ರೈತರಿಗೆ ಮತ್ತು ಕಾರ್ಮಿಕರಿಗೆ ಮಾರಕ ಭೂ ಸುಧಾರಣಾ ಕಾಯ್ದೆಗಳು ಅಂಗೀಕಾರ ಮಾಡದಂತೆ ರೈತ ಸಂಘದಿಂದ ಜೈಲ್ ಬರೋ ಚಳುವಳಿ

ಕೋಲಾರ,ಸೆ.19: ರೈತರಿಗೆ ಮತ್ತು ಕಾರ್ಮಿಕರಿಗೆ ಮಾರಕವಾಗುವ ಭೂ ಸುಧಾರಣಾ ಕಾಯ್ದೆ ಎ.ಪಿ.ಎಂ.ಸಿ., ವಿದ್ಯುತ್, ಕಾರ್ಮಿಕ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ಅಧಿವೇಶನದಲ್ಲಿ ಅಂಗೀಕಾರ ಮಾಡದಂತೆ ಒತ್ತಾಯಿಸಿ ರೈತ ಸಂಘದಿಂದ ರೈತರು ಬೆಳೆದ ಬೆಳೆಗಳು ತರಕಾರಿ ಸೊಪ್ಪು ಮತ್ತು ಕೋಳಿಗಳ ಮೂಲಕ ಕೋಲಾರಮ್ಮ ನ ದೇವಸ್ಥಾನದಿಂದ ಜಿಲ್ಲಾ ಕಾರಾಗೃಹದವರೆಗೂ ಜೈಲ್ ಬರೋ ಚಳುವಳಿ ಮಾಡಿ ರೈತ ವಿರೋದಿ ಕಾಯ್ದೆಗಳನ್ನು ಕಾಯ್ದೆಗಳನ್ನು ಕೈಬಿಡಿ ಇಲ್ಲವಾದರೆ ನಮ್ಮನ್ನು ಜೈಲಿಗೆ ಹಾಕಿ ಎಂಬ ಘೋಷಣೆಯೊಂದಿಗೆ ತಹಶೀಲ್ದಾರ್‍ರವರ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ ಒತ್ತಾಯಿಸಲಾಯಿತು.

ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ನೂತನ ಭೂಸುಧಾರಣಾ ಕಾಯಿದೆಯು ರೈತ ವಿರೋಧಿಯಾಗಿರುವುದು ಅಕ್ಷರಶಹಃ ಸತ್ಯ ಎನ್ನುವ ಬಗ್ಗೆ ದೇಶದ ಮೂಲೆ ಮೂಲೆಯಲ್ಲಿಯೂ ವಿಚಾರಗಳು ಕೇಳಿಬರುತ್ತಿವೆ. ಯಾವುದೇ ಚರ್ಚೆಯಿಲ್ಲದೆ ಏಕಾಏಕಿ ಕಾಯಿದೆಗಳನ್ನು ಜಾರಿಗೆ ಮುಂದಾಗಿರುವುದು ಇಡೀ ಸಂಕುಲವನ್ನು ನಾಶ ಮಾಡಿ ಕಾರ್ಪೋರೇಟ್ ಕಂಪನಿಗಳ ಪರವಾಗಿ ಸರ್ಕಾರಗಳಿರುವುದು ಎನ್ನುವುದನ್ನು ಸಾಭೀತುಪಡಿಸುವುದಕ್ಕೆ ಹೊರತು ರೈತರ ಪರವಾಗಿ ಅಲ್ಲ. ಸುಗ್ರೀವಾಜ್ಞೆ ಮೂಲಕ ಭೂಸುಧಾರಣಾ ಕಾಯಿದೆ ತಿದ್ದುಪಡಿ ತಂದಿರುವುದನ್ನು ಗಮನಿಸಿದರ ರೈತರಿಗೆ ಭೂಮಿ ಹಂಚಿಕೆಯಿರಲಿ. ಈಗ ಅವರ ಬಳಿ ಇರುವ ಭೂಮಿಯು ಉಳಿಯುವ ಲಕ್ಷಣವಿಲ್ಲ. ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯಿಂದಾಗಿ ಕೃಷಿ ಜಮೀನಿನ ಮೇಲೆ ಕಪ್ಪು ಹಣ ಹೂಡಿಕೆಯಾಗಲಿದೆ. ರೈತರ ಹೆಸರಿನಲ್ಲಿ ಬಂಡವಾಳಶಾಹಿಗಳಿಗೆ, ಕಾರ್ಮಿಕರ ನೆಪದಲ್ಲಿ ಕೈಗಾರಿಕೋದ್ಯಮಗಳಿಗೆ ಸರ್ಕಾರ ಪರೋಕ್ಷವಾಗಿ ಸಹಾಯ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅದೇ ರೀತಿ ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದ ಬಹುರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆಗೆ ಬರುವಂತಾಗಿದ್ದು, ಎಪಿಎಂಸಿಯ ಆಸ್ತಿಯನ್ನು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಸ್ಥಳೀಯ ಬಂಡವಾಳಶಾಹಿಗಳಿಗೆ ಹಂಚುವ ಹುನ್ನಾರ ನಡೆಸಲಾಗುತ್ತಿದೆ. 1961 ರಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದ ಮೇಲೆ ಭೂಮಿ ಹೆಚ್ಚು ಕೃಷಿಗೆ ಮೀಸಲಾಗಿತ್ತು, ಈಗಾಗಿ ಈ ಕೃಷಿ ಭೂಮಿಯನ್ನು ರೈತರು ಮತ್ತೊಬ್ಬರಿಗೆ ವರ್ಗಾಯಿಸುವ ಮುನ್ನ ಕೃಷಿ ಆದ್ಯತೆಯನ್ನು ಕಳೆದುಕೊಳ್ಳಬಾರದೆಂದು ಕಾಯ್ದೆಯನ್ನು ರೂಪಿಸಲಾಗಿತ್ತು. ಆದರೆ ಈಗ ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ರೈತರನ್ನು ಒಕ್ಕಲುತನದಿಂದ ಹೊರಹಾಕಿ ಖಾಸಗಿ ಕಂಪನಿಗಳಿಗೆ ಮತ್ತು ಬಂಡವಾಳದಾರರಿಗೆ ಕೃಷಿ ಭೂಮಿಯನ್ನು ವರ್ಗಾಯಿಸುವ ಕುತಂತ್ರವಾಗಿದೆ. ಈ ಕಾಯ್ದೆಯಿಂದಾಗಿ ರಾಜ್ಯದಲ್ಲಿ ಸುಮಾರು 80 ರಷ್ಟು ಸಣ್ಣ ರೈತರು ಮೊದಲ ಹಂತದಲ್ಲಿ ಕೃಷಿ ಕ್ಷೇತ್ರದಿಂದ ಕಣ್ಮರೆಯಾಗುತ್ತಾರೆ. 2ನೇ ಹಂತದಲ್ಲಿ ರೈತರ ಭೂಮಿಯನ್ನು ಕರಾರು ಪತ್ರಗಳ ಮೂಲಕ ಕಾರ್ಪೋರೇಟ್ ಕಂಪನಿಗಳು ಒತ್ತೆ ಇಟ್ಟುಕೊಳ್ಳುತ್ತವೆ ತದನಂತರ ರೈತರು ಗೇಣಿದಾರರಾಗಿ ಕೃಷಿಯಿಂದ ವಿಮುಕ್ತಿಗೊಳಿಸುವ ಹುನ್ನಾರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ದೇಶದ ಬಡ ಜನರಿಗೆ ಬೆಳಕು ಸಿಗಲಿ ಎಂದು ಭಾಗ್ಯಜ್ಯೋತಿ ಕುಟೀರ ಜ್ಯೋತಿ ಎಂದು ಯೋಜನೆಗಳನ್ನು ತರಲಾಗಿತ್ತು. ಈ ಯೋಜನೆಗಳು ಇನ್ನು ಮುಂದೆ ಇರುವುದಿಲ್ಲ. ರೈತರ ಪಂಪ್‍ಸೆಟ್‍ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ನಿಲ್ಲುತ್ತದೆ. ರೈತರು ಕೃಷಿ ಮಾಡಲು ಕಷ್ಟಗಳನ್ನು ಸೃಷ್ಟಿಸಿ ಒಕ್ಕಲುತನದಿಂದ ಹೊರಹಾಕಿ ಕೃಷಿಯನ್ನು ಕಾರ್ಪೋರೆಟ್‍ರ ಕಂಪನಿಗಳಿಗೆ ವಹಿಸುವ ವ್ಯವಸ್ಥೆ ಸೃಷ್ಟಿಸುತ್ತಿದೆ. ಭಾರತ ಸರ್ಕಾರದ ನಿರ್ದೇಶನದಂತೆ ಕರ್ನಾಟಕ ರಾಜ್ಯ ಸರ್ಕಾರವು ಎ.ಪಿ.ಎಂ.ಸಿ. ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿದೆ. ಇನ್ನು ಮುಂದೆ ವ್ಯಾಪಾರಸ್ಥರು ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ, ಯಾರಿಂದ ಬೇಕಾದರೂ ಖರೀದಿಸಬಹುದು, ಬೆಲೆಯಲ್ಲೂ, ತೂಕದಲ್ಲೂ ಹಣ ಪಾವತಿಯಲ್ಲೂ ರೈತರು ಮೋಸ ಹೋದರೆ ಯಾವುದೇ ಕ್ರಮ ಜರುಗಿಸಲು ಸಾಧ್ಯವಿಲ್ಲ. ಅವರು ನ್ಯಾಯಾಲಯಕ್ಕೆ ಹೋಗುವಂತಿಲ್ಲ. ಅವರು ಎ.ಸಿ ಅಥವಾ ಡಿ.ಸಿ.ಗೆ ದೂರು ನೀಡಬಹುದು. ಈ ತಿದ್ದುಪಡಿಯು ಸಹ ರೈತ ವಿರೋಧಿಯಾಗಿದೆ. ಈ ರೀತಿ ಎಲ್ಲಾ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ರೈತರನ್ನು ಕೃಷಿಯಿಂದ ಒಕ್ಕಲೆಬ್ಬಿಸಿ ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಕಂಪನಿಗೆ ವಹಿಸುವ ವ್ಯವಸ್ತೆಯಾಗಿದೆ. ಜೊತೆಗೆ ರೈತ ಸಂಘಟನೆಗಳ ಹೋರಾಟದಿಂದ 2013 ರಲ್ಲಿ ರೈತರಿಗೆ ಸಮಾದಾನ ತರುವ ರೀತಿಯಲ್ಲಿ ಆಗಿನ ಕೇಂದ್ರ ಸರ್ಕಾರಿ ಭೂ ಸ್ವಾದೀನ ಕಾಯ್ದೆ ತಂದಿತ್ತು. ರೈತರಿಗೆ ಅಪಾಯಕರವಾಗಿ ಈ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಇನ್ನು ಮುಂದೆ ರೈತರ ಒಪ್ಪಿಗೆ ಇಲ್ಲದೆ ರೈತರಿಂದ ಕೃಷಿ ಭೂಮಿಯನ್ನು ಕಿತ್ತುಕೊಳ್ಳಬಹುದು. ಈ ರೀತಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ರೈತರಿಂದ ಭೂಮಿಯನ್ನು ಕಸಿದುಕೊಂಡು ಹೊರದಬ್ಬುವ ಕೆಲಸವಾಗುತ್ತಿದೆ. ಈ ಎಲ್ಲ ಸಮಸ್ಯೆಗಳಿರುವುದರಿಂದಾಗಿ ಮಾನ್ಯ ಮುಖ್ಯಮಂತ್ರಿಗಳು ಅಧಿವೇಶನದಲ್ಲಿ ರೈತವಿರೋಧಿ ಭೂಸುಧಾರಣಾ, ಎಪಿಎಂಸಿ ಹಾಗೂ ವಿದ್ಯುತ್ ಕಾಯಿದೆಗಳ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಬಾರದುರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳ ಹಾಗೂ ರೈತರ ಅಭಿಪ್ರಾಯವನ್ನು ಸಂಗ್ರಹಿಸಿ ಆನಂತರ ಕಾನೂನುಗಳನ್ನು ಜಾರಿಗೆ ತರಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಬಾರ್‍ಕೋಲ್ ಚಳುವಳಿ ಮಾಡುವ ಎಚ್ಚರಿಕೆಯನ್ನು ನೀಡುತ್ತಿದ್ದೇವೆ.
ಮನವಿ ಸ್ವೀಕರಿಸಿದ ಶಿರಸ್ತೆದಾರ್‍ರವರು ನಿಮ್ಮ ಈ ಮನವಿಯನ್ನು ಈ ಕೂಡಲೇ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಈ ಹೋರಾಟದಲ್ಲಿ ವರಮಹಾಲಕ್ಷೀ, ತಾಲ್ಲೂಕಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ತಾಲ್ಲೂಕಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ತೆರ್ನಹಳ್ಳಿ ಆಂಜಿನಪ್ಪ, ಲೋಕೇಶ್, ಮಾಸ್ತಿವೆಂಕಟೇಶ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಸಹದೇವಣ್ಣ, ಮೀಸೆ ವೆಂಕಟೇಶಪ್ಪ, ರಂಜಿತ್, ಸುಪ್ರೀಂಚಲ, ನಾರಾಯಣ, ಬೂದಿಕೋಟೆ ಹರೀಶ್, ಸುದೀಪ್ ಕುಮಾರ್, ಮಣಿ, ಸುನಿಲ್, ರಾಜೇಶ್, ಹರೀಶ್, ದನುಷ್, ಕಾರ್ತಿಕ್, ಮಿಥುನ್, ಚರಣ್, ಪುತ್ತೇರಿ ರಾಜು, ಮುಂತಾದವರಿದ್ದರು
.