ. ಅದರ ಜೊತೆಗೆ ನಿಮ್ಮ ಗ್ರಾಮದ ಜನತೆಗೆ ಹಾಗೂ ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವ ಸೌಲಭ್ಯಗಳು ಹಾಗೂ ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಿ ಎಂದು ಎಂದು ಹೇಳಿದರು. 

ಪ್ಯಾರಾಮೆಡಿಕಲ್ ತರಬೇತಿಯನ್ನು ಪಡೆದಿರುವ ನಿಮ್ಮನ್ನು ಸಾಕಷ್ಟು ಮಂದಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕುರಿತು ಮಾಹಿತಿಯನ್ನು ಕೇಳಿದಾಗ ಅವರಿಗೆ ಸೂಕ್ತ ಸಲಹೆಗಳನ್ನು ನೀಡುವ ಕೆಲಸವನ್ನು ಮಾಡಬೇಕು. ಜೊತೆಗೆ ಅವರೊಂದಿಗೆ ಸಹನೆಯಿಂದ ವರ್ತಿಸಬೇಕು. ಇದರಿಂದ ಆರೋಗ್ಯಯುತ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು. 

ರಕ್ತದಾನ ಮಾಡುವುದರಿಂದ ರಕ್ತದಾನಿಯ ಆರೋಗ್ಯವು ಉತ್ತಮವಾಗಿರುತ್ತದೆಯಲ್ಲದೆ ಇನ್ನೊಂದು ಜೀವದ ಉಳಿವಿಗೆ ಅನುಕೂಲವಾಗುತ್ತದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಸಹ ರಕ್ತದಾನವನ್ನು ಮಾಡಬಹುದು. ಹಾಗಾಗಿ ಯುವಕರು ತಪ್ಪದೆ ರಕ್ತದಾನವನ್ನು ಮಾಡುವದರ ಜೊತೆಗೆ ಇತರರಿಗೆ ರಕ್ತದಾನದ ಮಹತ್ವ ತಿಳಿಸಿ ಅವರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದರು. 

ಎಸ್.ಎನ್.ಆರ್.ಜಿಲ್ಲಾಸ್ಪತ್ರೆಯ ರಕ್ತನಿಧಿ ಅಧಿಕಾರಿಯಾದ ಡಾ.ರೇವತಿ ಅವರು ರಕ್ತದಾನ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ಪ್ರಮಾಣವಚನವನ್ನು ಭೋದಿಸಲಾಯಿತು. 

ಕಾರ್ಯಕ್ರಮದಲ್ಲಿ ಎಸ್.ಎನ್.ಆರ್. ಇನ್ಸಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್‍ಸ್‍ನ ಪ್ರಾಂಶುಪಾಲರಾದ ಡಾ.ಎಸ್.ಜಿ.ನಾರಾಯಣಸ್ವಾಮಿ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ವಿ.ಸುಧಾಮಣಿ, ನರ್ಸಿಂಗ್ ಶಿಕ್ಷಣ ಮತ್ತು ತರಬೇತಿಯ ಪ್ರಾಂಶುಪಾಲರಾದ ಎಸ್.ವಿಜಯಮ್ಮ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಎ.ಎನ್.ಎಂ.ಟಿ.ಸಿಯ ಉಪನಿರ್ದೇಶಕರಾದ ಡಾ.ಗೀತಾಬಾಲಿ, ಜಿಲ್ಲಾ ಶುಶ್ರೂಷಣಾಧಿಕಾರಿಯಾದ ರೂಭಿ ಮನೋಹರಬಾಯಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶಾಹಿನ್‍ತಾಜ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.