ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ರೋಟರಿ ಸಂಸ್ಥೆ ಮತ್ತು ಗ್ರಾಮಪಂಚಾಯತ ಸಹಯೋಗದೊಂದಿಗೆ ಕೋಟಿ- ನಾಟಿ ಕಾರ್ಯಕ್ರಮ
ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ನೀರಾವರಿ ಸಮಸ್ಯೆ ಹೆಚ್ಚಾಗಿದ್ದು, ಗಿಡ-ಮರಗಳನ್ನು ಬೆಳೆಸುವ ಹಿತದೃಷ್ಟಿಯಿಂದ ರೋಟರಿ ಸಂಸ್ಥೆ ಮತ್ತು ಗ್ರಾಮಪಂಚಾಯಿತಿಯ ಸಹಯೋಗದೊಂದಿಗೆ ಕೋಟಿ- ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿಂದ್ದು, ಈ ಕಾರ್ಯಕ್ರಮದಲ್ಲಿ 100 ಕೋಟಿ ವಿವಿಧ ಸಸಿಗಳನ್ನು ನಾಟಿ ಮಾಡಲಾಗುವುದು ಎಂದು ರೋಟರಿ ಶ್ರೀನಿವಾಸಪುರ ಸೆಂಟ್ರಲ್ನ ಚಾರ್ಟಡ್ ಪ್ರಸಿಡೆಂಟ್ ಎಲ್. ಗೋಪಾಲಕೃಷ್ಣ ತಿಳಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದ ಆವರಣದಲ್ಲಿ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಮತ್ತು ಗ್ರಾಮಪಂಚಾಯಿತಿಯ ಸಹಯೋಗದೊಂದಿಗೆ ಕೋಟಿ-ನಾಟಿ ಕಾರ್ಯಕ್ರಮದ ಬಗ್ಗೆ ಚರ್ಚಿಸಲು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಗೋಪಾಲಕೃಷ್ಣ, ಪುಣ್ಯಾತ್ಮ ದಾನಿಯೊಬ್ಬರು ನೀಡಿರುವ 100 ಕೋಟಿ ರೂಗಳ ವೆಚ್ಚದಲ್ಲಿ ಅರಣ್ಯ, ರಸ್ತೆ, ಶಾಲೆ, ಕಚೇರಿಗಳ ಬಳಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮುಂತಾದ ಕಡೆಗಳಲ್ಲಿ ವಿವಿಧ ರೀತಿಯ ಗಿಡಗಳನ್ನು ನಾಟಿ ಮಾಡಿ ಬೆಳೆಸಿ ಹಸರೀಕರಣ ಮಾಡಿದರೆ ಈ ಭಾಗದಲ್ಲಿ ಅತಿ ಹೆಚ್ಚಾಗಿ ಮಳೆ ಬಂದು ಅಂತರ್ಜಲ ವೃದ್ದಿಯಾಗಲು ಅನುಕೂಲವಾಗುತ್ತದೆ ಎಂದರು.
ರೋಟರಿ ಸಂಸ್ಥೆಯಿಂದ ತಾಲ್ಲೂಕಿನಲ್ಲಿ ಆರೋಗ್ಯ ತಪಾಸಣೆಯ ಕ್ಯಾಂಪ್, ಶಾಲಾ ಮಕ್ಕಳಿಗೆ ನಿಘಂಟುಗಳನ್ನು ವಿತರಿಸುವುದು, ತಾಲ್ಲೂಕಿನ ಶಿಕ್ಷಕರನ್ನು ಸನ್ಮಾನಿಸುವುದು, ಸಮಾಜ ಸೇವಕರನ್ನು ಗುರ್ತಿಸಿ ಸನ್ಮಾನಿಸುವುದು, ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸುವುದು ಮುಂತಾದ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ತಾಲ್ಲೂಕು ಪಂಚಾಯಿತಿಯ ಇ.ಒ. ಆನಂದ್ ಮಾತನಾಡಿ, ತಾಲ್ಲೂಕಿನಾದ್ಯಂತ ರೋಟರಿ ಸಂಸ್ಥೆ, ಗ್ರಾಮಪಂಚಾಯಿತಿ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ತಾಲ್ಲೂಕಿನಾದ್ಯಂತ ಕೋಟಿ-ನಾಟಿ ಕಾರ್ಯಕ್ರಮದಲ್ಲಿ ವಿವಿಧ ಸಸಿಗಳನ್ನು ನಾಟಿ ಮಾಡಲು ದಿನಾಂಕ 27.09.2019ರ ಶುಕ್ರವಾರದಂದು ಸಾಂಕೇತಿಕವಾಗಿ ಚಾಲನೆ ನೀಡಲಾಗುವುದು, ಅಷ್ಟರಲ್ಲಿ ನಾಟಿ ಮಾಡಲು ಬೇಕಾಗಿರುವ ಅಳ್ಳವನ್ನು ತೋಡುವುದು, ವಿವಿಧ ರೀತಿಯ ಸಸಿಗಳನ್ನು ಆಯ್ಕೆ ಮಾಡುವುದು, ನಾಟಿ ಮಾಡಲು ಬೇಕಾಗಿರುವ ಗೊಬ್ಬರ ಮುಂತಾದವುಗಳನ್ನು ಮುಂಚಿತವಾಗಿ ಸರಿಪಡಿಸಿಕೊಳ್ಳಬೇಕೆಂದು ತಿಳಿಸುತ್ತಾ, ಶ್ರೀನಿವಾಸಪುರ- ಮದನಪಲ್ಲಿ ಮಾರ್ಗದಲ್ಲಿ 2-3 ಬೆಟ್ಟ ಗುಡ್ಡಗಳಿಗೆ ಸಂಪೂರ್ಣವಾಗಿ ಒಂದು ಗುಡ್ಡಕ್ಕೆ ಕೆಂಪು ಮತ್ತು ಉಳಿದವುಗಳಿಗೆ ಹಸಿರು ಮತ್ತು ನೀಲಿ ಬಣ್ಣದ ಹೂ ಬಿಡುವ ಸಸಿಗಳನ್ನು ನಾಟಿ ಮಾಡಲಾಗುವುದು, ಮುಂದೆ ಈ ಭಾಗವು ಒಂದು ಪ್ರವಾಸಿ ತಾಣವಾಗಿ ಮಾರ್ಪಾಡಾಗುವ ರೀತಿಯಲ್ಲಿ ಗಿಡಗಳನ್ನು ಬೆಳೆಸಬೇಕು ಎಂದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಅದ್ಯಕ್ಷರಾದ ವಿ. ಕುಲಕರ್ಣಿ ಮತ್ತು ಕಾರ್ಯದರ್ಶಿ ಕೃಷ್ಣಮೂರ್ತಿ ಎನ್. ಮಾತನಾಡಿ, ತಾಲ್ಲೂಕಿನಲ್ಲಿ ರೋಟರಿ ಸಂಸ್ಥೆಯು ಸಾರ್ವಜನಿಕರಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮುಖ್ಯವಾಗಿ ಆರೋಗ್ಯ, ಶಿಕ್ಷಣ ಮತ್ತು ಸುಚಿತ್ವಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದು, ಜಿಲ್ಲೆಯಲ್ಲಿ ಮರಗಳನ್ನು ಕಡಿದುಹಾಕಿರುವ ಹಿನ್ನೆಲೆಯಲ್ಲಿ ಮಳೆ-ಬೆಳೆ ಇಲ್ಲದ ಕಾರಣ, ಈಗ ಲಕ್ಷಾಂತರ ಸಸಿಗಳನ್ನು ನಾಟಿ ಮಾಡಿ ಈ ನಾಡನ್ನು ಹಸಿರು ನಾಡನ್ನಾಗಿ ಮಾಡಿ ಅಂತರ್ಜಲ ವೃದ್ದಿಯಾಗುವಂತೆ ಮಾಡಬೇಕು, ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ, ಸಿಸಿಗಳನ್ನು ನಾಟಿ ಮಾಡುವುದೇ ಅಲ್ಲದೆ, ಆ ಸಸಿಗಳನ್ನು ಬೆಳೆಸಿ ದೊಡ್ಡ ಮರಗಳನ್ನಾಗಿ ಮಾಡುವುದು ನಮ್ಮ-ನೆಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಸಸಿಗಳನ್ನು ನಾಟಿ ಮಾಡುವ ದಿನ ಎಲ್ಲಾ ಪಿಡಿಒ ಗಳು ಹಸಿರು ಬಣ್ಣದ ಟಿ-ಶರ್ಟ್ ಅನ್ನು ದರಿಸಲು ರೋಟರಿ ಸಂಸ್ಥೆಯಿಂದ ಎಲ್ಲಾ ಪಿ.ಡಿ.ಒ. ಗಳಿಗೂ ಟಿ-ಶರ್ಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಪಂಚಾಯಿತಿಗಳ ಪಿ.ಡಿ.ಒ.ಗಳು ಹಾಜರಿದ್ದರು.