ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಭಾರತ-ಎ.ವಿ. ಶ್ರೀನಿವಾಸ್
ಕೋಲಾರ: ಭಾರತದಲ್ಲಿ 2 ಸಾವಿರಕ್ಕೂ ಹೆಚ್ಚು ಜಾತಿಗಳಿದ್ದು, ದೇಶದಲ್ಲಿ ವಿವಿಧತೆ ಇದ್ದರೂ ಏಕತೆಯನ್ನು ಹೊಂದಿರುವ ದೇಶ ಭಾರತವಾಗಿದೆ ಎಂದು ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಎ.ವಿ ಶ್ರೀನಿವಾಸ್ ಅವರು ತಿಳಿಸಿದರು. ಇಂದು ಮುಳಬಾಗಿಲು ತಾಲ್ಲೂಕಿನ ಆವನಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಮೈಸೂರು, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿ, ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಆವನಿ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಸಂಸ್ಕøತಿ ವಿಶೇಷವಾದುದು. ಪಾಶ್ಚಿಮಾತ್ಯರು ಭಾರತೀಯ ಸಂಸ್ಕøತಿಗೆ ಮೆಚ್ಚುಗೆ ಸೂಚಿಸಿ ಅಳವಡಿಸಿಕೊಳ್ಳುತ್ತಿದ್ದಾರೆ. ಭಾರತವು ಪ್ರತಿಭಾವಂತರನ್ನು ಬೆಳೆಸಿ ವಿದೇಶಗಳಿಗೆ ಮಾನವ ಸಂಪನ್ಮೂಲ ಸೇವೆಯನ್ನು ನೀಡುತ್ತಿದೆ. ಪ್ರಪಂಚದ ಪ್ರಖ್ಯಾತ ವೈದ್ಯರುಗಳಲ್ಲಿ ಭಾರತೀಯರ ಸ್ಥಾನ ಅಗ್ರಗಣ್ಯ ಎಂದು ತಿಳಿಸಿದರು. ಸ್ವಚ್ಛತೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು. ಸ್ವಚ್ಛತೆ ಕಾಪಾಡದಿದ್ದರೆ ಸಾಂಕ್ರಾಮಿಕ ರೋಗಗಳು ಉಂಟಾಗುವ ಭೀತಿಯಿದೆ. ಸರ್ಕಾರವು ಪ್ಲಾಸ್ಟಿಕ್ ನಿಷೇಧ ಮಾಡಿದ್ದು, ನಗರ ಹಾಗೂ ಹಳ್ಳಿ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಅನ್ನು ಸ್ವಯಂ ಪ್ರೇರಿತರಾಗಿ ತ್ಯಜಿಸಬೇಕು ಎಂದು ಕಿವಿಮಾತು ಹೇಳಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಆರ್. ಕೃಷ್ಣಪ್ಪ ಅವರು ಮಾತನಾಡಿ, ಐಕ್ಯತೆ ಎಂಬ ಪದಕ್ಕೆ ವಿಶಾಲವಾದ ಅರ್ಥವಿದೆ. ಭಾರತೀಯರಾದ ನಾವು ಕಲೆ, ಸಂಸ್ಕøತಿಯಲ್ಲಿ ಅಗ್ರಸ್ಥಾನವನ್ನು ಪಡೆದಿದ್ದೇವೆ. ಭಾರತವು ಉತ್ತಮವಾದ ಪರಿಸರವನ್ನು ಹೊಂದಿದ್ದು, ಇದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು. ಗಾಂಧೀಜಿಯವರ ಮಾತಿನಂತೆ ದೇಶ ಅಭಿವೃದ್ಧಿ ಹೊಂದಲು ಅಸ್ಪøಶ್ಯತೆಯನ್ನು ತ್ಯಜಿಸಬೇಕು. ಐಕ್ಯತೆಯ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕಿದೆ. ನಾವು ಸೇವಿಸುವ ಗಾಳಿ, ನೀರು, ಆಹಾರ ಒಂದೇ ಆಗಿರುವಾಗ ನಮ್ಮ ನಮ್ಮಲ್ಲಿ ಬೇದ ಭಾವ, ತಾರತಮ್ಯ ಇರಬಾರದು ಎಂದರು. ಮೈಸೂರು ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪನಿರ್ದೇಶಕರಾದ ಡಾ|| ಟಿ.ಸಿ ಪೂರ್ಣಿಮಾ ಅವರು ಮಾತನಾಡಿ, ಭಾರತದಲ್ಲಿ ಕಾಣುವ ಧಾರ್ಮಿಕ ಐಕ್ಯತೆಯನ್ನು ಬೇರೆ ದೇಶದಲ್ಲಿ ಕಾಣಲು ಸಾಧ್ಯವಿಲ್ಲ. ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಪಾರ್ಸಿ ಮುಂತಾದ ಧರ್ಮಗಳಿದ್ದು, ಎಲ್ಲರೂ ಒಂದಾಗಿ ಬಾಳುತ್ತಿದ್ದೇವೆ. ನಾವು ಯಾವ ಧರ್ಮವನ್ನಾದರೂ ಅನುಸರಿಸಲಿ, ತಾಯಿ ನಾಡು ಭಾರತಕ್ಕೆ ಗೌರವವನ್ನು ಸಲ್ಲಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು. ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹವನ್ನು ನ. 19 ರಿಂದ ನ. 25 ರವರೆಗೆ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಉದ್ಧೇಶ ದೇಶದ ಪ್ರತಿಯೊಬ್ಬರೂ ಭಾವೈಕ್ಯತೆ ಮತ್ತು ಸೌಹಾರ್ದತೆಯಿಂದ ಬದುಕಬೇಕು ಎಂಬುದು ನಾವೆಲ್ಲರೂ ಒಂದೇ ಎಂಬ ಒಗ್ಗಟ್ಟನ್ನು ಪ್ರದರ್ಶಿಸಿದಾಗ ದೇಶದ ಏಳಿಗೆ ಸಾಧ್ಯವಾಗುತ್ತದೆ. ಭಾರತೀಯ ಸಂವಿಧಾನವು ಸಮಾನತೆ, ಸಹೋದರತೆ ಮತ್ತು ಭ್ರಾತೃತ್ವ ಭಾವನೆಯನ್ನು ಸಾರುತ್ತದೆ. ಜಾತಿ ಎನ್ನುವುದು ನಾವು ಮಾಡಿಕೊಂಡಿರುವ ಸಂಕುಚಿತ ಮನೋಭಾವನೆ. ಜಾತಿ ಎಲ್ಲೆಯನ್ನು ಮೀರಿ ಸಹಬಾಳ್ವೆಯಿಂದ ಬದುಕಬೇಕು ಎಂದರು. ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರೀಯ ಭಾವೈಕ್ಯತಾ ಘೋಷಣೆಗಳನ್ನು ಸಾರುತ್ತಾ, ಜಾಥಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆವನಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿ. ಮಂಜುಳಾ ಸುಬ್ಬರಾಮು ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಳಬಾಗಿಲು ತಾಲ್ಲೂಕು ಪಂಚಾಯಿತಿಯ ಉಪಾಧ್ಯಕ್ಷರಾದ ಡಿ. ಸುಜಾತ ಲಕ್ಷ್ಮೀನಾರಾಯಣ, ಕೋಲಾರ ಜಿಲ್ಲಾ ಪಂಚಾಯತ್ ಸದಸ್ಯರಾದ ರವಿಶಂಕರ್, ಉಪಾಧ್ಯಕ್ಷರಾದ ಎಂ. ವೆಂಕಟೇಶ್, ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಂ. ಬಾಬು, ಆವನಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎಂ. ಮಂಗಳಾಂಬ, ಆವನಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ಸಿ ಹೊನ್ನರಾಜು ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.