ವರದಿ: ಶಬ್ಬೀರ್ ಅಹ್ಮದ್
ಕೋಲಾರ: ಲೂಟಿ ಹೊಡೆದವರನ್ನು ರಕ್ಷಿಸಿದ್ದೇ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆ
ಪ್ರಧಾನಿ ಮೋದಿ ಶ್ರೀಮಂತರ ಪಾಲಿಗೆ ಮಾತ್ರ ಚೌಕಿದಾರ್-ರಾಹುಲ್ ವ್ಯಂಗ್ಯ
ಕೋಲಾರ:- ಶ್ರೀಮಂತರ ಪಾಲಿಗೆ ಚೌಕಿದಾರ್ ಆಗುವ ಮೂಲಕ ಲೂಟಿ ಹೊಡೆದವರನ್ನು ರಕ್ಷಿಸಿದ್ದೇ ಪ್ರಧಾನಿ ಮೋದಿಯವರ ಐದು ವರ್ಷಗಳ ಸಾಧನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಶನಿವಾರ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿರುವ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಬಡವರ ಪರ ಎಂದು ಹೇಳಿಕೊಳ್ಳುವ ಮೋದಿ ಕೇವಲ 15 ಮಂದಿಗೆ ಮಾತ್ರ ಪ್ರಧಾನಿಯಾಗಿದ್ದಾರೆ. ದೇಶದ ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಶ್ರೀಮಂತರ ಪಾಲಿಗೆ ಚೌಕಿದಾರ್ ಆಗಿದ್ದಾರೆ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ರಫೇಲ್ ಡೀಲ್ನಲ್ಲಿ ಜನತೆಯ 30 ಸಾವಿರ ಕೋಟಿ ರೂ. ಗಳನ್ನು ಅನಿಲ್ ಅಂಬಾನಿಗೆ ಕೊಟ್ಟು ದೇಶಭಕ್ತನೆಂದು ಹೇಳಿಕೊಳ್ಳುತ್ತಾರೆ, ಕಳ್ಳತನ ಮಾಡುವರೆಂದಿಗೂ ದೇಶಭಕ್ತರಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಆರ್ಎಸ್ಎಸ್ ಮತ್ತು ಬಿಜೆಪಿ ದ್ವೇಷ ಬಿತ್ತಿ, ದೇಶವನ್ನು ಒಡೆಯುವ ವಿಚಾರಧಾರೆಗಳನ್ನು ಜನರ ಮುಂದಿಟ್ಟಿದ್ದಾರೆ. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಒಟ್ಟಿಗೆ ಸೇರಿ ಪ್ರೀತಿ, ವಿಶ್ವಾಸ, ಸಾಮರಸ್ಯ ಹಾಗೂ ಅಭಿವೃದ್ಧಿ ವಿಚಾರಗಳನ್ನು ಜನರ ಮುಂದಿರಿಸಲಾಗಿದೆ. ದೇಶದಲ್ಲಿ ಇದೀಗ ಚುನಾವಣೆ ನಡೆಯುತ್ತಿರುವುದು ಈ ಎರಡು ವಿಚಾರಗಳಿಗಾಗಿ ಎಂದು ತಿಳಿಸಿದರು.
ಕಳೆದ 2014 ರಲ್ಲಿ ಮೋದಿಯವರು ಅಧಿಕಾರಕ್ಕೆ ಬಂದಾಗ ದೇಶದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ, ವಿದೇಶದ ಬ್ಯಾಂಕ್ಗಳಲ್ಲಿರುವ ಕಪ್ಪುಹಣವನ್ನು ತಂದು ಭಾರತದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಜಮಾ ಮಾಡುವುದಾಗಿ ಹೇಳಿದ್ದರು ಆದು ಆಯಿತೇ ಎಂದು ಪ್ರಶ್ನಿಸಿದರು.
ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿ ಅಧಿಕಾರಕ್ಕೆ ಬಂದರು. ಆದರೆ, ಅಧಿಕಾರಕ್ಕೆ ಬಂದ ನಂತರ ಇದೆಲ್ಲವನ್ನು ಮರೆತು ಸುಮಾರು 3 ಲಕ್ಷ ಕೋಟಿ ಗಳಷ್ಟು ಶ್ರೀಮಂತರ ಬ್ಯಾಂಕ್ ಸಾಲವನ್ನು ಮನ್ನಾ ಮಾಡಿದರು’ ಎಂದು ಆರೋಪಿಸಿದರು.
ಪ್ರಸಕ್ತ ಚುನಾವಣಾ ಭಾಷಣದಲ್ಲಿ ನರೇಂದ್ರ ಮೋದಿ ನಿರುದ್ಯೋಗ ನಿವಾರಣೆ, 15 ಲಕ್ಷ ರೂ ಬಗ್ಗೆ, ರೈತರ ಸಾಲ ಮನ್ನಾ ಬಗ್ಗೆ ಚಕಾರವೆತ್ತುತ್ತಿಲ್ಲ. ಚುನಾವಣೆ ಪ್ರಣಾಳಿಕೆಯಲ್ಲೂ ಉದ್ಯೋಗದ ಭರವಸೆ ನೀಡಿಲ್ಲ. ಕೇವಲ ಸುಳ್ಳುಗಳನ್ನು ಹೇಳುತ್ತಾ ಚೌಕಿದಾರ್ ಎಂದೇಳಿಕೊಂಡು ದೇಶವನ್ನು ಹಾಗೂ ಜನರನ್ನು ವಂಚಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ನೀರವ್ ಮೋದಿ, ಲಲಿತ್ ಮೋದಿ, ಚೋಕ್ಸಿ, ವಿಜಯಮಲ್ಯ, ಅಂಬಾನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದ ಕಳ್ಳರ ಕೂಟ ಜನರ ಹಣವನ್ನು ಕೊಳ್ಳೆ ಹೊಡೆದಿದ್ದಾರೆ, ರೈತರ, ಬಡವರ, ಕಾರ್ಮಿಕರ ಹಣವನ್ನು ಲೂಟಿ ಮಾಡಿರುವುದು ಸ್ಪಷ್ಟವಾಗಿ ಜನತೆಯ ಕಣ್ಣಿಗೆ ಗೋಚರಿಸುತ್ತಿದೆ ಎಂದು ಹೇಳಿದರು.
ನೋಟು ಅಮಾನ್ಯೀಕರಣ ಹಾಗೂ ಜಿಎಸ್ಟಿ ಎಂಬ ನೆಪದಲ್ಲಿ ಬಡವರನ್ನು, ರೈತರನ್ನು, ಜನಸಾಮಾನ್ಯರನ್ನು ಸಂಕಷ್ಟಕ್ಕೀಡು ಮಾಡಿದ್ದಲ್ಲದೆ ಗಬ್ಬರ್ ಸಿಂಗ್ ಜಿಎಸ್ಟಿ ರೂಪದಲ್ಲಿ ಬಹು ದೊಡ್ಡ ಹೊಡೆದ ನೀಡಿದ್ದಾರೆ ಎಂದು ದೂರಿದರು.
ಗಬ್ಬರ್ ಸಿಂಗ್ ಟ್ಯಾಕ್ಸ್ ಹೆಸರಿನಲ್ಲಿ ಶೇ 28 ರಷ್ಟನ್ನು ತೆರಿಗೆ ವಸೂಲಿ ಮಾಡುವ ಮೂಲಕ ಜನಸಾಮಾನ್ಯರಿಗೆ ತೊಂದರೆ ನೀಡಲಾಗುತ್ತಿದೆ. ಹೋದಕಡೆಯಲ್ಲೆಲ್ಲಾ ಭಾಷಣದಲ್ಲಿ ಪೊಳ್ಳು ಭರವಸೆಗಳನ್ನು ನೀಡುತ್ತಿರುವ ಮೋದಿ ಕಳೆದ 5 ವರ್ಷದಲ್ಲಿ ಭಾರತದಲ್ಲಿ ನಿರುದ್ಯೋಗ ನಿವಾರಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಜನರ ಮುಂದಿಡುತ್ತಿಲ್ಲ, 5 ವರ್ಷದ ಅಭಿವೃದ್ಧಿಯನ್ನು ಜನರಿಗೆ ತಿಳಿಸುತ್ತಿಲ್ಲ. ಮೇಕ್ ಇನ್ ಇಂಡಿಯಾ, ಸ್ಟಾಂಡ್ ಅಫ್ ಇಂಡಿಯಾ ಘೋಷಣೆಗಳನ್ನು ಮಾಡಿರುವ ಡೈಲಾಗ್ಗಳನ್ನು ಕೇಳಿ ಯುವ ಜನತೆ ಬೇಸತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಐದು ವರ್ಷಗಳ ಹಿಂದೆ ದೇಶದ ಜನತೆಗೆ ನೀಡಿದ ಬಹುತೇಕ ಭರವಸೆಗಳನ್ನು ಈಡೇರಿಸದೇ ವಿಫಲರಾಗಿದ್ದಾರೆ. ಆದರೆ, ತಾವು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ದೇಶದ ಸುಮಾರು ಐದು ಕೋಟಿ ಬಡ ಕುಟುಂಬಗಳ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 6 ಸಾವಿರ ರೂಪಾಯಿಗಳನ್ನು ನೇರವಾಗಿ ಜಮೆ ಮಾಡಲಾಗುವುದು ಎಂದು ಘೋಷಿಸಿದರು.
ಕೇಂದ್ರ ಬಜೆಟ್ ಜೊತೆಗೆ ಕೃಷಿಕರಿಗಾಗಿಯೇ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಲಾಗುವುದು, ಜನರಿಗೆ ಹೊರೆಯಾಗಿರುವ ಜಿಎಸ್ಟಿ ಗಬ್ಬರ್ಸಿಂಗ್ ತೆರಿಗೆ ಪದ್ಧತಿಯನ್ನು ಸುಗಮ ತೆರಿಗೆ ಪದ್ಧತಿಗೆ ಬದಲಾಯಿಸಲಾಗುವುದು, ರೈತರು ಸಾಲ ಮರುಪಾವತಿಸದಿದ್ದರೂ ಜೈಲಿಗೆ ಕಳುಹಿಸದಂತೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದರು.
ದೇಶದಲ್ಲಿ ಖಾಲಿ ಇರುವ 24 ಲಕ್ಷ ಹುದ್ದೆಗಳನ್ನು ತುಂಬಲಾಗುವುದು, ಪ್ರತಿ ಪಂಚಾಯತ್ ಮಟ್ಟದಲ್ಲಿ 10 ಲಕ್ಷ ಉದ್ಯೋಗವಕಾಶಗಳನ್ನು ಸೃಷ್ಠಿಸಲಾಗುವುದು, ಯಾವುದೇ ಪರವಾನಗಿ ಇಲ್ಲದೆ ನವ ಉದ್ಯಮಗಳನ್ನು ಆರಂಭಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳು ಅಧಿಕಾರಕ್ಕೆ ಬಂದರೆ ನ್ಯಾಯ್ ಯೋಜನೆಯಲ್ಲಿ ಬಡ ಕುಟುಂಬಗಳ ಖಾತೆಗೆ ವಾರ್ಷಿಕ 72 ಸಾವಿರ ರೂ, ಕೇಂದ್ರ ಸರಕಾರಿ ನೌಕರಿಗಳಲ್ಲಿ ಶೇ 33 ರಷ್ಟು ಮಹಿಳಾ ಮೀಸಲಾತಿ ನೀಡಿ, ಪ್ರತ್ಯೇಕ ಕೃಷಿ ಬಜೆಟ್ ಮಂಡನೆ, ಹೊಸ ಉದ್ಯಮಗಳಿಗೆ ಮೊದಲ ಮೂರು ವರ್ಷ ಯಾವುದೇ ಪರವಾನಗಿಯ ಅವಶ್ಯಕತೆಯಿಲ್ಲದೆ ಉದ್ಯಮ ನಡೆಸುವ, ನರೇಗಾ ಯೋಜನೆಯಡಿ 150 ದಿನಗಳ ಉದ್ಯೋಗ ಖಾತ್ರಿಯನ್ನು ಅನುಷ್ಠಾನಕ್ಕೆ ತರುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದರು.
ನಾನು ಸುಳ್ಳು ಹೇಳುವ ಅಥವಾ ಚುನಾವಣಾ ನಿಮಿತ್ತ ಭರವಸೆಗಳನ್ನು ನೀಡುತ್ತಿಲ್ಲ, ನುಡಿದಂತೆ ನಡೆಯುವುದಕ್ಕಾಗಿಯೇ ಅಧಿಕಾರಕ್ಕೆ ಬರುತ್ತೇವೆ. ದೇಶದ ಬಡವರ, ಕಾರ್ಮಿಕರ, ರೈತರ ಪರ ಚಿಂತನೆಯನ್ನು ಅಳವಡಿಸಿಕೊಂಡಿರುವುದಾಗಿ ಹೇಳಿದರು.
ಈ ದೇಶದ ಬಡವರಿಗೋಸ್ಕರ ಕಾಂಗ್ರೆಸ್ ಪಕ್ಷದ ಚಿಂತಕರ ಸಭೆ ಕರೆದು ಒಟ್ಟಾರೆ ದೇಶದ ಆದಾಯದಲ್ಲಿ ಬಡವರ ಖಾತೆಗೆ ಎಷ್ಟು ಹಣ ಹಾಕಬಹುದು ಎಂಬುದರ ಬಗ್ಗೆ ಕೂಲಂಕಷ ಚರ್ಚೆ ನಡೆಸಿ ಉದ್ದುದ್ದ ಭಾಷಣ ನನಗೆ ಬೇಡ ಎಂದು ಹೇಳಿದಾಗ ತಜ್ಞರು ಅಂಕಿ ಅಂಶದ ಸಮೇತ ಚೀಟಿ ಬರೆದು ನನ್ನ ಕೈಗಿಟ್ಟರು ಎಂದರು.
ದೇಶದ 25 ಕೋಟಿ ಜನರಿಗೆ 5 ಕೋಟಿ ಕುಟುಂಬಗಳಿಗೆ ಈ ಯೋಜನೆ ಅನ್ವಯಿಸಲಿದೆ. ಮೋದಿ ಹೇಳಿದಂತೆ 15 ಲಕ್ಷ ರೂ ಗಳಂತೆ ಇದು ಸುಳ್ಳಾಗುವುದಿಲ್ಲ, ನಾವು ಸಾಬೀತು ಮಾಡಿ ತೋರಿಸುತ್ತೇವೆ ಎಂದು ಹೇಳಿದರು.
ಮೋದಿ ಮತ್ತವರ ಪಕ್ಷದ ಸದಸ್ಯರು ನ್ಯಾಯ್ ಯೋಜನೆ ಬಗ್ಗೆ ಟೀಕೆ ಮಾಡುತ್ತಾರೆ. ಎಲ್ಲಿಂದ 72 ಸಾವಿರ ರೂ. ತರುತ್ತಾರೆ ಎಂದು ವ್ಯಂಗ್ಯವಾಡುತ್ತಾರೆ. ಮೋದಿ ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಅವರ ಅನಿಲ್ ಅಂಬಾನಿಯಂತ ಕಳ್ಳ ಸ್ನೇಹಿತರ ಜೇಬಿನಿಂದಲೇ ವಸೂಲು ಮಾಡುವುದಾಗಿ ರಾಹುಲ್ಗಾಂಧಿ ಸವಾಲು ಹಾಕಿದರು.
ಹೊಸರಕಾರ ರೈತರಿಗೆ ನೀಡುವ ವಿನಾಯಿತಿ, ರಿಯಾಯಿತಿ ಬಗ್ಗೆ ಸ್ಪಷ್ಟಪಡಿಸಲಾಗುವುದು. ಕನಿಷ್ಟ ಸಾಮಾನ್ಯ ಬೆಲೆ, ಪ್ರೋತ್ಸಾಹ ಹಾಗೂ ಬೆಂಬಲ ಬೆಲೆ, ಸಾಲ ಮನ್ನಾ, ಆಹಾರ ಸಂಸ್ಕರಣಾ ಘಟಕಗಳ ನಿರ್ಮಾಣದ ಬಗ್ಗೆ ಬಜೆಟ್ನಲ್ಲಿಯೇ ವಿವರಿಸುವುದಾಗಿ ಭರವಸೆ ನೀಡಿದರು.
ಪ್ರತಿ ವರ್ಷ ಹವಾಮಾನ ವೈಪರೀತ್ಯ ಆಧರಿಸಿ ಬೆಳೆ ಬೆಳೆಯುವ ಬಗ್ಗೆ ಕೃಷಿ ಹಂಗಾಮಿ ಆರಂಭದ ಮುನ್ನವೇ ತಿಳಿಸುವುದಾಗಿ ಹೇಳಿದರು.
ದೇಶದ ಬ್ಯಾಂಕ್ಗಳ ಕೀಲಿ ಕೈಯನ್ನು ಕಳ್ಳರಿಂದ ಕಿತ್ತು ಯುವ ಜನತೆಯ ಕೈಗೆ ಕೊಡುತ್ತೇನೆ. ಬ್ಯಾಂಕ್ಗಳಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ ನೀಡುವ ಯೋಜನೆಯನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದರು.
ಕೇಂದ್ರದಲ್ಲಿ ನೆನೆಗುದಿಗೆ ಬಿದ್ದಿರುವ ಶೇ 33 ರ ಮಹಿಳಾ ಮೀಸಲಾತಿ ಅನುಷ್ಠಾನಗೊಳಿಸಿ ರಾಜ್ಯಸಭೆ, ವಿಧಾನ ಸಭೆ, ಲೋಕಸಭೆಯ ಚುನಾವಣೆಗಳಲ್ಲಿ ಮೀಸಲಾತಿ ನೀಡಲಾಗುವುದು. ಕೇಂದ್ರ ಸರಕಾರದ ಎಲ್ಲಾ ಸರಕಾರಿ ಹುದ್ದೆಗಳಲ್ಲೂ ಮಹಿಳೆಯರಿಗೆ ಶೇ 33. ರಷ್ಟು ಮೀಸಲಾತಿ ಮೀಸಲಿರಿಸುವುದಾಗಿ ರಾಹುಲ್ಗಾಂಧಿ ಆಶ್ವಾಸನೆ ನೀಡಿದರು.
ವೇದಿಕೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಸಚಿವ ಡಿ.ಕೆ.ಶಿವಕುಮಾರ್, ಶಾಸಕರಾದ ವಿ.ಮುನಿಯಪ್ಪ, ಕೆ.ಶ್ರೀನಿವಾಸಗೌಡ, ಎಸ್.ಎನ್.ನಾರಾಯಣಸ್ವಾಮಿ, ನಸೀರ್ ಅಹಮದ್, ಕೆ.ವೈ.ನಂಜೇಗೌಡ ಮತ್ತು ಕಾಂಗ್ರೆಸ್ ಜೆಡಿಎಸ್ ಮುಖಂಡರು ಹಾಜರಿದ್ದರು.
ಕೆ.ಎಚ್.ಮುನಿಯಪ್ಪ ಪರ ಪ್ರಚಾರ ಭಾಷಣ ಮಾಡಿದರು.
ಕೋಲಾರದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸಿದ್ದಾರಾಮಯ್ಯ ವಾಗ್ದಾಳಿ
ಮೋದಿ ಚೌಕಿದಾರ್ ಅಲ್ಲ ಭ್ರಷ್ಟರಿಗೆ ಬೆಂಬಲ ನೀಡಿರುವ ಭಾಗೀದಾರ್
ಕೋಲಾರ:- ಪ್ರಧಾನಿ ನರೇಂದ್ರ ಮೋದಿ ಚೌಕೀದಾರ್ ಹೆಸರೇಳಿಕೊಂಡು ಹಣ ಲೂಟಿ ಮಾಡುವ ಭ್ರಷ್ಟರಿಗೆ ಬೆಂಬಲ ಕೊಟ್ಟಿದ್ದಾರೆ ಅವರು ಚೌಕೀದಾರ್ ಅಲ್ಲ ಭ್ರಷ್ಟಾಚಾರಿಗಳ ಜತೆ ಭಾಗೀಧಾರ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ಕೋಲಾರದದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನ ಮೈತ್ರಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು ರಫೇಲ್ ಪ್ರಕರಣದಲ್ಲಿ ಅಂಬಾನಿ ಜತೆ ಕಳವು ಮಾಡಿದ ಮೋದಿ ಚೌಕಿದಾರ್ ಅಲ್ಲ ಭ್ರಷ್ಟಾಚಾರದಲ್ಲಿ ಭಾಗಿದಾರ್ ಎಂದರು.
ರಾಷ್ಟ್ರಪತಿಗಳು ಚೌಕೀದಾರ್ ಅಂತಾ ಇವರಿಗೇನೂ ನಾಮಕರಣ ಮಾಡಿಲ್ಲ ಇವರೇ ನಾಮಕರಣ ಮಾಡಿಕೊಂಡಿದ್ದಾರೆ.ಬಿಜೆಪಿಯಲ್ಲಿನ ಭ್ರಷ್ಟರೆಲ್ಲಾ ಚೌಕೀದಾರ್ಗಳು ಎಂದು ಹೇಳಿದ ಅವರು ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ, ಜನಾರ್ಧನರೆಡ್ಡಿ, ಅಶೋಕ್, ಕಟ್ಟಾಸುಬ್ರಮಣ್ಯನಾಯ್ಡು, ಇವರೆಲ್ಲಾ ಚೌಕೀದಾರ್ಗಳು ಇವರಿಗೆ ಓಟು ಕೊಡಬೇಕಾ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ನಾಚಿಕೆಯಾಗಬೇಕು. ಬ್ಯಾಂಕ್ನ ಕೋಟಿಗಟ್ಟಲೆ ಹಣ ಲೂಟಿ ಮಾಡಿ ದೇಶ ತೊರೆದು ಹೋದವರನ್ನು ತಡೆಯಲಿಲ್ಲ. ನೀರವ್ ಮೋದಿ,ಲಲಿತ್ ಮೋದಿ, ವಿಜಯಮಲ್ಯ, ಇವರು ಬ್ಯಾಂಕುಗಳನ್ನು ಲೂಟಿ ಮಾಡಿ ಹೋದರು ಆಗ ಅವರನ್ಯಾಕೆ ಕಾಯಲಿಲ್ಲ ಎಂದು ಗುಡುಗಿದರು.
ಚುನಾವಣೆಗಾಗಿ ದೇಶದ ಸೈನಿಕರನ್ನು ಬಳಸಿಕೊಳ್ಳುತ್ತಿದೆ, ನರೇಂದ್ರ ಮೋದಿ ಐದು ವರ್ಷಗಳಲ್ಲಿ ಮಾಡಿದ ಸಾಧನೆ ಏನೂ ಇಲ್ಲ ಅದನ್ನು ಮರೆಮಾಚಲು ದೇಶದ ಸೈನಿಕ ಸಾಧನೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದ ಅವರು ಯಾವುದೇ ಕಾರಣಕ್ಕೂ ಕೋಮುವಾದಿ ಬಿಜೆಪಿಗೆ ಬೆಂಬಲ ಕೊಡಬೇಡಿ ಎಂದು ಕರೆ ನೀಡಿದರು.
ಮೋದಿಗೆ ರೈತರ ಮತ್ತು ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ದೇಶದ ರೈತರ ಸಾಲ ಮನ್ನಾ ಮಾಡದ ಅವರು ಕೋಟಿ ಗಟ್ಟಲೆ ಸಾಲ ಮಾಡಿರುವ ಶ್ರೀಮಂತರು ಮಾಡಿರುವ ಲಕ್ಷಾಂತರ ರೂ ಸಾಲ ಮನ್ನಾ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ಕೊಂಡಿದೆ, ಇದಕ್ಕೆ ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಗಳೇ ಸಾಕ್ಷಿ ಎಂದರು.
ಐದು ರಾಜ್ಯಗಳಲ್ಲಿ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಕೊಟ್ಟ ಮಾತಿನಂತೆ ಕಾಂಗ್ರೆಸ್ ರೈತರ ಸಾಲ ಮನ್ನಾ ಮಾಡಿದ್ದಾರೆ, ಮಧ್ಯ ಪ್ರದೇಶ, ರಾಜಸ್ತಾನ ಹಾಗು ಛತ್ತೀಸ್ಗಡ್ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ರಾಹುಲ್ ಗಾಂಧೀ ರೈತರ ಸಾಲ ಮನ್ನಾ ಮಾಡಿಸಿದರು ಎಂದರು.
ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡಿತು, ಕುಮಾರ ಸ್ವಾಮಿ ನೇತೃತ್ವದ ಸರ್ಕಾರದಲ್ಲಿ 48 ಸಾವಿರ ಕೋಟಿಗಳನ್ನು ಮನ್ನಾ ಮಾಡಲಾಗಿದೆ, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ರೈತರ ಸಾಲ ಮನ್ನಾ ಮಾಡಲಾಯಿತು, ಆದರೆ ಮೋದಿ ಒಂದು ರೂಪಾಯಿ ಸಾಲನೂ ಮನ್ನಾ ಮಾಡಲಿಲ್ಲ ಎಂದು ಟೀಕಿಸಿದರು.
ದೇಶದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಮೋದಿ ಉದ್ಯೋಗದ ಹೆಸರಿನಲ್ಲಿ ಯುವಕರಿಗೆ ಟೋಪಿ ಹಾಕಿದ್ದಾರೆ.ಉದ್ಯೋಗ ಸೃಷ್ಟಿಗೆ ಬದಲಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮುಗಿಸಲು ಯತ್ನಿಸಿದವರು ಒಂದು ಉದ್ಯೋಗ ಸೃಷ್ಟಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎತ್ತಿನಹೊಳೆ ಯೋಜನೆ, ಕೆ.ಸಿ ಮತ್ತು ಎಚ್.ಎನ್. ವ್ಯಾಲಿ ಯೋಜನೆ ಬಯಲು ಸೀಮೆ ಜನರಿಗೆ ಕೊಟ್ಟೆ. ಬಿಜೆಪಿಯವರು ಏನು ಕೊಟ್ಟರು.-ಬಿಜೆಪಿ ಸುಳ್ಳು ಭರವಸೆ ಕೊಡಲಿ ತಲೆಕಡಿಸಿಕೊಳ್ಳಬೇಡಿ. ಸಂವಿಧಾನ ವಿರೋಧಿಗಳು ಬಿಜೆಪಿಗೆ ಮತ ಹಾಕಬೇಡಿ ಎಂದರು.
ಕೋಮುವಾದಿಗಳನ್ನ ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದೇವೆ. ಕಾಂಗ್ರೆಸ್ – ಜೆಡಿಎಸ್ ನಡುವೆ ಭಿನ್ನಾಭಿಪ್ರಾಯ ಬಿಟ್ಟು ಮೈತ್ರಿ ಅಭ್ಯರ್ಥಿಗಳ ಪರ ಕೆಲಸ ಮಾಡಬೇಕು.
ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಗ್ರಾಮ ಪಂಚಾಯಿತಿ ಸದಸ್ಯನಾಗೋದಕ್ಕೂ ನಾಲಾಯಕ್. ಅಂಬೇಡ್ಕರ್ ಪುತ್ಥಳಿಗಳನ್ನು ಧ್ವಂಸ ಮಾಡುವುದಾಗಿ ಹೇಳಿಕೆ ನೀಡುವ ಮತ್ತು ಸಂವಿಧಾನ ವಿರೋಧಿ ಮಾತಾಡುವ ತೇಜಸ್ವಿ ಸೂರ್ಯಗೆ ಓಟ್ ಹಾಕಬೇಕಾ ಎಂದ ಅವರು ಒಬ್ಬ ಕುರುಬನಿಗೆ ಟಿಕೇಟ್ ಕೊಡಿಸಲು ಆಗದ ಈಶ್ವರಪ್ಪಗೆ ನಾಚಿಕೆಯಾಗಬೇಕು ಎಂದರು.
ಅಲ್ಪಸಂಖ್ಯಾತರು ಹಾಗು ಹಿಂದುಳಿದವರಿಗೆ ಟಿಕೆಟ್ ಕೊಡಿಸಲು ಯೋಗ್ಯತೆ ಇಲ್ಲದ ಈಶ್ವರಪ್ಪ ಬಾಯಿಗೆ ಬಂದಂತೆ ಮಾತಾಡುತ್ತಾರೆ ಅವರು ಬಿಜೆಪಿಗೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ತೊರೆದು ಕಾಂಗ್ರೆಸ್ಗೆ ಮತ ನೀಡಬೇಕು ಕಾರ್ಯಕರ್ತರು ಎಲ್ಲ ಸಂಶಯಗಳನ್ನು ಬದಿಗೊತ್ತಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಕೋರಿದರು.