ರಾಯಲ್ಪಾಡ್‌ ಹಾಗೂ ಲಕ್ಷ್ಮೀಪುರ ಗ್ರಾಮಗಳಲ್ಲಿ ಅನಧಿಕೃತವಾಗಿ ನಡೆಸಲಾಗುತ್ತಿದ್ದ ಚಿಕಿತ್ಸಾಲಯಗಳಿಗೆ ಆರೋಗ್ಯ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬೀಗ ಮುದ್ರೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ರಾಯಲ್ಪಾಡ್‌ ಹಾಗೂ ಲಕ್ಷ್ಮೀಪುರ ಗ್ರಾಮಗಳಲ್ಲಿ ಅನಧಿಕೃತವಾಗಿ ನಡೆಸಲಾಗುತ್ತಿದ್ದ ಚಿಕಿತ್ಸಾಲಯಗಳಿಗೆ ಆರೋಗ್ಯ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬೀಗ ಮುದ್ರೆ ಹಾಕಿ, ಚಿಕಿತ್ಸಾಲಯ ನಡೆಸಲು ಹೊಂದಿರುವ ದಾಖಲೆಗಳೊಂದಿಗೆ ತಾಲ್ಲೂಕು ಆರೋಗ್ಯಾಧಿಕಾರಿಯನ್ನು ಭೇಟಿಯಾಗುವಂತೆ ಸೂಚಿಸಿ ಬಾಗಿಲಿಗೆ ನೋಟಿಸ್‌ ಅಂಟಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಎಂ.ಸಿ.ವಿಜಯ ಮಾತನಾಡಿ, ಈ ಹಿಂದೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅನಧಿಕೃತ ಚಿಕಿತ್ಸಾಲಯಗಳಿಗೆ ಬೀಗ ಮುದ್ರೆ ಹಾಕಿ, ವೈದ್ಯಕೀಯ ಸೇವೆ ನಡೆಸಲು ತಮ್ಮ ಬಳಿ ಇರುವ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಲಾಗಿತ್ತು. ಆದರೆ ಯಾರೊಬ್ಬರೂ ಸರಿಯಾದ ದಾಖಲೆ ನೀಡಲಿಲ್ಲ. ಬದಲಿಗೆ ಮತ್ತೆ ತಮ್ಮ ಹಿಂದಿನ ಚಾಳಿ ಮುಂದುವರಿಸಿದ್ದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಸತ್ಯಭಾಮ ಅವರು ಅನಧಿಕೃತ ಕ್ಲಿನಿಕ್‌ಗಳಿಗೆ ಬೀಗ ಮುದ್ರೆ ಹಾಕುವಂತೆ ಆದೇಶಿಸಿದ್ದಾರೆ ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂ.ಸಿ.ವಿಜಯ, ಆರೋಗ್ಯ ನಿರೀಕ್ಷಕ ಸುಬ್ರಮಣಿ, ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ನರಸಿಂಹಮೂರ್ತಿ, ಹರೀಶ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.