ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : ವೇಮಗಲ್ನ “ ಸೀತಿ ಬೆಟ್ಟಕ್ಕೆ ಹಸಿರು ಹೊದಿಕೆ ” ಎಂಬ ಕಾರ್ಯಕ್ರಮಕ್ಕೆ ಗಿಡಗಳನ್ನು ಹಸ್ತಾಂತರಿಸಿ ಹಾಗೂ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಕೋಲಾರ ಜಿಲ್ಲಾಧಿಕಾರಿಗಳಾದ ಸಿ ಸತ್ಯಭಾಮ ಅವರು ಚಾಲನೆ ನೀಡಿದರು . ನಿವೃತ್ತ IAS ಅಧಿಕಾರಿಗಳಾದ ಅಮರನಾರಾಯಣ ರವರು ತಮ್ಮ ” ಬೋಳು ಬೆಟ್ಟಕ್ಕೆ ಬನದ ಮೆರಗು ” ಎಂಬ ಪರಿಕಲ್ಪನೆಯಲ್ಲಿ ಸೀತಿ ಬೆಟ್ಟದಲ್ಲಿ ವಿವಿಧ ಜಾತಿಯ ಸುಮಾರು ಒಂದು ಸಾವಿರ ಗಿಡಗಳನ್ನು ನೆಡವ ಕಾರ್ಯವನ್ನು ನೆರವೇರಿಸಿ ಮಾತನಾಡಿ ಮಳೆ ಬೆಳೆ ಉತ್ತಮವಾಗಿ ಆಗಬೇಕಾದರೆ ಹಸಿರು ಮುಖ್ಯ . ಹಾಗಾಗಿ ಜಿಲ್ಲೆಯಲ್ಲಿ ಬೋಳು ಬೆಟ್ಟಗಳನ್ನು ಆಯ್ಕೆ ಮಾಡಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ . ಅಷ್ಟೇ ಅಲ್ಲದೆ ಇದರಿಂದ ಕಾಡು ಪ್ರಾಣಿಗಳಿಗೆ ಆಹಾರದ ಜೊತೆಗೆ ವಾತಾವರಣ ತಂಪಾಗಿರಲು ಪ್ರಕೃತಿಗೆ ನಮ್ಮ ಕಿರು ಕಾಣಿಕೆಯಾಗುವ ಭರವಸೆ ಇದೆ ಎಂದರು . ಸದ್ಯ ಪ್ರಾಯೋಗಿಕವಾಗಿ ಪ್ರೀತಿ ಬೆಟ್ಟವನ್ನು ಆಯ್ಕೆ ಮಾಡಿಕೊಂಡಿದ್ದೇವೆ . ಬೆಟ್ಟದಲ್ಲಿ ಆಲ , ಬೇವು , ಕಿರುನೆಲ್ಲಿ , ಹೊಂಗೆ ಪನ್ನೇರಳೆ ಮತ್ತು ಹೊಂಗೆಯ ಗಿಡಗಳನ್ನು ನೆಡಲಾಗುತ್ತಿದೆ . ಮುಂದಿನ ಒಂದು ತಿಂಗಳಲ್ಲಿ ಪಕ್ಕದ ಭಸ್ಮಾಸುರ ಬೆಟ್ಟದಲ್ಲಿ ಗಿಡ ನೆಡುವ ಗುರಿಯ ಸಹಿತ ಜಿಲ್ಲೆಯಾದ್ಯಂತ ಬೋಳು ಬೆಟ್ಟಗಳನ್ನು ಗುರುತಿಸುವ ಕೆಲಸ ಮಾಡಲಿದ್ದೇವೆ . ಇನ್ನೂ ಬೆಟ್ಟದ ತಪ್ಪಲಿನಿಂದ ಬೆಟ್ಟದ ತುದಿಗೆ ಗಿಡ ಸಾಗಿಸಲು , ಕೋಲಾರ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ , PDO ಗಳ ಸಹಿತ ಎರಡು ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ಹಲವು ಸ್ವಯಂ ಸೇವಕರು ಕೈ ಜೋಡಿಸಿದರು ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಂಜೀವಪ್ಪ , ಜಿಲ್ಲಾ ಪಂಚಾಯತ್ ನ ಸಹಾಯಕ ಯೋಜನಾ ಅಧಿಕಾರಿಗಳಾದ ವಸಂತ್ ಕುಮಾರ್ ಗೋವಿಂದಗೌಡ , ದೇವರಾಜ್ , ಹಾಗೂ ಮುರಳಿ , ಕೋಲಾರ ತಾಲ್ಲೂಕು ಪಂಚಾಯತಿ ನಿರ್ವಹಣಾಧಿಕಾರಿ ಎನ್.ವಿ ಬಾಬು , ಸೀತಿ ಭೈರವೇಶ್ವರ ಟ್ರಸ್ಟ್ ನ ಅದ್ಯಕ್ಷರಾದ ತಮ್ಮಯ್ಯ , ಸಿಂಡಿಕೇಟ್ ಸದಸ್ಯರಾದ ಎಮ್ . ಎ ರಂಗಪ್ಪ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.